68ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಘೋಷಣೆ | ತಮಿಳು ನಟ ಸೂರ್ಯಗೆ ಒಲಿದ ರಾಷ್ಟ್ರಪ್ರಶಸ್ತಿ

2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ತಮಿಳು ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು, ದಿವಂಗತ ನಟ ಸಂಚಾರಿ ವಿಜಯ್‌ ಅಭಿನಯದ ತಲೆದಂಡ ಚಿತ್ರಕ್ಕೆ ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ ಪ್ರಶಸ್ತಿ ಲಭಿಸಿದೆ.
suriya

2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ವಿಪುಲ್‌ ಶಾ, ಚಿತ್ರಾರ್ಥ ಸಿಂಗ್‌ ಮತ್ತು ಅನಂತ್‌ ವಿಜಯ್‌, ಪ್ರಿಯದರ್ಶ್‌ ಆನಂದ್‌ ಅವರುಗಳನ್ನು ಒಳಗೊಂಡ ಆಯ್ಕೆ ಸಮಿತಿಯು 68ನೇ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ಗೆದ್ದ ಚಲನಚಿತ್ರಗಳು, ಕಲಾವಿದರು, ತಂತ್ರಜ್ಞರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 • ಸೂರರೈ ಪೊಟ್ರು ಚಿತ್ರದಲ್ಲಿನ ನಟನೆಗಾಗಿ ತಮಿಳಿನ ಖ್ಯಾತ ನಟ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದು ಬಂದಿದೆ. ತಾನಾಜಿ ಚಿತ್ರದಲ್ಲಿನ ನಟನೆಗಾಗಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಸ್ಯಾಂಡಲ್‌ವುಡ್‌/ಕೋಸ್ಟಾಲ್‌ವುಡ್‌

Eedina App
 • ಕನ್ನಡದ ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ʼನಾದದ ನವನೀತʼ ಸಿನಿಮಾಗೆ ʼಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರʼ ಗೆದ್ದುಕೊಂಡಿದೆ.  
 • ಸಂತೋಷ್‌ ಮಾಡಾ ನಿರ್ದೇಶನದ ʼಜೀಟಿಗೆʼ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
 • ದಿವಂಗತ ನಟ ಸಂಚಾರಿ ವಿಜಯ್‌ ಅಭಿನಯದ ʼತಲೆದಂಡʼ ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ ಪ್ರಶಸ್ತಿ ಪಡೆದಿದೆ.
 • ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಅವರ ಪುತ್ರ ಸಾಗರ್‌ ಪುರಾಣಿಕ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ʼಡೊಳ್ಳುʼ ಚಿತ್ರ ಕನ್ನಡದ ಅತ್ಯತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಚಿತ್ರದ ಆಡಿಯೋಗ್ರಫಿಗಾಗಿ ಜೋಬಿನ್‌ ಜಯನ್‌ ಅತ್ಯುತ್ತಮ ಆಡಿಯೋಗ್ರಫಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಾಲಿವುಡ್‌

 • ತಮಿಳಿನ ಸೂರರೈ ಪೊಟ್ರು ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಶಾಲಿನಿ ಉಷಾ ನಾಯರ್‌ ಮತ್ತು ಸುಧಾ ಕೊಂಗಾರ ಅವರಿಗೆ ಲಭಿಸಿದೆ. ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದ ಅಪರ್ಣಾ ಬಾಲಮುರಳಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಜಿ.ವಿ ಪ್ರಕಾಶ್‌ ಕುಮಾರ್‌ ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟಾರೆಯಾಗಿ ಸೂರರೈ ಪೊಟ್ರು ಚಿತ್ರಕ್ಕೆ 5 ರಾಷ್ಟ್ರಪ್ರಶಸ್ತಿಗಳು ಬಂದಿವೆ.
 • ವಸಂತ್‌ ಎಸ್‌. ಸಾಯಿ ನಿರ್ದೇಶನದ ʼಶಿವರಂಜನಿಯುಂ ಇನ್ನುಂ ಸಿಲ ಪೆಂಗಳ್ಳುಂʼ ಚಿತ್ರಕ್ಕೆ ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ದೊರೆತಿದ್ದು, ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದ ಲಕ್ಷ್ಮೀಪ್ರಿಯ ಚಂದ್ರಮೌಳಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಚಿತ್ರದ ಅತ್ಯುತ್ತಮ ʼಎಡಿಟಿಂಗ್‌ʼಗಾಗಿ ಶ್ರೀಕಾರ್‌ ಪ್ರಸಾದ್‌ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.  
 • ಹಾಸ್ಯನಟ ಯೋಗಿಬಾಬು ಮುಖ್ಯಭೂಮಿಕೆಯ ಮಂಡೇಲಾ ಚಿತ್ರದ ನಿರ್ದೇಶನಕ್ಕೆ ಯುವ ನಿರ್ದೇಶಕ ಮಡೊನ್ನೆ ಅಶ್ವಿನ್‌ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಬಂದಿದೆ. 

