ಚಿತ್ರೀಕರಣದ ವೇಳೆ ಸಂಯುಕ್ತ ಹೆಗಡೆಗೆ ಗಂಭೀರ ಗಾಯ; ಡ್ಯೂಪ್‌ ಬಳಸದೆ ಎಡವಟ್ಟು ಮಾಡಿಕೊಂಡ ನಟಿ

SamyuktaHegde
  • ಕ್ರೀಮ್‌ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ವೇಳೆ ಅವಘಡ
  • ಕಣ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರಿಕ್‌ ಪಾರ್ಟಿ ಖ್ಯಾತಿಯ ನಟಿ

ಸಿನಿಮಾ ಚಿತ್ರೀಕರಣದ ವೇಳೆ ಕಿರಿಕ್‌ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಭಿಷೇಕ್‌ ಬಸಂತ್‌ ನಿರ್ದೇಶನದ ಕ್ರೀಮ್‌ ಸಿನಿಮಾದಲ್ಲಿ ಸಂಯುಕ್ತ ಮುಖ್ಯಭೂಮಿಕೆಯನ್ನು ನಿಭಾಯಿಸುತ್ತಿದ್ದಾರೆ. ಬುಧವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಫೈಟ್‌ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಈ ವೇಳೆ ನಾಯಕಿ ಸಂಯುಕ್ತ, ರೌಡಿಗಳನ್ನು ಥಳಿಸುವ ರೀತಿಯಲ್ಲಿ ಸಾಹಸ ಪ್ರದರ್ಶನಕ್ಕೆ ಮುಂದಾದಾಗ ಅವರ ಬಲಗಾಲು ತಲೆ ಮತ್ತು ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ.

Image
samyukta hegde

ಸದ್ಯ ಸಂಯುಕ್ತ ಅವರಿಗೆ ಕಣ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. 

ಸಾಹಸ ನಿರ್ದೇಶಕ ಪ್ರಭು ಅವರ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ಛಾಯಾಗ್ರಾಹಕ ಸುನೋಜ್‌ ವೇಲಾಯುಧನ್‌ ಚಿತ್ರೀಕರಣಕ್ಕೆ ಡ್ಯೂಪ್‌ ಬಳಸುವಂತೆ ಸಲಹೆ ನೀಡಿದ್ದರು. ಆದರೆ, ಚಿತ್ರದ ಫೈಟ್‌ ಸನ್ನಿವೇಶಗಳು ನೈಜವಾಗಿ ಸೆರೆಯಗಲಿ ಎಂಬ ಕಾರಣಕ್ಕೆ ಸಂಯುಕ್ತ ಮತ್ತು ಚಿತ್ರತಂಡದ ಕೆಲವರು ಡ್ಯೂಪ್‌ ಬಳಕೆಗೆ ಒಪ್ಪಿರಲಿಲ್ಲ ಎಂದು ಚಿತ್ರದ ನಿರ್ಮಾಪಕ ಡಿ.ಕೆ ದೇವೇಂದ್ರ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಂದರ್ಶನ | ಕಡೆಗಣಿಸಿದ ಸ್ಯಾಂಡಲ್‌ವುಡ್‌ ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿದ ಜೆಕೆ

ನೈಜ ಘಟನೆ ಆಧಾರಿತ ಕ್ರೀಮ್‌ ಚಿತ್ರದ ಶೇ.90 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣದ ಸಂದರ್ಭದಲ್ಲಿಯೇ ಅವಘಡ ಸಂಭವಿಸಿದೆ. ಹೀಗಾಗಿ ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್