ನೀಟ್ ಪರೀಕ್ಷೆಗೆ ಹಾಜರಾಗಲು ಯುವತಿಯರ ಒಳಉಡುಪು ತೆಗೆಸಿದ ವಿವಾದ; ಕೇರಳದಲ್ಲಿ ಪ್ರಕರಣ ದಾಖಲು

  • 17 ವರ್ಷದ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯ ತಂದೆಯಿಂದ ಮಾಹಿತಿ
  • ಭಾರತೀಯ ದಂಡ ಸಂಹಿತೆ ಕಾಯ್ದೆ 354 ಮತ್ತು 509ರ ಅಡಿಯಲ್ಲಿ ಪ್ರಕರಣ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್‌) ಹಾಜರಾಗಿದ್ದ ಯುವತಿಯರಿಗೆ ಒಳಉಡುಪುಗಳನ್ನು ತೆಗೆದು ಪರೀಕ್ಷೆ ಬರೆಯಲು ಹೇಳಿರುವ ಘಟನೆಗೆ ಸಂಬಂಧಿಸಿ ಕೇರಳ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ನೀಟ್ ಪರೀಕ್ಷೆ ಬರೆಯಲು ಹೋದಾಗ ಆಗಿರುವ ಆಘಾತಕಾರಿ ಅನುಭವದಿಂದ ಮಗಳು ಇನ್ನೂ ಹೊರಬಂದಿಲ್ಲ ಎಂದು ಕೊಲ್ಲಂ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯ ತಂದೆ ಮಾಧ್ಯಮಗಳಿಗೆ ಸೋಮವಾರ ತಿಳಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ

ಕೊಲ್ಲಂ ಜಿಲ್ಲೆಯ ಆಯೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವೇಳೆ, ಒಳಉಡುಪು ತೆಗೆಯುವಂತೆ ಹೇಳಿದ ನಂತರ ವಿದ್ಯಾರ್ಥಿನಿ ಮೂರು ಗಂಟೆಗಳ ಕಾಲ ಒಳಉಡುಪು ಇಲ್ಲದೆ ಪರೀಕ್ಷೆ ಬರೆದಿದ್ದಾರೆ. ಅವಹೇಳನ ಆಗುವಂತಹ ಅನುಭವ ಎದುರಿಸಿದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳಾ ಅಧಿಕಾರಿಗಳ ತಂಡವು ಬಾಲಕಿಯ ಹೇಳಿಕೆ ಪಡೆದ ನಂತರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆ 354 (ಹೆಣ್ಣಿನ ಘನತೆ ಕುಂದಿಸುವ ಉದ್ದೇಶದ ಹಲ್ಲೆ ಅಥವಾ ಕ್ರಿಮಿನಲ್ ದಾಳಿ) ಮತ್ತು 509 (ಮಹಿಳೆಯರ ಮಾನಹಾನಿ, ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೇರಳ | ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆಯುವಂತೆ ಹೇಳಿದ ಅಧಿಕಾರಿಗಳು

ಒಳಉಡುಪು ಬಗ್ಗೆ ನಿರ್ದೇಶನವಿಲ್ಲ

“ನೀಟ್‌ನಲ್ಲಿ ನಮೂದಿಸಲಾದ ನಿಯಮಾನುಸಾರದ ವಸ್ತ್ರ ಸಂಹಿತೆಯ ಪ್ರಕಾರ ತನ್ನ ಮಗಳು ಬಟ್ಟೆ ಧರಿಸಿದ್ದಳು ಮತ್ತು ಒಳಉಡುಪುಗಳ ಬಗ್ಗೆ ಏನನ್ನೂ ಹೇಳಿರಲಿಲ್ಲ” ಎಂದು ಸಂತ್ರಸ್ತ ಯುವತಿಯ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನೆ ಖಂಡಿಸಿ ವಿವಿಧ ಯುವ ಸಂಘಟನೆಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೊಲ್ಲಂ ಗ್ರಾಮಾಂತರ ಪೋಲಿಸ್ ವರಿಷ್ಠಾಧಿಕಾರಿಗೆ ಆಯೋಗವು ಸೂಚಿಸಿದೆ.

ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ

ಈ ಸಮಯದಲ್ಲಿ ಕೇರಳದ ಉನ್ನತ ಶಿಕ್ಷಣ ಸಚಿವ ಆರ್ ಬಿಂದು ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ “ನೀಟ್ ಸಂಸ್ಥೆಯ ವಿರುದ್ಧ, ನೀಟ್ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ತಮ್ಮ ಒಳ ಉಡುಪು ತೆಗೆದುಹಾಕಲು ಬಾಲಕಿಯರನ್ನು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಯ ನಿರ್ವಹಣೆ ವಹಿಸಿಕೊಂಡಿರುವ ಸಂಸ್ಥೆಯನ್ನು ನಂಬಿದ್ದಾರೆ. ಆದರೆ, ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಯುವತಿಯರನ್ನು ವಿವಸ್ತ್ರಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ನಡೆ ಬಾಲಕಿಯರ ಘನತೆ ಮತ್ತು ಗೌರವದ ಮೇಲೆ ಬೆತ್ತಲೆ ಹಲ್ಲೆ” ಎಂದು ನಿರಾಶೆ ಮತ್ತು ಆಘಾತ ವ್ಯಕ್ತಪಡಿಸಿರುವುದರ ಬಗ್ಗೆ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಈ ಅನಿರೀಕ್ಷಿತ ಘಟನೆಯಿಂದ ಅವಮಾನ ಮತ್ತು ಆಘಾತವಾಗಿದ್ದು, ವಿದ್ಯಾರ್ಥಿಗಳ ನೈತಿಕತೆ ಮತ್ತು ಸ್ಥೈರ್ಯದ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಪರೀಕ್ಷೆ ಬರೆಯುವ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ನೀಟ್ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಪತ್ರದಲ್ಲಿ ಕೋರಿದ್ದು, ಈ ವಿಚಾರದಲ್ಲಿ ಕೇಂದ್ರ ಸಚಿವರ ಮಧ್ಯಸ್ಥಿಕೆ ಕೋರಿದ್ದಾರೆ.

“ಪರೀಕ್ಷೆಯನ್ನು ನ್ಯಾಯಯುತವಾಗಿ ನಡೆಸುವ ಕೆಲಸ ಮಾತ್ರ ಸಂಸ್ಥೆಗೆ ವಹಿಸಲಾಗಿದೆ. ಇಂತಹ ಅಮಾನವೀಯ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಂಸ್ಥೆಗೆ ಪತ್ರ ಬರೆಯುತ್ತೇನೆ” ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿರುವ ಬಗ್ಗೆಯೂ ವರದಿಯಾಗಿದೆ.

ಆರೋಪ ನಿರಾಕರಿಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ

ನೀಟ್‌ ಪರೀಕ್ಷಾ ಕೇಂದ್ರದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಒಳಉಡುಪುಗಳನ್ನು ತೆಗೆಯುವಂತೆ ಹೇಳಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆರೋಪ ನಿರಾಕರಿಸಿದೆ. ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆಯಾದ ನೀಟ್ ನಡೆಸುವ ಜವಾಬ್ದಾರಿಯನ್ನು ಎನ್‌ಟಿಎ ಹೊಂದಿದೆ.

ಜೊತೆಗೆ ಎನ್‌ಟಿಎ ಮಂಗಳವಾರ ಬೆಳಿಗ್ಗೆ ಮಾಧ್ಯಮಗಳ ಸದಸ್ಯರಿಗೆ ಪ್ರಸಾರ ಮಾಡಿದ ಪತ್ರದಲ್ಲಿ, “ಹೆಣ್ಣು ಮಕ್ಕಳಿಗೆ ಒಳಉಡುಪು ತೆಗೆಸಿದಂತಹ ಘಟನೆ ನಡೆದ ಕೇಂದ್ರದಿಂದ ಯಾವುದೇ ದೂರು ವರದಿಯಾಗಿಲ್ಲ. ಪರೀಕ್ಷೆಯ ಸಮಯದಲ್ಲಿ ಅಥವಾ ನಂತರ ಯಾರಿಗೂ ಯಾವುದೇ ದೂರು ಇರಲಿಲ್ಲ. ಈ ಸಂಬಂಧ ಎನ್‌ಟಿಎ ಯಾವುದೇ ಇಮೇಲ್ ಅಥವಾ ದೂರು ಸ್ವೀಕರಿಸಿಲ್ಲ” ಎಂದು ಹೇಳಿಕೆ ನೀಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್