ಈದಿನ ಸಂಪಾದಕೀಯ | ಮಾಧ್ಯಮದ ಕತ್ತು ಹಿಸುಕಲು ಮೋದಿಯುಗದ ಸನ್ನಾಹ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುದ್ದಿಗಳು ವರದಿಗಳು ವಿಶ್ಲೇಷಣೆಗಳನ್ನು ಫೇಕ್ ನ್ಯೂಸ್ ಎಂದು ನಿರ್ಧರಿಸುವ ಅಧಿಕಾರವನ್ನು ಸರ್ಕಾರಿ ಇಲಾಖೆಯಾದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋಗೆ (ಪಿಐಬಿ) ನೀಡಲು ಹೊರಟಿದೆ ಕೇಂದ್ರ ಸರ್ಕಾರ.

ನಾಯಿಯೊಂದನ್ನು ಗುಂಡಿಕ್ಕಿ ಸಾಯಿಸಬೇಕಿದ್ದರೆ ಅದಕ್ಕೆ ಹುಚ್ಚುನಾಯಿಯೆಂದು ಹಣೆಪಟ್ಟಿ ಹಚ್ಚು ಎಂಬ ಇಂಗ್ಲಿಷ್ ಗಾದೆ ಮಾತೊಂದಿದೆ. ಫೇಕ್ ನ್ಯೂಸ್ ಯಾವುದು ಎಂಬುದನ್ನು ಸರ್ಕಾರವೇ ನಿರ್ಧರಿಸಿ ಅದನ್ನು ತೆಗೆದು ಹಾಕುವ ಅಧಿಕಾರವನ್ನೂ ತನ್ನ ಕೈಗೆ ತೆಗೆದುಕೊಳ್ಳಲು ಮುಂದಾಗಿದೆ. ಐಟಿ ಕಾಯ್ದೆಗೆ ತರಲು ಉದ್ದೇಶಿಸಲಾಗಿರುವ ತಿದ್ದುಪಡಿಯ ಪ್ರಕಾರ, ಫೇಕ್ ನ್ಯೂಸ್ ಯಾವುದೆಂದು ಪಿಐಬಿ ನಿರ್ಧರಿಸಲಿದೆ. ಆನಂತರ ಜಾಲತಾಣದಿಂದ ಅದನ್ನು ತೆಗೆದುಹಾಕಲಿದೆ.

ವಾಕ್ ಸ್ವಾತಂತ್ರ್ಯದ ಮೇಲೆ ನಡೆಸಲು ಹೊರಟಿರುವ ನೇರ ಹಲ್ಲೆಯಿದು. ಸರ್ಕಾರದ ನೀತಿ ನಿರ್ಧಾರಗಳು, ಕಾರ್ಯಕ್ರಮಗಳು, ಸಾಧನೆಗಳು ಹಾಗೂ ಉಪಕ್ರಮಗಳ ಕುರಿತ ಮಾಹಿತಿಯನ್ನು ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಹಂಚುವ ಉದ್ದೇಶಕ್ಕೆಂದೇ ರಚಿಸಲಾಗಿರುವ ಇಲಾಖೆ ಪಿಐಬಿ. ಯಾವುದು ಸರಿ ಮತ್ತು ಯಾವುದು ತಪ್ಪು ಸುದ್ದಿ ಎಂದು ನಿರ್ಧರಿಸುವ ಅಧಿಕಾರವನ್ನು ಇಂತಹ ಇಲಾಖೆಯ ಕೈಗೆ ಒಪ್ಪಿಸುವುದು ಸರ್ವಥಾ ಸಲ್ಲದು. 

