ಸುದ್ದಿ ವಿವರ | ತಮಿಳುನಾಡು ಬಾಲಕಿ ಸಾವು; ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿ ಪ್ರಚಾರದಿಂದ ಹಿಂಸಾಚಾರ

  • ಬಾಲಕಿ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ನಾಲ್ವರನ್ನು ಬಂಧಿಸಿದ ಪೋಲಿಸರು
  • ಹಿಂಸಾಚಾರದ ಪ್ರತಿಭಟನೆಯಲ್ಲಿ 20 ಬಾಲಾಪರಾಧಿ ಸೇರಿ 300 ಆರೋಪಿಗಳ ಬಂಧನ

ವಿದ್ಯಾರ್ಥಿನಿಯ ಸಾವಿಗೆ ಸಂಬಂಧಿಸಿ ತಮಿಳುನಾಡಿನ ಕಲ್ಲುಕುರಿಚಿಯ ಚಿನ್ನಸೇಲಂ ನಗರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಹಿಂಸಾಚಾರಕ್ಕೆ ಸಂಬಂಧಿಸಿ ತಮಿಳುನಾಡಿನ ಪೋಲಿಸರು 20 ಬಾಲಾಪರಾಧಿಗಳು ಸೇರಿದಂತೆ 300 ಆರೋಪಿಗಳನ್ನು ಜುಲೈ 18ರಂದು ಬಂಧಿಸಿದ್ದಾರೆ. ಹಿಂಸಾಚಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಾಲಾ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿದೆ. 

ಸುಳ್ಳು ಸುದ್ದಿಯಿಂದ ಹಿಂಸಾಚಾರ

17 ವರ್ಷದ ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯ ವಿಡಿಯೋ ಹಂಚಿಕೆಯಾಗಿದೆ. ಸುಳ್ಳು ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ನೂರಾರು ಮಂದಿ ಜುಲೈ 17ರಂದು 'ಕಣಿಯಮೂರ್ ಶಕ್ತಿ ಮೆಟ್ರಿಕ್ಯುಲೇಷನ್ ಶಾಲೆಯ' ಬಳಿ ಪ್ರತಿಭಟನೆಗೆ ಮುಂದಾದರು. ಪ್ರತಿಭಟನಾಕಾರರು ಶಾಲೆಗೆ ನುಗ್ಗಿ ಅನೇಕ ಶಾಲಾ ಬಸ್ಸುಗಳು ಸೇರಿದಂತೆ ಇತರ ವಾಹನಗಳಿಗೂ ಬೆಂಕಿ ಹಚ್ಚಿದ್ದರಿಂದ ಪ್ರತಿಭಟನೆ, ಹಿಂಸಾತ್ಮಕ ಸ್ವರೂಪ ಪಡೆದಿತ್ತು. ಜೊತೆಗೆ ಕೆಲ ಕಟ್ಟಡಗಳಿಗೂ ಬೆಂಕಿ ಹಚ್ಚಲಾಗಿದೆ. 

“37 ಶಾಲಾ ಬಸ್ಸುಗಳು, ಕಾರುಗಳು ಹಾಗೂ ಟ್ರ್ಯಾಕ್ಟರ್‌ಗಳು ಸೇರಿದಂತೆ ಒಟ್ಟು 67 ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಪೊಲೀಸ್ ವಾಹನಗಳು ಸೇರಿದಂತೆ 48 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ. ನ್ಯಾಯ ಕೇಳುವ ಉದ್ದೇಶವಿದ್ದರೆ, ವಸ್ತುಗಳನ್ನು ಏಕೆ ಸುಡಬೇಕು. ಹಿಂಸಾಚಾರದಿಂದ ಸುಮಾರು 100 ಜನರು ಗಾಯಗೊಂಡಿದ್ದಾರೆ” ಎಂದು ತಮಿಳುನಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕೋಪಯೋಗಿ, ಹೆದ್ದಾರಿ ಹಾಗೂ ಸಣ್ಣ ಬಂದರುಗಳ ಸಚಿವ ಇ ವಿ ವೇಲು ಅವರು ತಿಳಿಸಿದ್ದಾರೆ.

ವೈರಲ್ ಆದ ನಕಲಿ ವಿಡಿಯೋ

ಮತ್ತೊಂದೆಡೆ, ಪ್ರತಿಭಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋವನ್ನು ಕಳ್ಳಕುರಿಚಿ ಪೊಲೀಸರು ಸುಳ್ಳು ಎಂದು ತಿಳಿಸಿದ್ದಾರೆ. ಪೊಲೀಸರು ಸುಳ್ಳು ಸುದ್ದಿಯ ವಿಡಿಯೋ ತುಣುಕಿನ ‘ಸ್ಕ್ರೀನ್‌ಶಾಟ್’ ಅನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಾತ್ರಿ ಶಾಲೆಯ ಆವರಣದಲ್ಲಿ ನಡೆದು ಸಾಗುತ್ತಿರುವುದನ್ನು, ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿ ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಸೇಲಂನ ಶಾಲೆಯೊಂದರಿಂದ 'ಲ್ಯಾಪ್‌ಟಾಪ್‌' ಕದಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ಸಿಸಿಟಿವಿ ದೃಶ್ಯವದು ಎಂದು ತನಿಖೆಯಿಂದ ತಿಳಿದಿದೆ. "ಪ್ರತಿಭಟನೆಗಾಗಿ ಕೆಲವರು ವಿದ್ಯಾರ್ಥಿನಿಯ ಸಾವಿಗೂ  ವಿಡಿಯೋಗೂ ಸಂಬಂಧವಿದೆಯೆಂದು ಸುಳ್ಳು ಸುದ್ದಿ ಹರಡಿಸಿದ್ದರು. ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. 

