ಅನಿರುದ್ಧ್‌ಗೆ ಎರಡು ವರ್ಷ ನಟಿಸಲು ಅವಕಾಶ ಕೊಡಲ್ಲ; ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್‌

ನಟ ಅನಿರುದ್ಧ್‌ ಅವರನ್ನು 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಕೈಬಿಡಲಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್‌ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದಾರೆ.
aniruddha jatkar

ಕನ್ನಡ ಕಿರುತೆರೆಯಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿ ಭಾರೀ ಜನಪ್ರಿಯತೆ ಗಳಿಸಿದೆ. ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಈ ಧಾರಾವಾಹಿಯ ತಂಡದಲ್ಲಿ ಸದ್ಯ ಬಿರುಕು ಮೂಡಿದ್ದು, ಮುಖ್ಯಭೂಮಿಕೆಯಲ್ಲಿ ನಿಭಾಯಿಸುತ್ತಿದ್ದ ಹಿರಿಯ ನಟ ದಿವಂಗತ ಡಾ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ್‌ ಅವರನ್ನು ಧಾರಾವಾಹಿಯಿಂದ ಕೈಬಿಡಲಾಗಿದೆ. ಅಷ್ಟೇ ಅಲ್ಲದೆ, 2 ವರ್ಷಗಳ ಕಾಲ ಅನಿರುದ್ಧ್‌ ಅವರಿಗೆ ಕಿರುತೆರೆ ನಿರ್ಮಾಪಕರ ಸಂಘದ ಸದಸ್ಯರು ಬಂಡವಾಳ ಹೂಡುವ ಯಾವುದೇ ಧಾರಾವಾಹಿಗಳಲ್ಲೂ ನಟಿಸಲು ಅವಕಾಶ ನೀಡದಂತೆ ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರೋಮ್ಯಾಂಟಿಕ್ ಕಥಾ ಹಂದರದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದ ಅನಿರುದ್ಧ್‌, ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಅನಿರುದ್ಧ್ ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಈ ಧಾರಾವಾಹಿಯೇ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಎಲ್ಲವೂ ಸರಿ ದಾರಿಯಲ್ಲಿ ಸಾಗುತ್ತಿರುವಾಗಲೇ ಅನಿರುದ್ಧ್ ಮತ್ತು ಧಾರಾವಾಹಿಯ ನಿರ್ದೇಶಕರ ನಡುವೆ ಮನಸ್ತಾಪ ಉಂಟಾಗಿದೆ. ಆದರೆ, ಈ ಮನಸ್ತಾಪ ನಿನ್ನೆ ಮೊನ್ನೆಯದ್ದಲ್ಲ ಎನ್ನುತ್ತಾರೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್‌.

ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಅವರು, "ಎಲ್ಲರೂ ಅನಿರುದ್ಧ್‌ ಅವರನ್ನು ಕಿರುತೆರೆಯಿಂದ ನಿಷೇಧ ಮಾಡಿದ್ದೇವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ನಾವು ಅವರ ಮೇಲೆ ಯಾವುದೇ ನಿಷೇಧ ಹೇರಿಲ್ಲ. ಬದಲಿಗೆ, ಕಿರುತೆರೆ ನಿರ್ಮಾಪಕರೆಲ್ಲ ಒಟ್ಟಾಗಿ ನಾವು ಬಂಡವಾಳ ಹೂಡುವ ಯಾವುದೇ ಧಾರಾವಾಹಿಗಳಲ್ಲೂ ಅವರಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ. ನಿರ್ದೇಶಕ ಆರೂರು ಜಗದೀಶ್‌ಗೆ ಆದಂತಹ ಕಹಿ ಅನುಭವ ಮುಂದೆ ನಮಗೂ ಆಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದರು.  