ಮಾಲಿವುಡ್‌

AV Eye Hospital ad
 • ಮಲಯಾಳಂನ ʼಅಯ್ಯಪ್ಪನುಂ ಕೋಶಿಯುಂʼ ಚಿತ್ರ ಹಲವು ವಿಭಾಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಚಿತ್ರದ ನಿರ್ದೆಶನಕ್ಕಾಗಿ ಸಚ್ಚಿದಾನಂದನ್‌ ಕೆ.ಆರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರೆತಿದೆ. ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದ ಬಿಜು ಮೆನನ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದ್ದು, ಹಿನ್ನೆಲೆ ಗಾಯನಕ್ಕಾಗಿ ಗಾಯಕಿ ನಂಚಮ್ಮ ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಒಲಿದಿದೆ. ಚಿತ್ರದಲ್ಲಿನ ಸಾಹಸ ನಿರ್ದೇಶನಕ್ಕಾಗಿ ರಾಜಶೇಖರ್‌, ಮಾಫಿಯಾ ಶಶಿ ಮತ್ತು ಸುಪ್ರೀಂ ಸುಂದರ್‌ ಅವರುಗಳು ಅತ್ಯುತ್ತಮ ಸಾಹಸ ನಿರ್ದೆಶಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಒಟ್ಟಿನಲ್ಲಿ ʼಅಯ್ಯಪ್ಪನುಂ ಕೋಶಿಯುಂʼ ಚಿತ್ರ 4 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
 • ಪ್ರಸನ್ನ ಸತ್ಯನಾಥ್‌ ಹೆಗ್ಡೆ ನಿರ್ದೇಶನದ ʼತಿಂಗಳಾಯ್ಚ ನಿಶ್ಚಯಂʼ ಚಿತ್ರ ಅತ್ಯುತ್ತಮ ಮಲಯಾಳಂ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
 • ಮಲಯಾಳಂ ʼಕಪ್ಪೇಲಾʼ ಚಿತ್ರದ ಪ್ರೊಡಕ್ಷನ್‌ ʼಡಿಸೈನಿಂಗ್‌ʼಗಾಗಿ ಅನೀಸ್‌ ನಾಡೋಡಿ ಅವರಿಗೆ ಅತ್ಯುತ್ತಮ ʼಪ್ರೊಡಕ್ಷನ್‌ ಡಿಸೈನರ್‌ʼ ಪ್ರಶಸ್ತಿ ದೊರೆತಿದೆ.
 • ಮಲಯಾಳಂ ನಟ ಫಹಾದ್‌ ಫಾಸಿಲ್‌ ಅಭಿನಯದ ʼಮಾಲಿಕ್‌ʼ ಚಿತ್ರದ ʼಆಡಿಯೋಗ್ರಫಿʼಗಾಗಿ ʼರೀ- ರೆಕಾರ್ಡಿಸ್ಟ್‌ʼಗಳಾದ ವಿಷ್ಣು ಗೋವಿಂದ್‌ ಮತ್ತು ಶ್ರೀ ಶಂಕರ್‌ ಅವರಿಗೆ ಅತ್ಯುತ್ತಮ ಆಡಿಯೋಗ್ರಫರ್‌ ಪ್ರಶಸ್ತಿ ಸಿಕ್ಕಿದೆ.   

