
ಇತ್ತೀಚೆಗೆ 'ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ್ ಅವರನ್ನು ಕೈ ಬಿಡಲಾಗಿತ್ತು. ಅನಿರುದ್ಧ್ ಮತ್ತು ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಅವರ ನಡುವಿನ ವೈಮನಸ್ಸೇ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಹೊರಗಿಡಲು ಕಾರಣ ಎನ್ನಲಾಗಿತ್ತು.
ಈ ಬಗ್ಗೆ ಎರಡೂ ಕಡೆಯವರು ಸುದ್ದಿಗೋಷ್ಠಿ ನಡೆಸಿ ಒಬ್ಬರ ಮೇಲೋಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಧಾರಾವಾಹಿಯಲ್ಲಿ ಅನಿರುದ್ಧ್ ನಿರ್ವಹಿಸುತ್ತಿದ್ದ ಪಾತ್ರದ ಕಥೆಯೇನು ಎಂಬ ಪ್ರಶ್ನೆಗಳು ಗರಿಗೆದರಿದ್ದವು. ಆರ್ಯವರ್ಧನ್ ಪಾತ್ರದಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಅಥವಾ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್, ಇಲ್ಲವಾದರೆ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಕಾರ್ತಿಕ್ ಜಯರಾಮ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಆರ್ಯವರ್ಧನ್ ಪಾತ್ರವನ್ನು ಕೊನೆಗೊಳಿಸಲು ನಿರ್ಧರಿಸಿದ್ದ ನಿರ್ದೇಶಕ ಆರೂರು ಜಗದೀಶ್ ಇದೀಗ ಧಾರಾವಾಹಿಯ ಕಥೆಗೇ ತಿರುವು ನೀಡಿದ್ದು, ಆರ್ಯವರ್ಧನ್ಗೆ ಸರಿ ಸಮನಾದ ಮತ್ತೊಂದು ಪಾತ್ರವನ್ನು ಹುಟ್ಟು ಹಾಕಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ಪೋಷಕ ನಟ ಹರೀಶ್ ರಾಜ್ ಈ ಹೊಸ ಪಾತ್ರದ ಮೂಲಕ 'ಜೊತೆ ಜೊತೆಯಲಿ' ತಂಡವನ್ನು ಪ್ರವೇಶಿಸಿದ್ದಾರೆ.
ತಾವು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಹರೀಶ್ ರಾಜ್ ಅವರೇ ಈದಿನ.ಕಾಮ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
- ನೀವು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸುದ್ದಿ ನಿಜವೇ?
ನಾನು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವುದು ಸತ್ಯ. ಆದರೆ, ಆರ್ಯವರ್ಧನ್ ಪಾತ್ರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಿರ್ದೇಶಕರು ನನ್ನನ್ನು ಸಂಪರ್ಕಿಸಿ ನಮ್ಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದಿದೆ. ಆ ಪಾತ್ರ ನಿಮಗೆ ಹೊಂದುತ್ತದೆ ಎಂದರು. ಪಾತ್ರದ ಬಗ್ಗೆ ತಿಳಿದುಕೊಂಡ ಮೇಲೆ ನಾನು ನಟಿಸಲು ಒಪ್ಪಿಕೊಂಡೆ. ಧಾರಾವಾಹಿಯಲ್ಲಿ ನಾನು ವಿಶ್ವಾಸ್ ದೇಸಾಯಿ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದೀನಿ. ನನಗೆ ಆರ್ಯವರ್ಧನ್ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
- ಈಗಾಗಲೇ ನಿಮ್ಮ ಪಾತ್ರದ ಪ್ರೋಮೋ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಿಮ್ಮ ಪಾತ್ರದ ಬಗ್ಗೆ ಹೇಳಿ...
