ಉತ್ತರ ಪ್ರದೇಶ | ಉದ್ಯೋಗ ಆದೇಶ ಪತ್ರಕ್ಕೆ ಆಗ್ರಹಿಸಿ ಅಭ್ಯರ್ಥಿಗಳಿಂದ 1068 ಕಿ.ಮೀ ಕಾಲ್ನಡಿಗೆ

  • ನಾಗಪುರದಿಂದ ದೆಹಲಿಗೆ ಹೊರಟವರನ್ನು ಆಗ್ರಾದಲ್ಲಿ ಬಂಧಿಸಿದ ಪೊಲೀಸರು
  • ಸತತ 45 ದಿನ ನಡೆದು 900 ಕಿ.ಮೀ ಕ್ರಮಿಸಿದ್ದ ಅರೆಸೇನಾ ಪಡೆ ಅಭ್ಯರ್ಥಿಗಳು 

“ನಾವು ಮಾಡಿರುವ ತಪ್ಪಾದರೂ ಏನು ಎಂದು ಸರ್ಕಾರ ಹೇಳಲಿ? ಕೆಲಸ ಕೇಳುತ್ತಿರುವುದೇ ತಪ್ಪಾ? ಕಾಲೇಜು ಕಟ್ಟಡದಲ್ಲಿ ತಂಗಿದ್ದ 24 ಯುವತಿಯರನ್ನು ಮಧ್ಯರಾತ್ರಿ ಹೊರಹಾಕಿದ್ದಾರೆ. ಇದು ಯಾವ ನ್ಯಾಯ?” ಹೀಗೆ ಪ್ರಶ್ನಿಸಿದ್ದು ನಾಗಪುರದ ಯುವತಿ.

ಉದ್ಯೋಗಕ್ಕಾಗಿ ಆಗ್ರಹಿಸಿ ನಾಗಪುರದಿಂದ ದೆಹಲಿಗೆ 1068 ಕಿ.ಮೀ ಕಾಲ್ನಡಿಗೆ ಜಾಥಾವನ್ನು ಅರೆಸೇನಾ ಪಡೆ (ಎಸ್ಎಸ್‌ಸಿ ಜಿಡಿ) 2018ರ ಅಭ್ಯರ್ಥಿಗಳು ಹಮ್ಮಿಕೊಂಡಿದ್ದರು. ಅವರು, ಜೂನ್ 1ರಂದು ಮಹಾರಾಷ್ಟ್ರದ ನಾಗ್ಪುರದಿಂದ ಹೊರಟು ಸತತ 46 ದಿನ ನಡೆದು 900 ಕಿ.ಮೀ ಕ್ರಮಿಸಿ ಆಗ್ರಾ ತಲುಪಿದ್ದರು. ಈ ಅಭ್ಯರ್ಥಿಗಳುನ್ನು ಉತ್ತರ ಪ್ರದೇಶದ ಪೊಲೀಸರು ಆಗ್ರಾದಲ್ಲಿ ಬಂಧಿಸಿ 24 ಯುವತಿಯರು ಸೇರಿದಂತೆ ಎಲ್ಲ ಅಭ್ಯರ್ಥಿಗಳನ್ನು ಬಸ್‌ಗಳಲ್ಲಿ ಅವರವರ ಜಿಲ್ಲೆಗಳಿಗೆ ಕಳುಹಿಸಿದ್ದಾರೆ.

ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಕೂಗುತ್ತಾ ಯುವಕ, ಯುವತಿಯರು 46 ದಿನ ನಡೆದಿದ್ದಾರೆ. ಅವರದ್ದು, ಒಂದೇ ಗುರಿ; ದೆಹಲಿ ತಲುಪಿ ನೇಮಕಾತಿ ಆದೇಶ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿತ್ತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದ ಈ ಅಭ್ಯರ್ಥಿಗಳು ಆಗ್ರಾದ ಗುರುದ್ವಾರದಲ್ಲಿ ಮಲಗಿದ್ದಾಗ ಜುಲೈ 16 ರಂದು ಬೆಳಿಗ್ಗೆ 4 ಗಂಟೆಗೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಹಿಂದಕ್ಕೆ ಕಳುಹಿಸಿದ್ದಾರೆ.

2018ರಲ್ಲಿ ಅರೆಸೇನಾ ಪಡೆ (ಎಸ್ಎಸ್‌ಸಿ ಜಿಡಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ 5 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಇಲ್ಲಿಯವರೆಗೆ ನೇಮಕಾತಿ ಆದೇಶ ನೀಡಿಲ್ಲ. ಹಾಗಾಗಿ ಅಹಿಂಸಾತ್ಮಕವಾಗಿ ತಮ್ಮ ಉದ್ಯೋಗ ಕೇಳಲು ಅವರು ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಹೊರಟಿದ್ದರು.

