ಸುದೀಪ್‌ಗೆ ಕೋವಿಡ್‌ ಸೋಂಕು ತಗಲಿಲ್ಲ; ಜಾಕ್‌ ಮಂಜು ಸ್ಪಷ್ಟನೆ

kichcha sudeep
  • ʼವಿಕ್ರಾಂತ್‌ ರೋಣʼ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಸುದೀಪ್‌
  • ವದಂತಿಗೆ ಕಿವಿಗೊಡಬೇಡಿ ಎಂದ ಕಿಚ್ಚನ ಆಪ್ತ ಜಾಕ್‌ ಮಂಜು

ಕನ್ನಡದ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅವರಿಗೆ ಕೋವಿಡ್‌ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಕೆಲ ಮಾಧ್ಯಮಗಳು ಕೂಡ ಸುದೀಪ್‌ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ ಎಂದೇ ವರದಿ ಮಾಡಿವೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಸುದೀಪ್‌ ಅವರ ಆಪ್ತ, 'ವಿಕ್ರಾಂತ್‌ ರೋಣ' ಚಿತ್ರದ ನಿರ್ಮಾಪಕ ಜಾಕ್‌ ಮಂಜು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಾಕ್‌ ಮಂಜು, "ಕಳೆದ ಕೆಲ ದಿನಗಳಿಂದ ಸುದೀಪ್‌ ಅವರು ಬಿಡುವಿಲ್ಲದೆ 'ವಿಕ್ರಾಂತ್‌ ರೋಣ' ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಅಷ್ಟೇ. ಎರಡು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದು ಮತ್ತೆ ಸಿನಿಮಾ ಪ್ರಚಾರಕ್ಕೆ ಮರಳಲಿದ್ದಾರೆ. ಅವರಿಗೆ ಜ್ವರ ಬಂದಿರುವುದನ್ನೇ ಕೋವಿಡ್‌ ಪಾಸಿಟಿವ್‌ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅಭಿಮಾನಿಗಳು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ" ಎಂದಿದ್ದಾರೆ.

ಸುದೀಪ್‌ ಮುಖ್ಯಭೂಮಿಕೆಯ 'ವಿಕ್ರಾಂತ್‌ ರೋಣ' ಸಿನಿಮಾ ಜುಲೈ 28ಕ್ಕೆ ತೆರೆ ಕಾಣಲಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಸಿದ್ಧಗೊಂಡಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಪ್ರಚಾರಕ್ಕಾಗಿ ಸುದೀಪ್‌ ಮತ್ತು 'ವಿಕ್ರಾಂತ್‌ ರೋಣ' ತಂಡ ಮುಂಬೈ, ದೆಹಲಿ, ಕೊಚ್ಚಿ, ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಭೇಟಿ ನೀಡಿತ್ತು. ಸದ್ಯ ಕೊನೆ ಕ್ಷಣದ ಪ್ರಚಾರ ಕಾರ್ಯ ಮಾತ್ರ ಬಾಕಿ ಉಳಿದಿದ್ದು, ಜ್ವರದಿಂದ ಸುಧಾರಿಸಿಕೊಂಡ ಬಳಿಕ ಸುದೀಪ್‌ ಮತ್ತೆ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸ್ಯಾಂಡಲ್‌ವುಡ್‌ಗೆ ಸ್ಟಾರ್‌ ಕಲಾವಿದರನ್ನು ನೀಡಿದ 'ಮೊಗ್ಗಿನ ಮನಸ್ಸು' ಚಿತ್ರಕ್ಕೆ 14ರ ಸಂಭ್ರಮ

'ರಂಗಿತರಂಗ', 'ರಾಜರಥ' ಚಿತ್ರಗಳನ್ನು ನಿರ್ದೇಶಿಸಿದ್ದ ಅನೂಪ್‌ ಭಂಡಾರಿ 'ವಿಕ್ರಾಂತ್‌ ರೋಣ' ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ʼರಾ..ರಾ.. ರಕ್ಕಮ್ಮ..ʼ ʼಹೇಯ್‌ ಫಕೀರ..ʼ ಹಾಡುಗಳು ಈಗಾಗಲೇ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದು, 'ವಿಕ್ರಾಂತ್‌ ರೋಣ' ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್