ತಮಿಳುನಾಡಿನಲ್ಲಿ ಅತ್ಯಂತ ಕೆಳ ಜಾತಿ ಯಾವುದು; ಪೆರಿಯಾರ್ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ವಿವಾದಾತ್ಮಕ ಪ್ರಶ್ನೆ

  • ವಿವಾದಾತ್ಮಕ ಪ್ರಶ್ನೆಯ ಬಗ್ಗೆ ತನಿಖೆಗೆ ಮುಂದಾದ ಕುಲಪತಿ ಜಗನ್ನಾಥನ್
  • ಎರಡನೇ ಸೆಮಿಸ್ಟರ್‌ನ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ

ತಮಿಳುನಾಡಿನಲ್ಲಿ ಅತ್ಯಂತ ಕೆಳ ಜಾತಿ ಯಾವುದು? ಎಂಬ ಪ್ರಶ್ನೆಯನ್ನು ಪೆರಿಯಾರ್ ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಕೇಳಲಾಗಿದ್ದು, ಬಾರಿ ವಿವಾದಕ್ಕೆ ಕಾರಣವಾಗಿದೆ. ಈ ಪ್ರಶ್ನೆಯನ್ನು ಯಾರು ಸಿದ್ಧಪಡಿಸಿದರು ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಪೆರಿಯಾರ್ ವಿಶ್ವವಿದ್ಯಾಲಯದ ಉಪಕುಲಪತಿ ಜಗನ್ನಾಥನ್ ಅವರು ಹೇಳಿದ್ದಾರೆ. 

ಜಾತಿಗೆ ಸಂಬಂಧಿಸಿದ ಪ್ರಶ್ನೆಯಾದ, “ತಮಿಳುನಾಡಿಗೆ ಸೇರಿದ ಕೆಳಜಾತಿ ಯಾವುದು?” ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆಯ ಉತ್ತರಗಳೊಂದಿಗಿನ ಪ್ರಶ್ನೆಯನ್ನು ಮೊದಲ ವರ್ಷದ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಕೇಳಲಾಗಿದೆ. ಸ್ನಾತಕೋತ್ತರ ಪದವಿಯ ಇತಿಹಾಸದ "ತಮಿಳುನಾಡಿನ ಸ್ವಾತಂತ್ರ್ಯ ಚಳವಳಿ: 1800ರಿಂದ 1947ರವರೆಗೆ' ಎಂಬ ವಿಷಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. 

"ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಪೆರಿಯಾರ್ ವಿಶ್ವವಿದ್ಯಾನಿಲಯವು ಸಿದ್ಧಪಡಿಸಿಲ್ಲ. ಇತರ ವಿಶ್ವವಿದ್ಯಾಲಯ ಮತ್ತು ಕಾಲೇಜು ಉಪನ್ಯಾಸಕರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದಾರೆ. ಸಾಮಾನ್ಯವಾಗಿ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಪ್ಪಿಸಲು, ನಾವು ಪರೀಕ್ಷೆಯ ಮೊದಲು ಪ್ರಶ್ನೆ ಪತ್ರಿಕೆಯನ್ನು ಓದುವುದಿಲ್ಲ. ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ವಿವಾದಾತ್ಮಕ ಪ್ರಶ್ನೆಗೆ ಸಂಬಂಧಿಸಿದಂತೆ, ನಾವು ತನಿಖೆ ನಡೆಸುತ್ತೇವೆ" ಎಂದು ಉಪಕುಲಪತಿಗಳು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿದೆ.

"ನಾವು ಇಂದು ಪ್ರಶ್ನೆ ಪತ್ರಿಕೆ ತಯಾರಿಸಿದ ಪರೀಕ್ಷಾ ನಿಯಂತ್ರಕರಿಂದ ವರದಿ ಕೇಳುತ್ತಿದ್ದೇವೆ. ಮರು ಪರೀಕ್ಷೆಯನ್ನು ನಡೆಸುವ ಬಗ್ಗೆ ನಾವು ನಿರ್ಧಾರ ಮಾಡಿಲ್ಲ" ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್