ರಾಜ್ಯದಲ್ಲಿ ಶಿಕ್ಷಣದಿಂದ ವಂಚಿತರಾದ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು

  • 14 ವರ್ಷದೊಳಗಿನ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದ ಸಮೀಕ್ಷೆ
  • ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್

ರಾಜ್ಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಹೈಕೋರ್ಟ್‌ನ ವಿಚಾರಣೆಯಿಂದ ತಿಳಿದುಬಂದಿದೆ. ಅಕ್ಟೋಬರ್‌ನಲ್ಲಿ 2021ರಿಂದ ಮಾರ್ಚ್‌ 2022ರ ಅವಧಿಯಲ್ಲಿ ನಡೆದ ಸಮೀಕ್ಷೆಯಲ್ಲಿ 14 ವರ್ಷದೊಳಗಿನ 10.12 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆ ಮತ್ತು ಅಂಗನವಾಡಿಗೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ. 

2013ರಲ್ಲಿ ರಾಜ್ಯದ ಉಚ್ಛ ನ್ಯಾಯಾಲಯವು ಶಾಲೆಗಳಿಗೆ ಹೋಗದ ಮಕ್ಕಳ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಅಲ್ಲದೆ, ರಾಜ್ಯದಲ್ಲಿ ಶಾಲೆಗೆ ಹೋಗದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು. 

ಹೈಕೋರ್ಟ್‌ ಸೂಚನೆಯಂತೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಪ್ರಾಧಿಕಾರಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿತ್ತು.

ಸಮಿತಿಯು 2021ರ ಅಕ್ಟೋಬರ್‌ನಿಂದ ಮಾರ್ಚ್‌ 2022ರವರೆಗೆ ಗ್ರಾಮೀಣ ಪ್ರದೇಶ ಮತ್ತು ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ 319 ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಹೋಗದ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಿದೆ.

"ಗ್ರಾಮೀಣ ಭಾಗದಲ್ಲಿ 6ರಿಂದ 14 ವರ್ಷದ 15,338 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಈ ವಯಸ್ಸಿನ ಹತ್ತು ಸಾವಿರ ಮಕ್ಕಳು ಶಾಲೆಗಳಿಗೆ ಪ್ರವೇಶಾತಿಯನ್ನೇ ಪಡೆದಿಲ್ಲ. ಮೂರು ವರ್ಷದೊಳಗಿನ 4.54 ಲಕ್ಷ ಮಕ್ಕಳು ಮತ್ತು ನಾಲ್ಕರಿಂದ ಆರು ವರ್ಷದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ" ಎಂದು ಸಮೀಕ್ಷಾ ವರದಿ ಹೇಳಿದೆ.

ನಗರ ಪ್ರದೇಶದಲ್ಲಿ 18 ವರ್ಷ ವಯಸ್ಸಿಗೂ ಒಳಪಟ್ಟ ಮಕ್ಕಳಿರುವ 33.42 ಲಕ್ಷ ಕುಟುಂಬಗಳಿವೆ. ಆ ಪೈಕಿ, ಶೇ.98.06ರಷ್ಟು ಕುಟುಂಬಗಳ ಸಮೀಕ್ಷೆ ನಡೆದಿದೆ. 13.73 ಲಕ್ಷ ಮಕ್ಕಳು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಇವರಲ್ಲಿ ಮೂರು ವರ್ಷದೊಳಗಿನ 87,921 ಮಕ್ಕಳು, ನಾಲ್ಕರಿಂದ ಆರು ವರ್ಷದೊಳಗಿನ 1.23 ಲಕ್ಷ ಮಕ್ಕಳು ಅಂಗನವಾಡಿಗೆ ನೋಂದಾಯಿಸಿಕೊಂಡಿಲ್ಲ. ಆರರಿಂದ 18 ವರ್ಷದ ಒಟ್ಟು 10.62 ಲಕ್ಷ ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಆರರಿಂದ 14 ವರ್ಷದ 2,798 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಅದೇ ವಯೋಮಾನದ 3,225 ಮಕ್ಕಳು ಶಾಲೆಯಲ್ಲಿ ದಾಖಲಾತಿಯನ್ನೇ ಪಡೆದುಕೊಂಡಿಲ್ಲ.