ಟಾಲಿವುಡ್‌

 • ಸಂದೀಪ್‌ ರೈ ನಿರ್ದೇಶನದ ʼಕಲರ್‌ ಫೋಟೋʼ ಚಿತ್ರಕ್ಕೆ ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿ ಲಭಿಸಿದೆ.
 • ನಾಟ್ಯಂ ಚಿತ್ರದಲ್ಲಿನ ನೃತ್ಯ ನಿರ್ದೇಶನಕ್ಕಾಗಿ ಸಂಧ್ಯಾ ರಾಜು ಅವರಿಗೆ ಅತ್ಯುತ್ತಮ ನೃತ್ಯ ನಿರ್ದೇಶಕಿ ಪ್ರಶಸ್ತಿ ಒಲಿದಿದೆ.
 • ʼಅಲಾ ವೈಕುಂಟಪುರಮ್ಲೋʼ ಚಿತ್ರದ ಸಂಗೀತಕ್ಕಾಗಿ‌ ಥಮನ್‌ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
 • ನಾಟ್ಯಂ ಚಿತ್ರದಲ್ಲಿನ ʼಮೇಕಪ್‌ʼಗಾಗಿ ಟಿ.ವಿ ರಾಮ್‌ಬಾಬು ಅತ್ಯುತ್ತಮ ʼಮೇಕಪ್‌ʼ ಕಲಾವಿದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬಾಲಿವುಡ್‌

 • ಅಜಯ್‌ ದೇವಗನ್‌ ನಟನೆಯ ತಾನಾಜಿ ಚಿತ್ರಕ್ಕೆ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿ ಲಭಿಸಿದ್ದು, ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ನಚಿಕೇತ್‌ ಬಾರ್ವೆ ಮತ್ತು ಮಹೇಶ್‌ ಶೆರ್ಲಾ ಅತ್ಯುತ್ತಮ ವಸ್ತ್ರ ವಿನ್ಯಾಸಕ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಹಿಂದಿಯ ತಾನಾಜಿ ಚಿತ್ರ ಒಟ್ಟು 3 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
 • ಹಿಂದಿಯ ʼಜಸ್ಟೀಸ್‌ ಡಿಲೇಡ್‌ ಬಟ್‌ ಡೆಲಿವರ್ಡ್‌ʼ ಮತ್ತು ʼತ್ರಿ ಸಿಸ್ಟರ್ಸ್‌ʼ ಸಾಕ್ಷ್ಯಚಿತ್ರಗಳಿಗೆ ಸಾಮಾಜಿಕ ಸಮಸ್ಯೆ ಆಧರಿಸಿದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. 
 • ʼ1232 ಕಿ.ಮೀ- ಮರೆಂಗೆ ತೋ ವಹಿ ಜಾಕರ್‌ʼ ಸಾಕ್ಷ್ಯಚಿತ್ರದಲ್ಲಿನ ಸಂಗೀತಕ್ಕಾಗಿ ಅತ್ಯತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರ ಪಾಲಾಗಿದೆ.  
 • ಮೃದುಲ್‌ ತುಳುಸಿದಾಸ್‌ ನಿರ್ದೇಶನದ ʼಜೂನಿಯರ್‌ ತುಳಸಿದಾಸ್‌ ಚಿತ್ರ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಅತ್ಯುತ್ತಮ ಚಿತ್ರಸ್ನೇಹಿ ರಾಜ್ಯಗಳು 

 • ದೇಶದ ಅತ್ಯುತ್ತಮ ಚಲನಚಿತ್ರ ಸ್ನೇಹಿ ರಾಜ್ಯ ಪ್ರಶಸ್ತಿ ಮಧ್ಯಪ್ರದೇಶದ ಪಾಲಾಗಿದೆ. ಚಲನಚಿತ್ರ ಸ್ನೇಹಿ ರಾಜ್ಯ ಪ್ರಶಸ್ತಿಗೆ 13 ರಾಜ್ಯಗಳು ನಾಮನಿರ್ದೇಶನಗೊಂಡಿದ್ದವು. ಈ ಪೈಕಿ ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳನ್ನು ವಿಶೇಷವಾಗಿ ಪರಿಗಣಿಸಲಾಗಿದೆ.   
ನಿಮಗೆ ಏನು ಅನ್ನಿಸ್ತು?
0 ವೋಟ್
eedina app