ಈ ದಿನ ಎಕ್ಸ್‌ಕ್ಲೂಸಿವ್‌ | ಹಲ್ಲೆ ಪ್ರಕರಣ ; ತೆಲುಗು ಧಾರಾವಾಹಿಯಿಂದ ಹೊರಬರಲು ಚಂದನ್‌ ನಿರ್ಧಾರ

ಸಾವಿತ್ರಮ್ಮ ಗಾರಿ ಅಬ್ಬಾಯಿ ಧಾರಾವಾಹಿ ಚಿತ್ರೀಕರಣದ ವೇಳೆ ಸಹಾಯಕ ನಿರ್ದೇಶಕನಿಂದ ಹಲ್ಲೆಗೊಳಗಾಗಿದ್ದ ಕನ್ನಡದ ನಟ ಚಂದನ್‌ ಕುಮಾರ್‍‌ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು ಧಾರಾವಾಹಿಯಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ.
chandan

ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಮಿಂಚಿ ಜನಪ್ರಿಯತೆ ಗಳಿಸಿಕೊಂಡಿರುವ ನಟ ಚಂದನ್‌ ಕುಮಾರ್‌ ಇತ್ತೀಚೆಗೆ ಟಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದರು. ಚಂದನ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ತೆಲುಗಿನ ಧಾರಾವಾಹಿಯೊಂದರ ಚಿತ್ರೀಕರಣದ ಸಂದರ್ಭದಲ್ಲಿ ನಟನ ಮೇಲೆ ಹಲ್ಲೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ.

ಚಂದನ್‌, ತೆಲುಗಿನ ಜನಪ್ರಿಯ ಧಾರಾವಾಹಿ ʼಸಾವಿತ್ರಮ್ಮ ಗಾರಿ ಅಬ್ಬಾಯಿʼ (ಸಾವಿತ್ರಮ್ಮನವರ ಮಗ) ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ  ನಟಿಸುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಈ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಚಂದನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಧಾರಾವಾಹಿಯ ಇಡೀ ತಂತ್ರಜ್ಞರ ತಂಡವೇ ಚಂದನ್‌ ವಿರುದ್ಧ ಜಗಳಕ್ಕಿಳಿದಿದ್ದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಚಿತ್ರೀಕರಣದ ವೇಳೆ ಚಂದನ್‌, ಕ್ಯಾಮೆರಾ ಮ್ಯಾನ್‌ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ಕೋಪಗೊಂಡ ತಂತ್ರಜ್ಞರ ತಂಡದ ಕೆಲವರು ಚಂದನ್‌ ಜೊತೆಗೆ ಜಗಳಕ್ಕಿಳಿದಿದ್ದಾರೆ. ತಂತ್ರಜ್ಞರ ಗುಂಪಿನಲ್ಲಿದ್ದ ಓರ್ವ ನಟನ ಮೇಲೆ ಎರಗಿ ಕಪಾಳಕ್ಕೆ ಹೊಡೆದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.  ಬಳಿಕ ತಂತ್ರಜ್ಞರ ಒತ್ತಡಕ್ಕೆ ಮಣಿದು ಚಂದನ್‌ ಅವರೇ ಸಹಾಯಕ ನಿರ್ದೇಶಕನ ಬಳಿ ಕ್ಷಮೆಯಾಚಿಸಿದ್ದಾರೆ. 

ಈ ಬಗ್ಗೆ ಈ ದಿನ.ಕಾಮ್‌ಗೆ ಚಂದನ್‌ ಪ್ರತಿಕ್ರಿಯೆ ನೀಡಿದ್ದಾರೆ.   

