ರಾಣಿ ನಂದಿನಿಯಾಗಿ ಕನ್ನಡಕ್ಕೆ ಬರಲು ಸಜ್ಜಾದ ಐಶ್ವರ್ಯಾ ರೈ

ಹಲವು ವರ್ಷಗಳ ಬಳಿಕ ನಟನೆಗೆ ಮರಳಿರುವ ನಟಿ ಐಶ್ವರ್ಯಾ ರೈ ಪೊನ್ನಿಯನ್‌ ಸೆಲ್ವನ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನೂ ಪ್ರವೇಶಿಸುತ್ತಿದ್ದಾರೆ.
aishwaryarai

ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ಬಾಲಿವುಡ್‌ನ ಸ್ಟಾರ್‌ ನಟಿ ಐಶ್ವರ್ಯಾ ರೈ 4 ವರ್ಷಗಳ ಬಳಿಕ ಮತ್ತೆಗೆ ತೆರೆಗೆ ಮರಳುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೋಳ ಸಾಮ್ರಾಜ್ಯದ ಕಥೆಯನ್ನಾಧರಿಸಿದ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರದಲ್ಲಿ ಐಶ್ವರ್ಯಾ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪೊನ್ನಿಯನ್‌ ಸೆಲ್ವನ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಲಿಕಾ ಪ್ರೊಡಕ್ಷನ್ಸ್‌ ಚಿತ್ರ ನಿರ್ಮಾಣ ಸಂಸ್ಥೆ ಚಿತ್ರದಲ್ಲಿನ ಐಶ್ವರ್ಯಾ ಅವರ ಪಾತ್ರದ ಫಸ್ಟ್‌ಲುಕ್‌ ಪೊಸ್ಟರ್‌ಅನ್ನು ಹಂಚಿಕೊಂಡಿದ್ದು, ಐಶ್ವರ್ಯಾ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ಐಶ್ವರ್ಯಾ ಅವರನ್ನು ಪಳುವೂರ್‌ ಸಾಮ್ರಾಜ್ಯದ ರಾಣಿ ನಂದಿನಿ ಎಂದು ಪರಿಚಯಿಸಲಾಗಿದ್ದು, ಪ್ರತಿಕಾರದ ಮುಖವೂ ಸುಂದರವಾಗಿರುತ್ತದೆ ಎಂದು ಐಶ್ವರ್ಯಾ ಅವರ ಪಾತ್ರದ ಬಗ್ಗೆ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. 

 

ಪೊನ್ನಿಯನ್‌ ಸೆಲ್ವನ್‌-1 ಚಿತ್ರ ತಮಿಳು, ತೆಲುಗು, ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿದ್ಧಗೊಂಡಿದ್ದು, ಈ ಚಿತ್ರದ ಮೂಲಕ ಮಂಗಳೂರು ಮೂಲದ ಐಶ್ವರ್ಯಾ ರೈ ಕನ್ನಡಕ್ಕೂ ಕಾಲಿಡುತ್ತಿದ್ದಾರೆ. ಚಿತ್ರದ ಕನ್ನಡ ಅವತರಣಿಕೆಯಲ್ಲಿ ಐಶ್ವರ್ಯಾ ತಮ್ಮ ಪಾತ್ರಕ್ಕೆ ಕ್ನನಡದಲ್ಲಿ ಧ್ವನಿ ನೀಡುವ ಪ್ರಯತ್ನ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಚಿತ್ರತಂಡ ಇನ್ನೂ ಖಚಿತ ಪಡಿಸಿಲ್ಲ.

ತಮಿಳಿನ ಸ್ಟಾರ್‌ ನಟ ವಿಕ್ರಮ್‌ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರ ಬಹುತಾರಾಗಣವನ್ನು ಹೊಂದಿದೆ. ಐಶ್ವರ್ಯಾ ಅವರಂತೆ ಇತ್ತೀಚೆಗೆ ನಟರಾದ ವಿಕ್ರಮ್‌ ಮತ್ತು ಕಾರ್ತಿ ಅವರ ಫಸ್ಟ್‌ಲುಕ್‌ ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಸದ್ಯ ತಮಿಳಿನ ಖ್ಯಾತ ನಟಿ ತ್ರಿಶಾ ಅವರ ಪೋಸ್ಟರ್‌ ಹಂಚಿಕೊಳ್ಳಲಾಗಿದ್ದು, ಚಿತ್ರದಲ್ಲಿ ತ್ರಿಶಾ ರಾಣಿ ಕುಂದವೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ಅಭಿಮಾನಿಯ 15 ವರ್ಷದ ಬಯಕೆ ಈಡೇರಿಸಿದ ಶಿವಣ್ಣ

ಮಣಿರತ್ನಂ ನಿರ್ದೇಶನವಿರುವ ಪೊನ್ನಿಯನ್‌ ಸೆಲ್ವನ್‌-1 ಸೆಪ್ಟೆಂಬರ್‌ 31ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಅವರ ಸಂಗೀತವಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್