ಸ್ಯಾಂಡಲ್‌ವುಡ್‌ ಪಯಣ | 'ಶಾಂತಿ ಕ್ರಾಂತಿ'ಯ ಸೋಲಿನಿಂದ ಸಾವಿರ ಕೋಟಿ ಕ್ಲಬ್‌ ಸೇರಿದ 'ಕೆಜಿಎಫ್‌-2' ವರೆಗೆ

1991ರಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಶಾಂತಿಕ್ರಾಂತಿ' ಚಿತ್ರದ ಸೋಲಿನಿಂದ ಸಾವಿರ ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌-2 ಚಿತ್ರದವರೆಗಿನ ಕನ್ನಡದ ಪ್ರಮುಖ ಸಿನಿಮಾಗಳ ಗಳಿಕೆಯ ಲೆಕ್ಕಾಚಾರವನ್ನು ದಾಖಲಿಸಲಾಗಿದೆ.
sandalwood

ಕನ್ನಡದ ಸ್ಟಾರ್‌ ನಟ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಸಿನಿಮಾ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ತೆರೆಕಂಡ ಒಂದೇ ವಾರಕ್ಕೆ ₹150 ಕೋಟಿಗಳನ್ನು ಗಳಿಸಿದೆ. ಈ ಮೂಲಕ ₹100 ಕೋಟಿ ಕ್ಲಬ್‌ ಸೇರಿದ ಕ್ನನಡದ 5ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ವಿಕ್ರಾಂತ್‌ ರೋಣ' ನೂರು ಕೋಟಿ ಕ್ಲಬ್‌ ಸೇರಿದ ಹಿನ್ನೆಲೆ ಕಳೆದ ಮೂರು ದಶಕಗಳಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಕನ್ನಡದ ಸಿನಿಮಾಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

 • 1991- ಶಾಂತಿ ಕ್ರಾಂತಿ

1991ರಲ್ಲಿ ತೆರೆಕಂಡ ಬಹುಕೋಟಿ ವೆಚ್ಚದ 'ಶಾಂತಿ ಕ್ರಾಂತಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬದಲಾವಣೆಯ ಹೊಸ ಅಲೆ ಶುರುವಾಯಿತು ಎನ್ನಬಹುದು. ಬರೋಬ್ಬರಿ ₹10 ಕೋಟಿ ವೆಚ್ಚದಲ್ಲಿ ಏಕಕಾಲಕ್ಕೆ ಬಹುಭಾಷೆಗಳಲ್ಲಿ ಸಿದ್ಧಗೊಂಡಿದ್ದ ಈ ಸಿನಿಮಾ, ಚಿತ್ರಕಥೆಯ ಕಾರಣಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿತು. ರವಿಚಂದ್ರನ್‌ ಅವರ ಈ ಪ್ರಯತ್ನ ನಿರೀಕ್ಷಿಸಿದ ಮಟ್ಟಿಗೆ ಫಲ ನೀಡದಿದ್ದರೂ, ಕನ್ನಡದಲ್ಲೂ ಬಹುಕೋಟಿ ವೆಚ್ಚದ, ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುವ ಸಾಹಸಿಗಳಿದ್ದಾರೆ ಎಂಬ ಸ್ಪಷ್ಟ ಸಂದೇಶ 3 ದಶಕಗಳ ಹಿಂದೆಯೇ ರವಾನೆಯಾಗಿತ್ತು.