ಇದಕ್ಕಿದ್ದಂತೆ ಅನಿರುದ್ಧ್‌ ಅವರನ್ನು ಧಾರಾವಾಹಿಯಿಂದ ಹೊರ ಹಾಕಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಧಾರಾವಾಹಿಯಿಂದ ಖ್ಯಾತಿ ಗಳಿಸಿದ ಬಳಿಕ ಅನಿರುದ್ಧ್ ವರ್ತನೆ ಬದಲಾಗಿತ್ತು. ನಿರ್ದೇಶಕರ ಸೂಚನೆಯಂತೆ ನಟಿಸಲು ಅವರು ಒಪ್ಪುತ್ತಿರಲಿಲ್ಲ. ಅನಿರುದ್ಧ್‌ ಅವರ ವರ್ತನೆಯಿಂದ ಆರೂರು ಜಗದೀಶ್‌ ಕೂಡ ಮನನೊಂದಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಜೊತೆ ಜೊತೆಯಲಿ ಧಾರಾವಾಹಿಯ ಸಂಚಿಕೆಗಳನ್ನು ತಾವು ನಿರ್ದೇಶಿಸುವುದನ್ನು ನಿಲ್ಲಿಸಿ, ಸಂಚಿಕೆ ಚಿತ್ರೀಕರಣಕ್ಕೆ ಉತ್ತಮ್‌ ಮಧು ಎಂಬುವವರನ್ನು ಸಹಾಯಕ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದಾರೆ. ಅನಿರುದ್ಧ್‌ ಅವರ ದುರ್ವರ್ತನೆಯ ಕಾರಣಕ್ಕೆ ಜಗದೀಶ್‌ ಜೊತೆ ಜೊತೆಯಲಿ ಧಾರಾವಾಹಿಯ ಸೆಟ್‌ಗೆ ಹೋಗುವುದನ್ನೇ ನಿಲ್ಲಿಸಿದ್ದರು. ಈ ವಿಚಾರಗಳನ್ನು ನಮ್ಮ ಬಳಿ ಹೇಳಿಕೊಂಡು ಜಗದೀಶ್‌ ಹಲವು ಬಾರಿ ಕಣ್ಣೀರಿಟ್ಟಿದ್ದಾರೆ. ಇತ್ತೀಚೆಗೆ ಸಂಭಾಷಣೆಯ ಕಾರಣಕ್ಕೆ ಸಂಚಿಕೆ ನಿರ್ದೇಶನ ಮಾಡುತ್ತಿದ್ದ ಉತ್ತಮ್‌ ಮಧು ಅವರನ್ನೂ ಅನಿರುದ್ಧ್‌ ʼಮೂರ್ಖʼ ಎಂದು ನಿಂದಿಸಿ ಚಿತ್ರೀಕರಣದ ಸೆಟ್‌ನಿಂದ ಹೊರ ನಡೆದಿದ್ದಾರೆ. ಅವರಿಗೆ ಸಂಭಾಷಣೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಪ್ರಧಾನ ನಿರ್ದೇಶಕರ ಜೊತೆ ಕೂತು ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸೆಟ್‌ನಿಂದ ಹೊರ ಹೋಗಿದ್ದು ಎಷ್ಟು ಸರಿ? ನಿರ್ಮಾಪಕರು ಆ ದಿನಕ್ಕೆ ಹೂಡಿದ ಬಂಡವಾಳ ನಷ್ಟ ಆಗುವುದಿಲ್ಲವೇ? ಈ ಎಲ್ಲ ಕಾರಣಗಳಿಂದಾಗಿ ಅನಿರುದ್ಧ್‌ಗೆ ನಮ್ಮ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ" ಎಂದರು.  

ಈ ಬಗ್ಗೆ ಸ್ಪಷ್ಟನೆ ನೀಡಲು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ನಟ ಅನಿರುದ್ಧ್‌, "ನಾನು ದುರಹಂಕಾರದಿಂದ ವರ್ತಿಸಿದ್ದೇನೆ ಎಂದೆಲ್ಲ ನಿರ್ದೇಶಕರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ವಾಸ್ತವವೇ ಬೇರೆ ಇದೆ. ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ಕತೆಯ ವಿಚಾರಕ್ಕೆ ಮಾತ್ರ ನಿರ್ದೇಶಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ. ನಮ್ಮ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯವೇನು ಇರಲಿಲ್ಲ. ಆದರೆ, ಈಗ ನಿರ್ದೇಶಕರು ನನ್ನ ಮೇಲೆ ಆರೋಪಗಳ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ. ಮೂಲ ಸೌಕರ್ಯಗಳನ್ನು ನೀಡದೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸರಿಯಾದ ಸಮಯಕ್ಕೆ ಕೊಡದೆ ಸತಾಯಿಸುತ್ತಿದ್ದರು. ಹಾಗಿದ್ದರೂ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅನಗತ್ಯ ಸಂಭಾಷಣೆಗಳನ್ನು ಹೇಳುವಂತೆ ಸೂಚಿಸಿದಾಗ ಅದನ್ನು ಪ್ರಶ್ನಿಸಿದ್ದು ನನ್ನ ತಪ್ಪೇ? ಈವರೆಗೆ 750ಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರವಾಗಿವೆ. ಅದರಲ್ಲಿ ಎಷ್ಟು ಸಂಚಿಕೆಗಳನ್ನು ಆರೂರು ಜಗದೀಶ್‌ ನಿರ್ದೇಶಿಸಿದ್ದಾರೆ ಎಂದು ಅವರನ್ನೇ ಕೇಳಿ ನೋಡಿ. ಕತೆಯ ವಿಚಾರದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಅವರು ಸರಿ ಪಡಿಸಿದರೆ ನಾನು ಈಗಲೂ ಅವರ ಜೊತೆಗೆ ಕೆಲಸ ಮಾಡಲು ಸಿದ್ಧನಿದ್ದೇನೆ. ಇದನ್ನು ಅವರಿಗೂ ಮತ್ತು ಝೀ ಕನ್ನಡ ವಾಹಿನಿಯವರಿಗೂ ತಿಳಿಸಿದ್ದೇನೆ. ಆದರೆ, ಜಗದೀಶ್‌ ಅವರು ನನ್ನ ಕರೆ ಮತ್ತು ಸಂದೇಶಗಳಿಗೆ ಸ್ಪಂದಿಸುತ್ತಿಲ್ಲ. ಝೀ ಕನ್ನಡ ವಾಹಿನಿಯಿಂದ ನನಗೆ ನೋಟಿಸ್‌ ಕೂಡ ಬಂದಿದೆ. ನನ್ನನ್ನು ಒಂದು ಮಾತು ಕೇಳದೇ ಧಾರಾವಾಹಿಯಿಂದ ಕೈ ಬಿಡುವ ನಿರ್ಧಾರ ಮಾಡಿದ್ದಾರೆ. ಅಭಿಮಾನಿಗಳು ನನ್ನ ಜೊತೆಗಿದ್ದಾರೆ. ನನಗಷ್ಟೇ ಸಾಕು" ಎಂದಿದ್ದಾರೆ.

ಸದ್ಯ ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಈ ಬೆಳವಣಿಯು ಎಲ್ಲಿಯವರೆಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಕಾದು ನೋಡಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180