777 ಚಾರ್ಲಿ ಯಶಸ್ಸಿನ ಬೆನ್ನಲ್ಲೆ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್‌ ಶೆಟ್ಟಿ

rakshit shetty
  • ಮಿಥ್ಯ ಚಿತ್ರಕ್ಕೆ ಬಂಡವಾಳ ಹೂಡಿದ ರಕ್ಷಿತ್‌ ಶೆಟ್ಟಿ
  • ಸುಮಂತ್‌ ಭಟ್‌ ನಿರ್ದೇಶನದಲ್ಲಿ ಮೂಡಿ ಬರಲಿದೆ ಮಿಥ್ಯ

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ತಾವೇ ಬಂಡವಾಳ ಹೂಡಿ, ಮುಖ್ಯಭೂಮಿಕೆ ನಿಭಾಯಿಸಿದ್ದ 777 ಚಾರ್ಲಿ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿತ್ತು. 777 ಚಾರ್ಲಿ ಯಶಸ್ಸಿನ ಬೆನ್ನಲ್ಲೆ ರಕ್ಷಿತ್‌ ಇದೀಗ ಹೊಸ ಚಿತ್ರವೊಂದಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. 

ಯುವ ನಿರ್ದೇಶಕ ಸುಮಂತ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ʼಮಿಥ್ಯʼ ಎಂಬ ಹೊಸ ಸಿನಿಮಾಗೆ ರಕ್ಷಿತ್ ಬಂಡವಾಳ ಹೂಡುತ್ತಿದ್ದಾರೆ. ಇಂಜಿನಿಯರಿಂಗ್ ಹಿನ್ನೆಲೆಯ ಸುಮಂತ್ ಪರಂವಹ ಪಿಕ್ಚರ್ಸ್‌ನ ಬರಹಗಾರರ ತಂಡದ ಭಾಗವಾಗಿದ್ದರು. ಈ ಹಿಂದೆ ʼಪರಂವಹ ಸ್ಟುಡಿಯೋಸ್‌ʼ ಬ್ಯಾನರ್‌ ಅಡಿಯಲ್ಲಿ ಮೂಡಿಬಂದಿದ್ದ ʼಏಕಂʼ ಹೆಸರಿನ ವೆಬ್ ಸರಣಿಯ ನಾಲ್ಕು ಸಂಚಿಕೆಗಳಿಗೆ ಸುಮಂತ್‌ ಅವರೇ ಕತೆ ಬರೆದು, ನಿರ್ದೇಶಿಸಿದ್ದರು.

ರಕ್ಷಿತ್‌ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ರಿಷಬ್‌ ಶೆಟ್ಟರು ಈ ಹಿಂದೆ ಚಿಕ್ಕ ಮಕ್ಕಳನ್ನು ಮುಖ್ಯಭೂಮಿಕೆಯಲ್ಲಿರಿಸಿ ʼಸ.ಹಿ.ಪ್ರಾ ಶಾಲೆ ಕಾಸರಗೋಡುʼ ನಂತಹ ಗಂಭೀರ ಕಥಾಹಂದರವುಳ್ಳ ಚಿತ್ರವನ್ನು ತೆರೆಗೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ವಲಯದಲ್ಲಿ ಗುರುತಿಸಿಕೊಳ್ಳುವ ಸುಮಂತ್‌ ಕೂಡ 11 ವರ್ಷದ ಬಾಲಕನನ್ನು ಮುಖ್ಯಭೂಮಿಕೆಯಲ್ಲಿರಿಸಿ ಕತೆ ಹೇಳಲು ಮುಂದಾಗಿದ್ದಾರೆ. ಆಕಸ್ಮಿಕ ಘಟನೆಯಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥನಾಗುವ ಎಳೆಯ ವಯಸ್ಸಿನ ಹುಡುಗ ಅನುಭವಿಸುವ ಯಾತನೆ, ತನ್ನವರು ಯಾರೂ ಇಲ್ಲದ ಪ್ರಪಂಚದಲ್ಲಿ ನೆಲೆಗಾಗಿ ಆತ ನಡೆಸುವ ಹೋರಾಟದ ಸುತ್ತ ಮಿಥ್ಯ ಚಿತ್ರದ ಕತೆ ರೂಪಗೊಂಡಿದೆ.   

ಈ ಸುದ್ದಿ ಓದಿದ್ದೀರಾ? ಹಾಸ್ಯನಟ ರಾಜು ಶ್ರೀವಾಸ್ತವ ಆರೋಗ್ಯ ಗಂಭೀರ

ಸ.ಹಿ.ಪ್ರಾ ಶಾಲೆ ಕಾಸರಗೋಡು ಮತ್ತು ವಿಕ್ರಾಂತ್ ರೋಣ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಬಾಲನಟ ಆತಿಶ್ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಹಾಸ್ಯ ಕಲಾವಿದ ಪ್ರಕಾಶ್‌ ತುಮ್ಮಿನಾಡು ಮತ್ತು ರೂಪಾ ವರ್ಕಾಡಿ ಸೇರಿ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್