ವಿಚಿತ್ರ ವಿಡಂಬನೆಯೊಂದಿದೆ; ದೇಶವನ್ನು ಆಳುತ್ತಿರುವ ಮೋದಿ- ಅಮಿತ್ ಶಾ ಅವರ ಭಾರತೀಯ ಜನತಾ ಪಾರ್ಟಿಯ ಮೂಲ ಅಸ್ತಿತ್ವ ‘ಫೇಕ್ ನ್ಯೂಸ್’ ಪಿಡುಗನ್ನೇ ಆಧರಿಸಿತ್ತು. ನಾಜ಼ಿ ಆಳ್ವಿಕೆಯನ್ನು ನೆನಪಿಸುವ ಈ ಮಹಾನ್ ಪ್ರಾಪಗ್ಯಾಂಡಾ ಫೇಕ್ ನ್ಯೂಸ್‌ನ ಸಮೃದ್ಧ ಉಣಿಸಿನಿಂದಲೇ ಸೊಕ್ಕಿ ಬೆಳೆದದ್ದು. ಇದೀಗ ಈ ಮಾಧ್ಯಮ ತನ್ನ ಬುಡಕ್ಕೇ ಬೆಂಕಿ ಇಕ್ಕುವುದೆಂಬ ಚಿಂತೆ ಆಳುವವರನ್ನು ಕಾಡಿದೆ. 

ಮೊಕದ್ದಮೆಯೊಂದರಲ್ಲಿ ಕಕ್ಷಿದಾರನೊಬ್ಬನನ್ನು ನ್ಯಾಯಾಧೀಶನನ್ನಾಗಿ ನೇಮಕ ಮಾಡುವುದು ಎಷ್ಟು ಅಸಂಬದ್ಧವೋ  ಅಷ್ಟೇ ಅಸಂಬದ್ಧದ ನಡೆಯಿದು. ತಿಜೋರಿಯ ಕೀಲಿಯನ್ನು ಕಳ್ಳನ ಕೈಗೆ ಇಟ್ಟಂತೆ. ಇಂದಿನ ದಿನಮಾನದಲ್ಲಿ ‘ಫೇಕ್ ನ್ಯೂಸ್’ ಭಾರೀ ದೊಡ್ಡ ಪಿಡುಗಾಗಿ ಬೆಳೆದು ನಿಂತಿರುವುದು ವಾಸ್ತವ. ಕಳೆಯೇ ಬೆಳೆಯಾಗಿಬಿಡುವ ಅನಾಹುತ ಬಾಯ್ತೆರೆದಿದೆ ಹೌದು. ಆದರೆ ಈ ಪಿಡುಗನ್ನು ನಿವಾರಿಸುವ ಎಲ್ಲ ಅಧಿಕಾರವನ್ನು ಸರ್ಕಾರ ತನ್ನ ಕೈಗೆ ತೆಗೆದುಕೊಳ್ಳುವುದು ಜನತಂತ್ರಕ್ಕೆ ಮಾರಕ.

ನಿರ್ದಿಷ್ಟ ಫೇಕ್ ನ್ಯೂಸ್ ತನ್ನ ಹಿತ ಕಾಯುವುದಾದರೆ, ತನ್ನ ಕುರಿತು ಸದಭಿಪ್ರಾಯ ರೂಪಿಸಲು ಸಹಾಯಕ ಆಗುವುದಾದರೆ, ಪ್ರತಿಪಕ್ಷಗಳನ್ನು ಖಳನಾಯಕರನ್ನಾಗಿ ತೋರಿಸುವುದೇ ನಿರ್ದಿಷ್ಟ ಸುದ್ದಿಗಳ ಉದ್ದೇಶವಾಗಿದ್ದರೆ ಅಂತಹವುಗಳ ಮೇಲೆ ಸರ್ಕಾರ ಯಾವುದೇ ಕ್ರಮವನ್ನು ಜರುಗಿಸದೆ ಇರಬಹುದು. ಬದಲಾಗಿ ತನ್ನ ಜನವಿರೋಧಿ ನಡೆನುಡಿಗಳನ್ನು ಕಟು ವಿಮರ್ಶೆಗೆ ಗುರಿ ಮಾಡುವ ವಸ್ತುನಿಷ್ಠ ಟೀಕೆ ಟಿಪ್ಪಣಿಗಳನ್ನು ಫೇಕ್ ನ್ಯೂಸ್ ಎಂದು ಕಿತ್ತು ಹಾಕುವ ದಟ್ಟ ಸಾಧ್ಯತೆಗಳಿವೆ. ಇದೊಂದು ಬಗೆಯ ಸರ್ಕಾರದ ಕಡೆಯಿಂದ ಹಿತ್ತಿಲಬಾಗಿಲ ಸೂಪರ್ ಸೆನ್ಸಾರ್‌ಗೆ ನಡೆಮುಡಿ ಹಾಸಲಿದೆ. ತನಗೆ ಪ್ರತಿಕೂಲವೆನಿಸುವ ಯಾವುದೇ ಟೀಕೆ ವಿಮರ್ಶೆ ಪರಾಮರ್ಶೆಗಳನ್ನು ಯಾವುದಾದರೂ ಬಗೆಯಲ್ಲಿ ಮಟ್ಟ ಹಾಕುವುದು ಪ್ರಭುತ್ವದ ಮೂಲಪ್ರವೃತ್ತಿ. ಹಿಂದಿನ ಸರ್ಕಾರಗಳಲ್ಲೂ ಈ ವಿಕಾರಗಳು ಆಗಾಗ ಕಂಡು ಬಂದಿವೆ. ಆದರೆ ಹಾಲಿ ಸರ್ಕಾರದ ಉದ್ದೇಶಗಳು- ವಿಕೃತಿಗಳು ಹಳೆಯದೆಲ್ಲವನ್ನೂ ಮೀರಿಸಿ ಸದೆಬಡಿವ ದುಷ್ಟ ಇರಾದೆ ಹೊಂದಿವೆ.