Eedina App
 • 2006- ಕನ್ನಡದ ಮೊದಲ ₹50 ಕೋಟಿ ಕ್ಲಬ್‌ ಸಿನಿಮಾ ʼಮುಂಗಾರು ಮಳೆʼ

'ಶಾಂತಿ ಕ್ರಾಂತಿ'ಯಲ್ಲಿ ನಡೆದ ಪ್ರಯೋಗ ಮತ್ತೆ ಕಂಡು ಬಂದಿದ್ದು ಯೋಗರಾಜ್‌ ಭಟ್ಟರ 'ಮುಂಗಾರು ಮಳೆ'ಯಲ್ಲಿ. 2006ರ ಕಾಲಘಟ್ಟಕ್ಕೆ ಹೊಂದುವಂತೆ ₹70 ಲಕ್ಷ ಬಂಡವಾಳದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಬರೋಬ್ಬರಿ ₹67 ಕೋಟಿಗಳನ್ನು ಗಳಿಸಿದೆ ಎನ್ನಲಾಗಿತ್ತು. ಗಣೇಶ್‌ ಆಗಿನ್ನು 'ಚೆಲ್ಲಾಟ' ಸಿನಿಮಾದಲ್ಲಿ ನಟಿಸಿದ್ದರಷ್ಟೇ ಪೂಜಾ ಗಾಂಧಿ ಕೂಡ ಕನ್ನಡಿಗರಿಗೆ ಹೊಸ ಮುಖ. ʼಮಣಿʼ, ʼರಂಗ ಎಸ್‌ಎಸ್‌ಎಲ್‌ಸಿʼ ಸಿನಿಮಾಗಳನ್ನು ನಿರ್ದೇಶಿಸಿದ್ದ ಯೋಗರಾಜ್‌ ಭಟ್‌ ಅಷ್ಟೇನೂ ಹೆಸರು ಮಾಡಿರಲಿಲ್ಲ. ಹೊಸಬರೇ ಸೇರಿಕೊಂಡು ಸೃಷ್ಟಿಸಿದ್ದ 'ಮುಂಗಾರು ಮಳೆ' ಬರೋಬ್ಬರಿ 464 ದಿನಗಳ ಕಾಲ ಪಿವಿಆರ್‌ನಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಷ್ಟೇ ಅಲ್ಲ ₹50 ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

AV Eye Hospital ad
 • 2007 - ₹30 ಕೋಟಿ ಗಳಿಸಿದ್ದ ʼಮಿಲನʼ

'ಮುಂಗಾರು ಮಳೆ'ಯ ಭರ್ಜರಿ ಗೆಲುವಿನ ಬಳಿಕ ಕನ್ನಡದ ಸಿನಿಮಾಗಳ ಮೇಲಿನ ಹೂಡಿಕೆ ಕ್ರಮೇಣ ಹೆಚ್ಚಿತು ಎನ್ನಬಹುದು. 2007ರಲ್ಲಿ ₹5 ಕೋಟಿ ಬಂಡವಾಳದಲ್ಲಿ ನಿರ್ಮಾಣಗೊಂಡಿದ್ದ ಪುನೀತ್‌ ರಾಜ್‌ಕುಮಾರ್‌, ಪಾರ್ವತಿ ಮೆನನ್‌ ಮುಖ್ಯಭೂಮಿಕೆಯ ಮಿಲನ ಸಿನಿಮಾ ₹30 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ ಒಂದರಲ್ಲಿ 600 ದಿನಗಳ ಕಾಲ ಪ್ರದರ್ಶನ ಕಂಡಿದ್ದು ಇಂದಿಗೆ ಇತಿಹಾಸ. 

 • 2014 - ₹50 ಕೋಟಿ ಗಳಿಸಿದ್ದ ʼಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿʼ

ಯಶ್‌ ಮತ್ತು ರಾಧಿಕಾ ಪಂಡಿತ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿʼ ₹50 ಕೋಟಿ ಗಳಿಸಿದ ಕನ್ನಡದ ಎರಡನೇ ಚಿತ್ರ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ₹6 ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿತ್ತು. ಯಶ್‌ ಸಿನಿ ಬದುಕಿನ ಪ್ರಮುಖ ಚಿತ್ರಗಳಲ್ಲಿ ʼಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿʼ ಕೂಡ ಒಂದು.