ನಾನು ಈ ಹಿಂದೆ ಹೇಳಿದಂತೆ ಧಾರಾವಾಹಿಯಲ್ಲಿ ನನ್ನದು ವಿಶ್ವಾಸ್ ದೇಸಾಯಿ ಎಂಬ ಪಾತ್ರ. ಪ್ರೋಮೋದಲ್ಲಿ ತೋರಿಸಿರುವಂತೆ ವಿದೇಶದಲ್ಲಿ ಬಹುಕೋಟಿ ಉದ್ದಿಮೆಗಳನ್ನು ಹೊಂದಿದ್ದ ವಿಶ್ವಾಸ್ ನಷ್ಟಕ್ಕೊಳಗಾಗಿ 700 ಕೋಟಿ ಸಾಲದ ಹೊರೆ ಹೊತ್ತುಕೊಂಡು ಹುಟ್ಟೂರಿಗೆ ಮರಳುತ್ತಾನೆ. ಸಹಾಯಕ್ಕಾಗಿ ಮೊರೆ ಇಡುವ ಆತನಿಗೆ ಆರ್ಯವರ್ಧನ್ ಆಸರೆಯಾಗುತ್ತಾನೆಯೇ ಎಂಬುದೇ ಸದ್ಯದ ತಿರುವು. ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸಲು ಒಪ್ಪಿದ ಬಳಿಕ ಪ್ರೋಮೋ ಶೂಟ್ನಲ್ಲಿ ಮಾತ್ರ ಭಾಗವಹಿಸಿದ್ದೇನೆ. ಇದಕ್ಕಿಂತ ಹೆಚ್ಚಿನದ್ದು ನನಗೆ ತಿಳಿದಿಲ್ಲ.
- ಇಷ್ಟು ದಿನ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಪ್ರಮುಖವಾಗಿತ್ತು. ಆ ಪಾತ್ರ ಮುಂದುವರೆಯುತ್ತದೆಯೇ? ನಿಮ್ಮ ಪ್ರವೇಶದಿಂದ ಆದ ಬದಲಾವಣೆಗಳೇನು?
ನಿರ್ದೇಶಕರು ವಿಶ್ವಾಸ್ ದೇಸಾಯಿ ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ ಧಾರಾವಾಹಿಯಲ್ಲಿ ನನ್ನದು ಪ್ರಮುಖ ಪಾತ್ರ ಎಂದೇ ಹೇಳಿದ್ದಾರೆ. ಅನಿರುದ್ಧ್ ಮತ್ತು ನಿರ್ದೇಶಕರ ನಡುವಿನ ಮನಸ್ತಾಪ ಹಾಗೂ ಆರ್ಯವರ್ಧನ್ ಪಾತ್ರದ ವಿವಾದದ ಬಗ್ಗೆ ನಾನು ಕೂಡ ಎಲ್ಲರಂತೆ ಮಾಧ್ಯಮಗಳನ್ನು ನೋಡಿ ತಿಳಿದುಕೊಂಡಿದ್ದೇನೆ. ಅದನ್ನು ಹೊರತುಪಡಿಸಿ ಆರ್ಯವರ್ಧನ್ ಪಾತ್ರ ಮುಂದುವರಿಯುತ್ತದೆಯೊ ಇಲ್ಲವೋ ಎಂಬ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಇನ್ನುಮುಂದೆ ನಾನು ನಿರ್ವಹಿಸುವ ವಿಶ್ವಾಸ್ ದೇಸಾಯಿ ಪಾತ್ರವೇ ಧಾರಾವಾಹಿಯ ಪ್ರಮುಖ ಪಾತ್ರ ಎಂದು ನಿರ್ದೇಶಕರು ಹೇಳಿರುವುದರಿಂದ ಚಿತ್ರಕಥೆಯನ್ನು ಯಾವ ರೀತಿ ನಿರೂಪಿಸಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕು.
- ನಿಮ್ಮ ಪಾತ್ರದ ಚಿತ್ರೀಕರಣ ಪ್ರಾರಂಭವಾಗಿದೆಯೇ?
ಇಲ್ಲ, ಸದ್ಯ ಪ್ರೋಮೋ ಚಿತ್ರೀಕರಣ ಮಾತ್ರ ನಡೆದಿದೆ. ಮುಂಬರುವ ಸೆಪ್ಟೆಂಬರ್ನಿಂದ ನಾನು ಅಧಿಕೃತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ.
- 'ಜೊತೆ ಜೊತೆಯಲಿ' ಧಾರಾವಾಹಿಯ ಹೊಸ ಪ್ರೋಮೋ