ವಿದ್ಯಾರ್ಥಿನಿ ಸಾವಿಗೆ ಶಾಲೆಯ ಮೇಲೆ ಆರೋಪ

ಸೇಲಂನ ಖಾಸಗಿ ವಸತಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜುಲೈ 13ರಂದು ವಸತಿ ನಿಲಯದಲ್ಲಿ ಶವವಾಗಿ ಪತ್ತೆಯಾಗಿದ್ದಳು. ವಸತಿ ನಿಲಯದ ಮೂರನೇ ಮಹಡಿಯಲ್ಲಿ ವಾಸವಿದ್ದ ಬಾಲಕಿ ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಆತ್ಮಹತ್ಯೆಗೆ ಶಾಲೆಯ ಕಠಿಣ ಶಿಸ್ತು ಕಾರಣ ಎಂದು ಆರೋಪಿಸಿ, ವಿದ್ಯಾರ್ಥಿನಿಯ ಪೋಷಕರು ಮತ್ತು ಕುಟುಂಬದವರು ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಕುಟುಂಬದವರು, "ಲೈಂಗಿಕ ದೌರ್ಜನ್ಯ ಎಸಗಿರುವುದು ಬಾಲಕಿಯ ಸಾವಿಗೆ ಕಾರಣ" ಎಂದು ಆರೋಪಿಸಿದ್ದರು. ಪೋಷಕರು ನಡೆಸುತ್ತಿದ್ದ ಪ್ರತಿಭಟನೆಗೆ ನೂರಾರು ಮಂದಿ ಜೊತೆಗೂಡಿ ದೊಡ್ಡ ಗಲಭೆಯನ್ನೇ ಎಬ್ಬಿಸಿದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

"ಬಾಲಕಿಯ ತಾಯಿ ಜುಲೈ 13ರಂದು ಮಗಳ ಶಾಲೆಗೆ ಬಂದಾಗ ಮಗಳಿದ್ದ ಜಾಗದಲ್ಲಿ ರಕ್ತ ಕಂಡುಬಂದಿದೆ. ಜೊತೆಗೆ ಸ್ಥಳದಲ್ಲಿ ಆಕೆಯ ರಕ್ತದ ಕಲೆಯುಳ್ಳ ಅಂಗೈ ಗುರುತುಗಳು ಸಹ ಕಂಡು ಬಂದಿವೆ" ಎಂದು ಬಾಲಕಿಯ ಪೋಷಕರು ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. 

ಪ್ರಕರಣವನ್ನು ‘ಸೆಂಟ್ರಲ್ ಬ್ಯೂರೋ ಆಫ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್’ಗೆ (ಸಿಬಿ-ಸಿಐಡಿ) ವರ್ಗಾಯಿಸಲಾಗಿದ್ದು, ಮದ್ರಾಸ್ ಹೈಕೋರ್ಟ್ ಜುಲೈ 18ರಂದು ರಿಟ್ ಅರ್ಜಿ ವಿಚಾರಣೆ ನಡೆಸಿದೆ. 

ಕಲ್ಲಾಕುರಿಚಿಯಲ್ಲಿ ಸೋಮವಾರ ನಡೆದ ಹಿಂಸಾಚಾರದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಬೇಸರ ವ್ಯಕ್ತಪಡಿಸಿದ್ದು, “ಹಿಂಸಾಚಾರವು ಅಭಿವೃದ್ಧಿಗೆ ವಿರುದ್ಧವಾಗಿದ್ದು, ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಿಂಸಾಚಾರವು ಅಭಿವೃದ್ಧಿಯ ವಿರುದ್ಧದ ನಡೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಶಾಂತಿಯುತ ವಾತಾವರಣ ಮಾತ್ರ ಎಲ್ಲರಿಗೂ ಒಳ್ಳೆಯದು” ಎಂದು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಕೇರಳ | ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆಯುವಂತೆ ಹೇಳಿದ ಅಧಿಕಾರಿಗಳು