Image

“ಆಗ್ರಾದ ಗುರುದ್ವಾರದ ಕಾಲೇಜೊಂದರಲ್ಲಿ ತಂಗಿದ್ದ ನಮ್ಮನ್ನು ಬೆಳಿಗ್ಗೆ 4 ಗಂಟೆಗೆ ಪೊಲೀಸರು ಹೊರಗೆ ಕಳುಹಿಸಿದರು. ಲಾಠಿ ಮತ್ತು ಬಂದೂಕುಗಳೊಂದಿಗೆ ಬಂದಿದ್ದ ಪೊಲೀಸರು ಬಲವಂತವಾಗಿ ನಮ್ಮನ್ನು ಬಸ್‌ಗೆ ಹತ್ತಿಸಿದರು” ಎಂದು ಅಭ್ಯರ್ಥಿಯೊಬ್ಬರು ಆರೋಪಿಸಿದರು.

“ಗಾಂಧೀಜಿ ಅವರು ಕಾಲ್ನಡಿಗೆಯಲ್ಲಿ ಸಂಚರಿಸಿ ಬ್ರಿಟಿಷರ ಮುಂದೆ ಉಪ್ಪಿನ ಕಾಯಿದೆಯ ವಿರುದ್ಧ ಮಾತನಾಡಬಹುದಾಗಿತ್ತು, ಆದರೆ, ಇಂದು ಚುನಾಯಿತ ಸರ್ಕಾರದ ಎದುರು ನಾವು ನಮ್ಮ ಹಕ್ಕನ್ನು ಕೇಳಲು ಸಾಧ್ಯವಾಗುತ್ತಿಲ್ಲ” ಎಂದು ಕಿಡಿಕಾರಿದರು.

ಮತ್ತೋರ್ವ ಅಭ್ಯರ್ಥಿ ಸುದ್ದಿಗಾರರೊಂದಿಗೆ ಮಾತನಾಡಿ, ''ನಮಗೆ ಊಟದ ವ್ಯವಸ್ಥೆ ಇರಲಿಲ್ಲ, ಜೂನ್ 1 ರಂದು ನಡೆಯಲು ಪ್ರಾರಂಭಿಸಿದೆವು, ದೇಶ ಸೇವೆ ಮಾಡುವ ಉತ್ಸಾಹ ನಮ್ಮಲ್ಲಿದೆ. ಮನೆಯಿಂದ ಹೊರಗೆ ಬಾರದ ಹೆಣ್ಣುಮಕ್ಕಳು ಇಂದು ಉದ್ಯೋಗಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಗಡಿಯಲ್ಲಿ ಸಾಯಲು ಬಯಸುತ್ತೇವೆಯೇ ಹೊರತು ರಸ್ತೆಯಲ್ಲಿ ಅಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಿಂದ ಬಂದಿದ್ದ ರೂಪಾಲಿ ಮಾತನಾಡಿ, "ಕೇಂದ್ರ ಸರ್ಕಾರವು ಬೇಟಿ ಬಚಾವೋ-ಬೇಟಿ ಪಢಾವೋ ಎಂದು ಹೇಳುತ್ತದೆ. ನಾವು 44 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲಿದ್ದೇವೆ, ನಮ್ಮ ಅನೇಕ ಸಹಚರರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅನೇಕರು ತುಂಬಾ ನೋವು ಅನುಭವಿಸಿದ್ದಾರೆ. ನೇಮಕಾತಿ ಆದೇಶ ಇಲ್ಲದೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನೇಮಕಾತಿ ಆದೇಶ ನೀಡಲು ಸರ್ಕಾರ ಯಾಕಿಷ್ಟು ಅಸಡ್ಡೆ ತೋರುತ್ತಿದೆ? ಸರ್ಕಾರ ದೇಶದ ಯುವ ಜನರ ಜತೆಗೆ ಚೆಲ್ಲಾಟವಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ| ಪ್ರಾಣ ಪಣಕ್ಕಿಟ್ಟು ರಭಸವಾದ ನದಿ ದಾಟುವ ಬುಡಕಟ್ಟು ಮಹಿಳೆಯರು!

ಉದ್ಯೋಗ ನೇಮಕಾತಿ ಆದೇಶ ಕೇಳಲು ಹೊರಟವರನ್ನು ಪೊಲೀಸರು ತಡೆದು ಬಂಧಿಸಿ ವಾಪಸ್ ಕಳುಹಿಸಿರುವುದಕ್ಕೆ ದೇಶದೆಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. “ಭಾರತ ದೇಶ 75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ದೇಶದಲ್ಲಿ ಉದ್ಯೋಗ ಕೇಳುವುದೇ ಅಪರಾಧವೇ?”, “ಅವರು ನಡೆದುಕೊಂಡು ಹೋಗುತ್ತಿದ್ದಾಗ, ಅವರ ಮೇಲೆ ಹೂವಿನ ಮಳೆ ಸುರಿಸಲಿಲ್ಲ. ಕಾರಣ ಅವರು ಉದ್ಯೋಗ ಕೇಳುತ್ತಿದ್ದಾರೆ” ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್