"26ನೇ ತಾರೀಖು ನನ್ನ ತಾಯಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಸೇರಿದ್ದರು. ಅದೇ ಹೊತ್ತಿನಲ್ಲಿ ಧಾರಾವಾಹಿ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಬರುವಂತೆ ಕರೆ ಬಂತು. ಅದರಂತೆ ಮಾರನೇ ದಿನ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ವಿದ್ಯುತ್‌ ಸಮಸ್ಯೆಯಿಂದಾಗಿ ಶೂಟಿಂಗ್‌ ಸ್ಥಗಿತವಾಗಿತ್ತು. ಪ್ರಯಾಣ ಮಾಡಿ ಸುಸ್ತಾಗಿದ್ದರಿಂದ ಶೂಟಿಂಗ್‌ ಆರಂಭವಾದವರೆಗೂ ಸ್ವಲ್ಪ ಹೊತ್ತು ಮಲಗಿಕೊಂಡಿದ್ದೆ. ನಾನು ಮಲಗಿಕೊಂಡಿದ್ದನ್ನು ನೋಡಿದ್ದ ರಂಜಿತ್‌ ಎಂಬ ಸಹಾಯಕ ನಿರ್ದೇಶಕ, ನನ್ನ ಆಪ್ತ ಸಹಾಯಕನ ಎದುರು ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ಕೆಲ ಸಮಯದ ಬಳಿಕ ಈ ಘಟನೆ ನನ್ನ ಗಮನಕ್ಕೆ ಬಂದಿತು. ನಾನು ಆತನನ್ನು ಕರೆದು ವಿಚಾರಿಸಿದಾಗಲೂ ಆತ ಮೊದಲಿನಂತೆ ಏಕವಚನದಲ್ಲೇ ಮಾತನಾಡತೊಡಗಿದ. ಆತ ಮೊದಲ ದಿನಗಳಿಂದ ತರಲೆ ಎಂದು ತಿಳಿದಿದ್ದ ನಾನು ಹೋಗಲಿ ಎಂದು ಸುಮ್ಮನಾದೆ. ನಾನು ಅವರನ್ನು ತಳ್ಳಿದ್ದನ್ನೇ ಹೊಡೆದರು, ಅವಾಚ್ಯವಾಗಿ ನಿಂದಿಸಿದರು ಎಂದೆಲ್ಲ ಸುಳ್ಳು ಕತೆಕಟ್ಟಿ ತಂತ್ರಜ್ಞರ ಮುಂದೆಲ್ಲ ಕಣ್ಣೀರಿಟ್ಟು ರಂಪಾಟ ಮಾಡಿದ್ದಾನೆ. ಅವರೆಲ್ಲರ ಜೊತೆಗೂ ನಾನು ಸಮಾಧಾನದಿಂದಲೇ ಮಾತನಾಡುತ್ತಿದ್ದೆ. ಆ ಹೊತ್ತಿನಲ್ಲಿ ನನ್ನ ಮೇಲೆ ಏಕಾಏಕಿಯಾಗಿ ಹಲ್ಲೆ ನಡೆಸಿದ. ನಾನು ಹೊರಗಿನಿಂದ ಬಂದವನು ಎಂಬ ಕಾರಣಕ್ಕೆ ಎಲ್ಲರೂ ನನ್ನನ್ನು ಸುತ್ತು ವರೆದು ಕ್ಷಮೆ ಕೇಳುವಂತೆ ಮಾಡಿದರು. ನಡೆದಿದ್ದಿಷ್ಟು ನಾನು ಆತನ ಮೇಲೆ ಹಲ್ಲೆ ನಡೆಸಿಲ್ಲ. ಅವಾಚ್ಯವಾಗಿಯೂ ನಿಂದಿಸಿಲ್ಲ. ನನ್ನ ತಪ್ಪೇನೂ ಇಲ್ಲ" ಎಂದು ಹೇಳಿದರು.  

ಈ ಎಲ್ಲ ಬೆಳವಣಿಗೆಗಳ ಬಳಿಕ ಧಾರಾವಾಹಿಯಲ್ಲಿ ಮುಂದುವರೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಘಟನೆಯ ಬಳಿಕ ನಾನು ಧಾರಾವಾಹಿಯಲ್ಲಿ ಮುಂದುವರೆಯುವ ಯೋಚನೆಯಲ್ಲೇ ಇದ್ದೆ. ನಿರ್ದೇಶಕರಿಗೂ ನನಗೂ ಉತ್ತಮ ಬಾಂಧವ್ಯವಿದೆ. ಆದರೆ, ನಮ್ಮ ಕನ್ನಡಪರ ಸಂಘಟನೆಯ ನಾಯಕರುಗಳು ಕರೆ ಮಾಡಿ ಧೈರ್ಯ ಹೇಳಿದರು. ಅವಮಾನ ಮಾಡಿದವರ ಮಧ್ಯೆ ಕೆಲಸ ಮಾಡಬೇಡಿ. ಕನ್ನಡಿಗನಾಗಿ ನಿಮಗೆ ಅವಮಾನವಾದರೆ ನಮಗೂ ಅವಮಾನವಾದಂತೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂದರು. ಜೊತೆಗೆ ನಿರ್ದೇಶಕರು ಕೂಡ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಸ್ಥಳೀಯ ತಂತ್ರಜ್ಞರನ್ನು ಎದುರು ಹಾಕಿಕೊಂಡು, ನನ್ನನ್ನೂ ಉಳಿಸಿಕೊಂಡು ಧಾರಾವಾಹಿಯನ್ನು ಮುಂದುವರೆಸುವುದು ಅವರಿಗೂ ಕಷ್ಟ. ಹೀಗಾಗಿ ಧಾರಾವಾಹಿಯಿಂದ ಹೊರಬರಲು ನಿರ್ಧರಿಸಿದ್ದೇನೆ" ಎಂದರು.   

ಈ ಸುದ್ದಿ ಓದಿದ್ದೀರಾ? ಈ ಸಿನಿಮಾ| ಮಲಯನ್‌ ಕುಂಜು: ಮುನಿದ ಪ್ರಕೃತಿಯ ಎದುರು ಕೇವಲ ಮನುಷ್ಯನೊಬ್ಬನ ಸಾವು ಬದುಕಿನ ಸಂಘರ್ಷದ ಕಥನ!

ʼಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ, ʼಬಿಗ್‌ ಬಾಸ್‌ ಸೀಸನ್‌ 3ʼ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಚಂದನ್‌, ಕನ್ನಡ ಕಿರುತೆರೆಯ ʼರಾಧಾ ಕಲ್ಯಾಣʼ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ʼಲವ್‌ ಯು ಆಲಿಯಾʼ, ʼಪ್ರೇಮ ಬರಹʼ ಸೇರಿದಂತೆ ಹಲವು ಸಿನಿಮಾಗಳಲ್ಲೂ ಕೂಡ ಚಂದನ್‌ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.   

ನಿಮಗೆ ಏನು ಅನ್ನಿಸ್ತು?
0 ವೋಟ್