ಮೋದಿ ಸರ್ಕಾರ ದೇಶದ ಅಧಿಕಾಂಶ ಸುದ್ದಿವಲಯವನ್ನು ತನ್ನ ವಶಕ್ಕೆ ತೆಗೆದುಕೊಂಡು ಬಹು ಕಾಲವಾಗಿದೆ. ಮೀಡಿಯಾ ಎಂಬುದನ್ನು ‘ಮೋದಿ ಮೀಡಿಯಾ’ ಇಲ್ಲವೇ ‘ಗೋದಿ ಮೀಡಿಯಾ’ ಎಂದು ಕರೆಯುವ ಹೀನಾಯ ಸ್ಥಿತಿಗೆ ಭಾರತೀಯ ಸಮೂಹ ಮಾಧ್ಯಮ ವಲಯ ಕುಸಿದು ಹೋಗಿದೆ. ಮೋದಿ ಸರ್ಕಾರದ ಕಣ್ಣು ಕೆಂಪಾಗಿಸುವ ವರದಿಗಳನ್ನು ಮಾಡುತ್ತಿರುವ ಅಳಿದುಳಿದ ಮಾಧ್ಯಮಗಳನ್ನು ಸಾಮ ದಾನ ದಂಡ ಭೇದಗಳಿಂದ ಪಳಗಿಸಲಾಗುತ್ತಿದೆ. ಕೋಮುವಾದ ಮತ್ತು ಕಟ್ಟರ್ ಹಿಂದುತ್ವವನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದ್ದ ಎನ್‌ಡಿಟಿವಿಯನ್ನು ಮೋದಿಯವರ ಪರಮಮಿತ್ರರೂ ಆಗಿರುವ ಮಹಾಉದ್ಯಮಿ ಗೌತಮ್ ಅದಾಣಿ ಅವರು ಷಡ್ಯಂತ್ರ ರಚಿಸಿ ಖರೀದಿಸಿದ ಇತ್ತೀಚಿನ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಫೇಕ್ ನ್ಯೂಸ್ ಯಾವುದು ಎಂಬುದನ್ನು ತೀರ್ಮಾನಿಸುವ ಏಕೈಕ ಅಧಿಕಾರ ಸರ್ಕಾರದ ಕೈಯಲ್ಲಿದ್ದರೆ, ಸೆನ್ಸಾರ್‌ಶಿಪ್ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಭಾರತೀಯ ಸಂಪಾದಕರ ಗಿಲ್ಡ್‌ನ ಆತಂಕ ಅತ್ಯಂತ ಸಮರ್ಥನೀಯ. ಸರ್ಕಾರಿ ಇಲಾಖೆಯ ಬದಲು ಸ್ವತಂತ್ರ ಅಥವಾ ಸ್ವಾಯತ್ತ ‘ಫ್ಯಾಕ್ಟ್ ಚೆಕರ್’ ವ್ಯವಸ್ಥೆಯನ್ನು ಸರ್ಕಾರ ಸ್ಥಾಪಿಸಬೇಕು. ಇಲ್ಲವಾದರೆ ಫೇಕ್ ನ್ಯೂಸ್ ಪಿಡುಗನ್ನು ತೊಡೆದು ಹಾಕುವ ನಿಜವಾದ ಕಳಕಳಿ ಸರ್ಕಾರಕ್ಕೆ ಇಲ್ಲವೆಂದೂ, ಪ್ರತಿಕೂಲವಾಗಿ ಟೀಕೆ ಟಿಪ್ಪಣಿಗಳನ್ನು  ಹತ್ತಿಕ್ಕುವುದೊಂದೇ ಅದರ ನಿಜ ಉದ್ದೇಶವೆಂದು ನಂಬಬೇಕಾಗುತ್ತದೆ.