 • 2014 - ₹4 ಕೋಟಿ ಬಂಡವಾಳದ ʼಕಿರಿಕ್‌ ಪಾರ್ಟಿʼ ಗಳಿಸಿದ್ದು ₹50 ಕೋಟಿ

ರಕ್ಷಿತ್‌ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ತೆರೆಕಂಡ ʼಕಿರಿಕ್‌ ಪಾರ್ಟಿʼ ಸ್ಯಾಂಡಲ್‌ವುಡ್‌ನಲ್ಲಿ ₹50 ಕೋಟಿ ಕ್ಲಬ್‌ ಸೇರಿದ 3ನೇ ಸಿನಿಮಾ. ರಿಷಬ್‌ ಶೆಟ್ಟಿ ನಿರ್ದೇಶನದ ಈ ಚಿತ್ರ ₹4 ಕೋಟಿ ಬಂಡವಾಳದಲ್ಲಿ ಸಿದ್ಧಗೊಂಡಿತ್ತು. 

 • 2017 - ₹60 ಕೋಟಿ ಕಲೆ ಹಾಕಿದ್ದ ʼರಾಜಕುಮಾರʼ

ಪುನೀತ್‌ ರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡ ʼರಾಜಕುಮಾರʼ ಸಿನಿಮಾ ₹60 ಕೋಟಿಗಳನ್ನು ಕಲೆ ಹಾಕಿತ್ತು. ಸಂತೋಷ್‌ ಆನಂದರಾಮ್‌ ನಿರ್ದೇಶನದ ಈ ಚಿತ್ರ ₹20 ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿತ್ತು. ಕೌಟುಂಬಿಕ ಕಥಾಹಂದರದ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು.

 • 2018 - ₹60 ಕೋಟಿ ಬಾಚಿಕೊಂಡಿದ್ದ ʼದಿ ವಿಲನ್‌ʼ

ಸುದೀಪ್‌ ಮತ್ತು ಶಿವರಾಜ್‌ಕುಮಾರ್‌ ಜೊತೆಯಾಗಿ ನಟಿಸಿದ್ದ ʼದಿ ವಿಲನ್‌ʼ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿತ್ತಾದರೂ, ಮಲ್ಟಿ ಸ್ಟಾರರ್‌ ಸಿನಿಮಾ ಎಂಬ ಕಾರಣಕ್ಕೆ 'ದಿ ವಿಲನ್‌' ಬರೋಬ್ಬರಿ ₹60 ಕೋಟಿ ಕಲೆ ಹಾಕಿತ್ತು. 

 • 2019 - ₹90 ಕೋಟಿ ಗಳಿಕೆ ಮಾಡಿದ್ದ ʼಮುನಿರತ್ನ ಕುರುಕ್ಷೇತ್ರʼ

ದರ್ಶನ್‌ ನಟನೆಯ ಪೌರಾಣಿಕ ಕಥಾಹಂದರದ ʼಕುರುಕ್ಷೇತ್ರʼ ಸಿನಿಮಾ ₹90 ಕೋಟಿ ಗಳಿಸಿದೆ ಎನ್ನಲಾಗಿದೆ. ಸಂಗೊಳ್ಳಿ ರಾಯಣ್ಣ ಸಿನಿಮಾವನ್ನು ನಿರ್ದೇಶಿಸಿದ್ದ ಬಿ ನಾಗಣ್ಣ ಕುರುಕ್ಷೇತ್ರ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ದರ್ಶನ್‌, ಅಂಬರೀಶ್‌, ಸೋನು ಸೂದ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿತ್ತು. 

 • 2021 - ₹59.8 ಕೋಟಿ ಗಳಿಸಿದ್ದ ʼರಾಬರ್ಟ್‌ʼ

ದರ್ಶನ್‌ ಅಭಿನಯದಲ್ಲಿ ಮೂಡಿಬಂದಿದ್ದ ರಾಬರ್ಟ್‌ ಸಿನಿಮಾ ₹59.8 ಕೋಟಿ ಗಳಿಕೆ ಮಾಡಿತ್ತು. ತರುಣ್‌ ಸುಧೀರ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು.

