₹150 ಕೋಟಿ ಗಳಿಸಿದ 777 ಚಾರ್ಲಿ; ದೇಶಿಯ ನಾಯಿಗಳ ಪೋಷಣೆಗೆ ಹಣ ಮೀಸಲಿಟ್ಟ ಚಿತ್ರತಂಡ

777 charlie

ರಕ್ಷಿತ್‌ ಶೆಟ್ಟಿ ಮುಖ್ಯಭೂಮಿಕೆಯ '777 ಚಾರ್ಲಿ' ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. 25 ದಿನ ಕಳೆದರೂ ದೇಶದಾದ್ಯಂತ 450 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. '777 ಚಾರ್ಲಿ' ಭರ್ಜರಿಯಾಗಿ 25 ದಿನಗಳನ್ನು ಪೂರೈಸಿದ ಹಿನ್ನೆಲೆ ಸೋಮವಾರ ಕಲಾವಿದರು, ತಂತ್ರಜ್ಞರು ಸೇರಿದಂತೆ ಇಡೀ ಚಿತ್ರತಂಡ ಜೊತೆಗೂಡಿ ಯಶಸ್ಸಿನ ಸಂಭ್ರಮಾಚರಣೆ ನಡೆಸಿದೆ.    

ಸಂಭ್ರಮಾಚರಣೆಯ ಬಳಿಕ ಚಿತ್ರದ ಗಳಿಕೆಯ ಬಗ್ಗೆ ನಾಯಕ ಮತ್ತು ನಿರ್ಮಾಪಕರೂ ಆದ ರಕ್ಷಿತ್‌ ಶೆಟ್ಟಿ ಮಾಹಿತಿ ನೀಡಿದ್ದು, ಮಹತ್ವದ ಘೋಷಣೆಯನ್ನೂ ಮಾಡಿದ್ದಾರೆ. ತೆರೆಕಂಡ 25 ದಿನಗಳಲ್ಲಿ '777 ಚಾರ್ಲಿ' ಒಟ್ಟಾರೆಯಾಗಿ ₹150 ಕೋಟಿ ಕಲೆ ಹಾಕಿದೆ. ಒಟ್ಟಾರೆ ಗಳಿಕೆಯಲ್ಲಿ ₹90 ರಿಂದ ₹100 ಕೋಟಿ ಮೊತ್ತದ ಹಣ ನಿರ್ಮಾಪಕರ ಪಾಲಿಗೆ ಉಳಿಯಲಿದೆ. ಚಿತ್ರದ ಆದಾಯದಲ್ಲಿ ಶೇ. 5ರಷ್ಟು ಅಂದರೆ ಸುಮಾರು ₹5 ರಿಂದ ₹6 ಕೋಟಿ ರೂಪಾಯಿಗಳಷ್ಟು ಹಣವನ್ನು ಚಾರ್ಲಿ ಹೆಸರಿನಲ್ಲಿ ದೇಶಾದ್ಯಂತ ಇರುವ ದೇಶಿಯ ತಳಿಯ ನಾಯಿ ದತ್ತು ಮತ್ತು ರಕ್ಷಣಾ ಕೇಂದ್ರಗಳಿಗೆ ನೀಡಲಾಗುವುದು" ಎಂದಿದ್ದಾರೆ.

'777 ಚಾರ್ಲಿ' ಸಿನಿಮಾದ ಯಶಸ್ಸನ್ನು ಚಿತ್ರತಂಡದೊಂದಿಗೂ ಹಂಚಿಕೊಳ್ಳಲು ಸಿದ್ಧರಾಗಿರುವ ರಕ್ಷಿತ್‌ ಶೆಟ್ಟಿ, ಚಿತ್ರದ ಆದಾಯದಲ್ಲಿನ ಶೇ. 10 ರಷ್ಟು ಹಣವನ್ನು ಅಂದರೆ ಸುಮಾರು ₹7 ರಿಂದ ₹10 ಕೋಟಿ ರೂಪಾಯಿಗಳನ್ನು ತೆರೆಯ ಹಿಂದೆ ಕೆಲಸ ಮಾಡಿದ 200 ಮಂದಿ ತಂತ್ರಜ್ಞರಿಗೆ ಹಂಚುವುದಾಗಿ ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಕಾಳಿದೇವಿ ಕೈಯಲ್ಲಿ ಸಿಗರೇಟು; ನಿರ್ದೇಶಕಿ ವಿರುದ್ಧ ದೂರು ದಾಖಲು

'777 ಚಾರ್ಲಿ' ದೊಡ್ಡ ಮಟ್ಟದ ಯಶಸ್ಸು ಕಂಡ ಬೆನ್ನಲ್ಲೇ ಬೇರೆ ಭಾಷೆಗಳಲ್ಲಿ ಚಿತ್ರದ ಸ್ಯಾಟಲೈಟ್‌, ಒಟಿಟಿ ಮತ್ತು ರೀಮೇಕ್‌ ಹಕ್ಕುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ ಎಂದು ಸ್ವತಃ ರಕ್ಷಿತ್‌ ಹೇಳಿಕೊಂಡಿದ್ದಾರೆ. ಹಲವೆಡೆಗಳಿಂದ ಚಿತ್ರದ ರೀಮೇಕ್‌, ಒಟಿಟಿ ಮತ್ತು ಸ್ಯಾಟಲೈಟ್‌ ಹಕ್ಕುಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಈಗಾಗಲೇ ನಾವು ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್‌ ಮಾಡಿರುವ ಕಾರಣಕ್ಕೆ ಸದ್ಯಕ್ಕೆ ತಟಸ್ಥವಾಗಿದ್ದೇವೆ. ಚಿತ್ರದ ಸದ್ಯದಲ್ಲೇ ಒಟಿಟಿಯಲ್ಲೂ ಬಿಡುಗಡೆಯಾಗುತ್ತಿದೆ" ಎಂದರು. 

ಮುಂದಿನ ದಿನಗಳಲ್ಲಿ ʼ777 ಚಾರ್ಲಿ-2ʼ ಬರುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಕ್ಷಿತ್‌, ಸದ್ಯಕ್ಕೆ ಚಾರ್ಲಿಯ ಗೆಲುವೇ ಜೀರ್ಣವಾಗಿಲ್ಲ. ಈ ಚಿತ್ರಕ್ಕಾಗಿಯೇ 3 ವರ್ಷ ತೆಗೆದುಕೊಂಡಿದ್ದೇವೆ. ಮುಂದೆ ನಿರ್ದೇಶಕರಿಗೆ ಎರಡನೇ ಭಾಗ ಮಾಡುವ ಮನಸ್ಸಾದರೆ ಖಂಡಿತ ಮಾಡುತ್ತೇವೆ ಎಂದು ʼ777 ಚಾರ್ಲಿ-2 ಬಗ್ಗೆಯೂ ಸುಳಿವು ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್