ಸುಳ್ಳು ಸುದ್ದಿ ಹಬ್ಬಿಸಿದವರ ಬಂಧನ

ಈ ಮಧ್ಯೆ ಹಿಂಸಾಚಾರಕ್ಕೆ ಸಂಬಂಧಿಸಿ ಕರೂರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ನಾಲ್ವರನ್ನು ಬಂಧಿಸಲಾಗಿದೆ. ಕಲ್ಲಾಕುರಿಚಿ ಗಲಭೆ ಮತ್ತು ಬಾಲಕಿಯ ಸಾವಿನ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಮತ್ತು ತಪ್ಪು ಮಾಹಿತಿಗಳನ್ನು ಹರಡಿಸಿದಕ್ಕಾಗಿ ನಾಲ್ವರನ್ನು ಸೈಬರ್ ಕ್ರೈಮ್ ಮತ್ತು ಪಶುಪತಿಪಾಳ್ಯಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕ್ರಾಂತಿಕಾರಿ ವಿದ್ಯಾರ್ಥಿ ಯುವ ಮೋರ್ಚಾದ ರಾಜ್ಯ ಖಜಾಂಚಿ ಸುರೇಂದ್ರನ್, ಸದಸ್ಯರಾದ ಶಿವ, ಶಂಕರ್ ಹಾಗೂ ತಮಿಳರಸನ್ ಅವರನ್ನು ಸೋಮವಾರ ಬಂಧಿಸಿ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಅಂಬಿಕಾ ಅವರ ಮುಂದೆ ಹಾಜರುಪಡಿಸಲಾಯಿತು.

"ಗಲಭೆಯಿಂದ ಸಾಧಿಸಿದ ನ್ಯಾಯವೇನು. ಸತ್ಯ ಏನೆಂದು ತಿಳಿಯದೆ ಪ್ರತಿಭಟನೆ ಏಕೆ ಮಾಡಿದ್ದೀರಿ. ಯುವಕರು ಯಾವ ದಿಕ್ಕಿನತ್ತ ಸಾಗುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮುಂದಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಬಹುದೇ? ವಿದ್ಯಾರ್ಥಿ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಬೇಡಿ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಶಾಲಾ ಸಂಘಗಳಿಂದ ಪ್ರತಿಭಟನೆ

ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿ ನಡೆದ ಹಿಂಸಾಚಾರ ಪ್ರತಿಭಟಿಸಿ ಜುಲೈ 18ರಂದು ತಮಿಳುನಾಡಿನ ಖಾಸಗಿ ಶಾಲಾ ಸಂಘಗಳು ಪ್ರತಿಭಟನೆ ನಡೆಸಿದ್ದವು. ಆದರೆ, ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಧರಣಿ ಹಿಂಪಡೆಯಲಾಗಿದೆ. ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೂ ಖಾಸಗಿ ಶಾಲೆಗಳು ಸೋಮವಾರ ತೆರೆದಿದ್ದವು. ಮೆಟ್ರಿಕ್ಯುಲೇಷನ್ ಶಾಲೆಗಳ ನಿರ್ದೇಶನಾಲಯದ ಪ್ರಕಾರ, "ರಾಜ್ಯದಲ್ಲಿ ಶೇ. 91ರಷ್ಟು ಖಾಸಗಿ ಶಾಲೆಗಳು ಸೋಮವಾರ ಕಾರ್ಯನಿರ್ವಹಿಸಿದವು. ಶೇ. 89ರಷ್ಟು ಮೆಟ್ರಿಕ್ಯುಲೇಷನ್ ಶಾಲೆಗಳು, ಶೇ. 95ರಷ್ಟು ನರ್ಸರಿ, ಪ್ರಾಥಮಿಕ ಶಾಲೆಗಳು ಹಾಗೂ ಶೇ. 86ರಷ್ಟು ಸಿಬಿಎಸ್‌ಸಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಶಾಲೆಗಳ ರಕ್ಷಣೆಗೆ ಮನವಿ

ತಮ್ಮ ಶಾಲೆಗಳಿಗೆ ರಕ್ಷಣೆ ನೀಡುವಂತೆ ಕೋರಿ ತಮಿಳುನಾಡಿನ ತಿರುನಲ್ವೇಲಿ ಖಾಸಗಿ ಶಾಲಾ ಸಂಘದ ಸದಸ್ಯರು ಸೋಮವಾರ ನಡೆದ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಜಿಲ್ಲಾಧಿಕಾರಿ ವಿ ವಿಷ್ಣು ಅವರಿಗೆ ಮನವಿ ಸಲ್ಲಿಸಿದರು. ಕಲ್ಲಾಕುರಿಚಿ ಶಾಲೆಯಲ್ಲಿ ಭಾನುವಾರ ನಡೆದ ಹಿಂಸಾಚಾರದಿಂದ ಭಯಬೀತರಾಗಿರುವ ಖಾಸಗಿ ಶಾಲೆಗಳ ಸದಸ್ಯರು ತಮ್ಮ ಶಾಲೆಗಳು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ “ಶಾಲೆಯಲ್ಲಿ ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಯ ಸಂಬಂಧಿಕರು ಅಥವಾ ಗ್ರಾಮಸ್ಥರಂತೆ ವೇಷ ಧರಿಸಿ ಶಾಲೆಯ ಆಸ್ತಿಗಳನ್ನು ದೋಚುವವರು ಇದ್ದಾರೆ. ಆದ್ದರಿಂದ ನಮ್ಮ ಶಾಲೆಗಳಿಗೂ, ಅಧಿಕಾರಿಗಳು ಭದ್ರತೆ ಒದಗಿಸಬೇಕು" ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿ ವಿಷ್ಣು ಅವರು 400ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್