₹100 ಕೋಟಿ ಕ್ಲಬ್‌ ಸೇರಿದ ಕನ್ನಡದ ಚಿತ್ರಗಳು

 • 2018 - ₹100 ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಚಿತ್ರ ʼಕೆಜಿಎಫ್‌ ಚಾಪ್ಟರ್‌ - 1ʼ

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ತೆರೆಕಂಡ ಯಶ್‌ ಮುಖ್ಯಭೂಮಿಕೆಯ ʼಕೆಜಿಎಫ್‌ ಚಾಪ್ಟರ್‌-1ʼ ₹100 ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಸಿನಿಮಾ. 

 • 2022 - ₹150 ಕೋಟಿ ಗಳಿಸಿದ್ದ ಅಪ್ಪು ಕೊನೆಯ ಚಿತ್ರ

ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಿನಿಮಾ ʼಜೇಮ್ಸ್‌ʼ ₹100 ಕೋಟಿ ಕ್ಲಬ್‌ ಸೇರಿದ ಕನ್ನಡದ ಎರಡನೇ ಸಿನಿಮಾ. ಚೇತನ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ₹150 ಕೋಟಿಗಳನ್ನು ಗಳಿಕೆ ಮಾಡಿತ್ತು. 

 • 2022 - ಸಾವಿರ ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಸಿನಿಮಾ ʼಕೆಜಿಎಫ್‌ ಚಾಪ್ಟರ್‌ -2ʼ

ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ನಟನೆಯ 'ಕೆಜಿಎಫ್‌ ಚಾಪ್ಟರ್‌ -2' ನೂರು ಕೋಟಿ ಕ್ಲಬ್‌ ಸೇರಿದ ಕನ್ನಡದ ಮೂರನೇ ಮತ್ತು ಸಾವಿರ ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಚಿತ್ರ ವಿಶ್ಯಾದ್ಯಂತ ₹1,198 ಕೋಟಿಗಳನ್ನು ಕಲೆ ಹಾಕಿ ಜಗತ್ತಿನಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಎರಡನೇ ಚಿತ್ರವಾಗಿ ಹೊರ ಹೊಮ್ಮಿದೆ.

 • 2022 - ₹150 ಕೋಟಿ ಗಳಿಸಿದ ʼ777 ಚಾರ್ಲಿʼ

ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ವಿಭಿನ್ನ ಕಥಾಹಂದರದ ʼ777 ಚಾರ್ಲಿʼ ಸಿನಿಮಾ ₹100 ಕೋಟಿ ಕ್ಲಬ್‌ ಸೇರುವಲ್ಲಿ ಯಶಸ್ವಿಯಾಗಿತ್ತು. ₹150 ಕೋಟಿ ಗಳಿಕೆ ಮಾಡಿದ್ದ '777 ಚಾರ್ಲಿ' ಕಿರಣ್‌ ರಾಜ್‌ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು.  

 • 2022 - ತೆರೆಕಂಡ ಒಂದೇ ವಾರಕ್ಕೆ 150 ಕೋಟಿ ಕಲೆ ಹಾಕಿದ 'ವಿಕ್ರಾಂತ್‌ ರೋಣ'

ಇತ್ತೀಚೆಗೆ ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿರುವ, ಸುದೀಪ್‌ ನಟನೆಯ 'ವಿಕ್ರಾಂತ್‌ ರೋಣ' ಸಿನಿಮಾ ₹100 ಕೋಟಿ ಕ್ಲಬ್‌ ಸೇರಿದೆ. ತೆರೆಕಂಡ ಒಂದು ವಾರಕ್ಕೆ ಈ ಚಿತ್ರ ₹110 ಕೋಟಿಗೂ ಅಧಿಕ ಮೊತ್ತವನ್ನು ಗಳಿಕೆ ಮಾಡಿದೆ. 

ನಿಮಗೆ ಏನು ಅನ್ನಿಸ್ತು?
2 ವೋಟ್
eedina app