ಗ್ರಾಮೀಣ ಭಾಗದ ಸಮೀಕ್ಷೆಯಲ್ಲಿ 84.02 ಲಕ್ಷ ಕುಟುಂಬಗಳನ್ನು ಆಯ್ಕೆಮಾಡಿಕೊಂಡಿದ್ದು, ಶೇ.100ರಷ್ಟು ಸಮೀಕ್ಷೆ ನಡೆದಿದೆ. 18 ವರ್ಷದೊಳಗಿನ 35.24 ಲಕ್ಷ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಮೂರು ವರ್ಷದೊಳಗಿನ 93 ಸಾವಿರ ಮಕ್ಕಳು ಮತ್ತು ನಾಲ್ಕರಿಂದ ಆರು ವರ್ಷದ 1.07 ಲಕ್ಷ ಮಕ್ಕಳು ಅಂಗನವಾಡಿಗಳಿಗೆ ನೋಂದಾಯಿಸಿಕೊಂಡಿಲ್ಲ. ಆರರಿಂದ 18 ವರ್ಷದೊಳಗಿನ ಒಟ್ಟು 27.11 ಲಕ್ಷ ಮಕ್ಕಳು ಶಾಲೆಗೆ ದಾಖಲಾತಿ ಪಡೆದಿದ್ದಾರೆ. ಆರರಿಂದ 14 ವರ್ಷದ 10,378 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಅದೇ ವಯೋಮಾನದ 5,248 ಮಕ್ಕಳು ಶಾಲೆಯಲ್ಲಿ ದಾಖಲಾತಿಯನ್ನೇ ಪಡೆದುಕೊಂಡಿಲ್ಲ.

ಇದನ್ನು ಓದಿದ್ದೀರಾ? ಒಂದು ನಿಮಿಷದ ಓದು | ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಹೆಚ್ಚಾದ ಅರ್ಜಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 26.57 ಲಕ್ಷ ಕುಟುಂಬಗಳು ಸಮೀಕ್ಷೆಗೆ ಒಳಗಾಗಿದ್ದು, ಶೇ.106ರಷ್ಟು ಸಮೀಕ್ಷೆ ನಡೆದಿದೆ. 18 ವರ್ಷದೊಳಗಿನ 17.70 ಲಕ್ಷ ಮಕ್ಕಳನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅವರಲ್ಲಿ ಮೂರು ವರ್ಷದೊಳಗಿನ 2.73 ಲಕ್ಷ ಮಕ್ಕಳು ಮತ್ತು ನಾಲ್ಕರಿಂದ ಆರು ವರ್ಷದೊಳಗಿನ 3.02 ಲಕ್ಷ ಮಕ್ಕಳು ಅಂಗನವಾಡಿಗಳಲ್ಲಿ ನೋಂದಾಯಿಸಿಕೊಂಡಿಲ್ಲ. ಆರರಿಂದ 18 ವರ್ಷದ 11.83 ಲಕ್ಷ ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದಾರೆ. ಆರರಿಂದ 14 ವರ್ಷದೊಳಗಿನ 2,162 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ, ಈ ವಯಸ್ಸಿನ 1,545 ಮಕ್ಕಳು ಶಾಲೆಯಲ್ಲಿ ದಾಖಲಾತಿ ಪಡೆದಿಲ್ಲ. 

ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠವು, 2013ರಲ್ಲಿ ದಾಖಲಾಗಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿತ್ತು. ವಿಚಾರಣೆ ವೇಳೆ ಹಿರಿಯ ಸರ್ಕಾರಿ ವಕೀಲ ಕೆ ಎನ್ ಫಣೀಂದ್ರ ಅವರು ಸಮೀಕ್ಷಾ ವರದಿಯನ್ನು ನ್ಯಾಯಪೀಠಕ್ಕೆ ನೀಡಿದರು.

ವರದಿಯನ್ನು ಪರಿಶೀಲಿಸಿರುವ ನ್ಯಾಯಪೀಠವು, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಚಿಸಿರುವ ಉನ್ನತಾಧಿಕಾರಿ ಸಮಿತಿಯು ಇದೇ 16ರಂದು ಸಭೆ ನಡೆಸಬೇಕು. ಜೊತೆಗೆ ಶಾಲೆ ಮತ್ತು ವಿಶೇಷವಾಗಿ ಅಂಗನವಾಡಿಗಳಿಂದ ಹೊರಗುಳಿದಿರುವ ಮೂರರಿಂದ ಆರು ವರ್ಷದೊಳಗಿನ ಮಕ್ಕಳನ್ನು ಅಂಗನವಾಡಿಗಳಿಗೆ ಕರೆತರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಬೇಕು” ಎಂದು ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು 19ನೇ ತಾರೀಖಿಗೆ ಮುಂದೂಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್