ದಲಿತರ ಚಿತ್ರಣ ವಿವಾದ; 'ವಿಕ್ರಾಂತ್‌ ರೋಣ' ತಂಡದ ವಿರುದ್ಧ ಚೇತನ್‌ ಆಕ್ರೋಶ

chetan kumar
  • 'ವಿಕ್ರಾಂತ್‌ ರೋಣ' ಸಿನಿಮಾದಿಂದ ನಿರಾಶೆ ಎಂದ ಚೇತನ್‌
  • ಲಾಭಕ್ಕಾಗಿ ಜಾತಿ, ಧರ್ಮವನ್ನು ಬಳಸಬೇಡಿ ಎಂದ ನಟ

ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಸಿನಿಮಾದಲ್ಲಿ ದಲಿತರನ್ನು ದುಷ್ಟರು ಎಂಬಂತೆ ಬಿಂಬಿಸಲಾಗಿದೆ ಎಂಬ ಆರೋಪಗಳು ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೂ ಕೇಳಿ ಬರುತ್ತಿವೆ. ಇದೀಗ ಸ್ಯಾಂಡಲ್‌ವುಡ್‌ ನಟ ಚೇತನ್‌ ಕುಮಾರ್‌ ಕೂಡ 'ವಿಕ್ರಾಂತ್‌ ರೋಣ'ದಲ್ಲಿ ದಲಿತರನ್ನು ದುಷ್ಟರು ಎಂಬಂತೆ ಬಿಂಬಿಸಲಾಗಿದೆ ಎಂದು ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಚೇತನ್, “ವಿಕ್ರಾಂತ್ ರೋಣ ಸಿನಿಮಾವನ್ನು ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ, ದಲಿತರನ್ನು- ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಮರನ್ನು ʼಪೂರ್ವಗ್ರಹಪೀಡಿತವಾಗಿʼ ತೋರಿಸಿದ್ದಾರೆ. ಈ ಸೂಕ್ಷ್ಮವಿಲ್ಲದ ಚಿತ್ರಣದಿಂದ ನಾನು ನಿರಾಶೆಗೊಂಡಿದ್ದೇನೆ. ಸಿನಿಮಾ ನಿರ್ಮಾಣ ಮಾಡುವವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸದೆ ಕೇವಲ ಲಾಭಕ್ಕಾಗಿ ಜಾತಿ, ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು" ಎಂದು ಆಗ್ರಹಿಸಿದ್ದಾರೆ.

ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ವಿಕ್ರಾಂತ್‌ ರೋಣ' ಸಿನಿಮಾ ಕನ್ನಡ ಸೇರಿ 5 ಭಾಷೆಗಳಲ್ಲಿ 30ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡಿದ್ದು, ಮೊದಲ ವಾರ ₹110 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಚಿತ್ರತಂಡ ಚಿತ್ರದ ವಿಜಯ ಯಾತ್ರೆಯನ್ನು ಕೂಡ ಆರಂಭಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್