'ಕೆಮ್ಮಿದ್ದಕ್ಕೆ...' ಸ್ಪಷ್ಟನೆ ನೀಡಿದ ರಿಯಲ್‌ ಸ್ಟಾರ್‌ ಉಪೇಂದ್ರ

upendra
  • ಉಪೇಂದ್ರ ಸ್ಥಿತಿ ಗಂಭೀರ ಎಂದು ಸುದ್ದಿ ಮಾಡಿದ್ದ ಕೆಲ ಟಿವಿ ಮಾಧ್ಯಮಗಳು
  • ಫೇಸ್‌ಬುಕ್‌ನಲ್ಲಿ 'ಲೈವ್‌' ಮೂಲಕ ಸ್ಪಷ್ಟನೆ ನೀಡಿದ ರಿಯಲ್‌ ಸ್ಟಾರ್‌ 

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಉಪೇಂದ್ರ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಲ ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಅನಾರೋಗ್ಯದ ಸುದ್ದಿಗೆ ಸಂಬಂಧಿಸಿ ಸ್ವತಃ ಉಪೇಂದ್ರ ಅವರೇ ಸ್ಪಷ್ಟನೆ ನೀಡಿದ್ದು, ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

'ಉಪೇಂದ್ರ ಆರೋಗ್ಯದಲ್ಲಿ ಏರುಪೇರು' ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಶೂಟಿಂಗ್‌ ಸ್ಥಳದಿಂದಲೇ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಲೈವ್‌ ಬಂದಿರುವ ಉಪೇಂದ್ರ, "ಸದ್ಯ ನಾವು  ಮೋಹನ್‌ ಬಿಕರಿ ಸ್ಟುಡಿಯೋದಲ್ಲಿದ್ದೀವಿ. ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್‌ ಮಾಡುವ ಜಾಗದಲ್ಲಿ ಧೂಳು ಮತ್ತು ಹೊಗೆ ಜಾಸ್ತಿ ಇತ್ತು. ಹೀಗಾಗಿ ಕೆಮ್ಮು ಶುರುವಾಯ್ತು. ಸ್ವಲ್ಪ ಕೆಮ್ಮಿದ್ದೆ ಅ‍‍‍‍‍‍‍‍‍‍‍‍‍ಷ್ಟೇ. ಅದನ್ನೇ ಬೇರೆ ರೀತಿಯಲ್ಲಿ ಸುದ್ದಿ ಮಾಡುತ್ತಿದ್ದಾರೆ. ಈ ರೀತಿಯ ವದಂತಿಗಳನ್ನು ಹಬ್ಬಿಸಬೇಡಿ. ನಾನು ಆರೋಗ್ಯವಾಗಿದ್ದೀನಿ. ಸದ್ಯ ಶೂಟಿಂಗ್‌ ಮುಂದುವರೆಸುತ್ತಿದ್ದೇವೆ" ಎಂದಿದ್ದಾರೆ.

ವಿಡಿಯೋದಲ್ಲಿ ಉಪೇಂದ್ರ ಅವರ ಜೊತೆಗೆ ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಕೂಡ ಕಾಣಿಸಿಕೊಂಡಿದ್ದು, "ಉಪೇಂದ್ರ ಅವರು ಸೂಪರ್‌ ಆಗಿದ್ದಾರೆ" ಎಂದಿದ್ದಾರೆ. ಉಪೇಂದ್ರ ಸದ್ಯ ʼಯು ಐʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಲೈವ್‌ನಲ್ಲಿ ನಿರ್ದೇಶನ ವಿಭಾಗದ ಹಲವರು ವಿಡಿಯೋದಲ್ಲಿ ಇರುವುದನ್ನು ಕೂಡ ತೋರಿಸಿದ್ದಾರೆ.

ಉಪೇಂದ್ರ ʼಡಸ್ಟ್‌ ಅಲರ್ಜಿʼಯಿಂದಾಗಿ ಶೂಟಿಂಗ್‌ ಸ್ಥಳಕ್ಕೆ ಹತ್ತಿರದಲ್ಲಿರುವ ನೆಲಮಂಗಲದ ಹರ್ಷ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಯನ್ನು ಮಾಡಿಸಿಕೊಂಡಿದ್ದಾರೆ. ಅವರು ತಪಾಸಣೆಗೆ ಒಳಪಟ್ಟಿದ್ದನ್ನೇ ಉಪೇಂದ್ರ ಸ್ಥಿತಿ ಗಂಭೀರವಾಗಿದೆ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬಂತೆ ಬಿಂಬಿಸಿ ಕೆಲವು ಟಿವಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು. ಈ ಸುದ್ದಿ ಉಪೇಂದ್ರ ಅವರಿಗೆ ತಲುಪುತ್ತಿದ್ದಂತೆಯೇ ಫೇಸ್‌ಬುಕ್ ಮೂಲಕ ಲೈವ್‌ ಮಾಡಿ, ತಮ್ಮ ಆರೋಗ್ಯದ ಬಗ್ಗೆ ಮಾಧ್ಯಮದಲ್ಲಿ ಬಂದ ವದಂತಿಗೆ ತೆರೆ ಎಳೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180