ಅಪಹರಣಕ್ಕೊಳಗಾದರೆ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌?

ajaneesh lokanath
  • ವೈರಲ್‌ ಫೋಟೋಗಳ ಹಿಂದಿನ ಅಸಲಿಯತ್ತೇನು?
  • ಅಪಹರಣದ ಹಿಂದಿದೆ ಹಾಸ್ಟೆಲ್‌ ಹುಡುಗರ ಕೈವಾಡ

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬೇಡಿಕೆಯ ಸಂಗೀತ ನಿರ್ದೇಶಕ ಎನಿಸಿಕೊಂಡಿರುವ ಅಜನೀಶ್ ಲೋಕನಾಥ್ ಅವರನ್ನು ಭಯೋತ್ಪಾದಕರು ಅಪಹರಿಸಿ, ಥಳಿಸಿರುವ ಮತ್ತು ಮಾರಕಾಸ್ತ್ರಗಳನ್ನು ಗುರಿಯಾಗಿಸಿ ಜೀವ ಬೆದರಿಕೆ ಹಾಕುತ್ತಿರುವ ರೀತಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಫೋಟೋಗಳನ್ನು ಕಂಡು ಆಘಾತಕ್ಕೊಳಗಾಗಿದ್ದ ಸ್ಯಾಂಡಲ್‌ವುಡ್‌ ಮಂದಿ ಅಸಲಿ ವಿಚಾರ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯುವಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ ಈ ಚಿತ್ರವನ್ನು ಜನರಿಗೆ ತಲುಪಿಸುವ ಸಲುವಾಗಿ ಭಿನ್ನ ರೀತಿಯ ಪ್ರಚಾರ ತಂತ್ರಗಳನ್ನು ಬಳಸುತ್ತಿರುವ ಚಿತ್ರತಂಡ, ಇದೀಗ ಚಿತ್ರದ ಸಂಗೀತ ನಿರ್ದೇಶಕರನ್ನೇ ಅಪಹರಿಸಿದ ರೀತಿಯ ಪ್ರಮೋಶನಲ್‌ ಟೀಸರ್‌ ಅನ್ನು ಸಿದ್ಧ ಪಡಿಸುತ್ತಿದೆ. ಟೀಸರ್‌ ಚಿತ್ರೀಕರಣದ ವೇಳೆ ಸೆರೆ ಹಿಡಿಯಲಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಅಲ್ಲದೇ, ಈ ಬಗ್ಗೆ ಟ್ವೀಟ್ ಮಾಡಿರುವ ಅಜನೀಶ್, "ಹಾಸ್ಟೆಲ್ ಹುಡುಗರು ನನ್ನ ಎತ್ತಾಕೊಂಡು ಹೋಗ್ಬಿಟ್ಟಿದ್ದಾರೆ" ಎಂದು ಫೋಟೋ ಹಂಚಿಕೊಂಡಿದ್ದಾರೆ.

ಮೋಹಕ ತಾರೆ ರಮ್ಯಾ ಕೂಡ ಇತ್ತೀಚೆಗೆ ಈ ಚಿತ್ರದ ಪ್ರಮೋಶನಲ್‌ ವಿಡಿಯೋ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದರು. ದಿವಂಗತ ನಟ ಪುನೀತ್ ರಾಜ್ ಕುಮಾರ್, ಸುದೀಪ್, ರಕ್ಷಿತ್ ಶೆಟ್ಟಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಈ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ಆ್ಯಕ್ಷನ್ ಕಟ್‌ ಹೇಳಿದ್ದು, ರಂಗಭೂಮಿ ಹಿನ್ನೆಲೆ ಯುವ ಪ್ರತಿಭೆಗಳು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ ಪಿ ಅವರ 'ಗುಲ್ ಮೋಹರ್ ಫಿಲಂಸ್' ಬ್ಯಾನರ್‌ನಡಿ ಚಿತ್ರ ನಿರ್ಮಾಣಗೊಂಡಿದ್ದು, 2023ರ ಜನವರಿಯಲ್ಲಿ ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180