ಕಳೆದ ಹತ್ತು ವರ್ಷಗಳಿಂದ ಟೀವಿ ಮತ್ತು ವೃತ್ತಪತ್ರಿಕೆಗಳಂತಹ ಬಹುತೇಕ ರೂಢಿಗತ ಮಾಧ್ಯಮಗಳು ಪ್ರಭುತ್ವದ ಭಜನಾ ಮಂಡಳಿಗಳಾಗಿಬಿಟ್ಟಿವೆ. ಪ್ರಭುವಿನ ಮುಂದೆ ಮಂಡಿಯೂರಿ ಸಾರಾಸಗಟು ಶರಣಾಗಿಬಿಟ್ಟಿವೆ. ಸಾಮಾಜಿಕ ಜಾಲತಾಣಗಳು- ಡಿಜಿಟಲ್ ಮೀಡಿಯಾ, ಅಂತರ್ಜಾಲ ತಾಣಗಳು ಮಾತ್ರವೇ ಆಳುವವರನ್ನು ಪ್ರಶ್ನಿಸುವ ಬಹುಮೂಲ್ಯ ವೇದಿಕೆಗಳಾಗಿ ಹೊರಹೊಮ್ಮಿವೆ. ಈ ಹೊಸ ಮಾಧ್ಯಮಗಳಲ್ಲಿ ಎದ್ದು ತನ್ನ ಮುಖಕ್ಕೆ ಬಡಿಯುತ್ತಿರುವ ಟೀಕೆ ಟಿಪ್ಪಣಿಗಳನ್ನು ಮಟ್ಟ ಹಾಕುವ ಉದ್ದೇಶವೂ ಈ ಪ್ರಸ್ತಾವಕ್ಕಿರುವುದು ನಿಚ್ಚಳ.

ತನಗೆ ಪ್ರತಿಕೂಲವೆನಿಸುವ ವರದಿಗಳನ್ನು ಸರ್ಕಾರ ತಳ್ಳಿ ಹಾಕುವ ಅಥವಾ ಸ್ಪಷ್ಟೀಕರಣ ನೀಡುವ ರಿವಾಜು ಈಗಾಗಲೆ ಜಾರಿಯಲ್ಲಿದೆ. ಆದರೆ ಸುದ್ದಿಯೊಂದಕ್ಕೆ ‘ಫೇಕ್’ ಎಂಬ ಹಣೆಪಟ್ಟಿಯನ್ನು ಸರ್ಕಾರವೇ ಹಚ್ಚಿ ಅದನ್ನು ತೆಗೆದುಹಾಕಬೇಕೆಂದು ಫರ್ಮಾನು ಹೊರಡಿಸುವುದು ಅಪ್ಪಟ ಸರ್ವಾಧಿಕಾರಿ ನಡೆ. ಸ್ವತಂತ್ರ ಪತ್ರಿಕೋದ್ಯಮದ ಕತ್ತು ಹಿಸುಕುವ ಇಲ್ಲವೇ ಕೈ ಕಾಲಿಗೆ ಸರಪಳಿ ತೊಡಿಸಿ ಬಾಯಿಗೆ ಬೀಗ ಜಡಿಯುವ ದುಷ್ಟ ಸನ್ನಾಹ. ಈ ಕ್ರಮಕ್ಕೆ ಸಂಬಂಧಿಸಿದ ಕರಡು ಐಟಿ ನಿಯಮಗಳ ಪ್ರಸ್ತಾವವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು

ನಿಮಗೆ ಏನು ಅನ್ನಿಸ್ತು?
7 ವೋಟ್
eedina app