ತಲಾ ಅಜಿತ್ 61ನೇ ಸಿನಿಮಾದ 'ಟೈಟಲ್' ಘೋಷಣೆ 

thunivu
  • ʼಫಸ್ಟ್‌‌ ಲುಕ್ ಪೋಸ್ಟರ್‌ʼನಲ್ಲಿ ಗನ್‌ ಹಿಡಿದು ಮಿಂಚಿದ ಅಜಿತ್‌ ಕುಮಾರ್‌
  • ʼಬ್ಯಾಂಕ್‌ ರಾಬರಿʼ ಸುತ್ತ ಮೂಡಿ ಬರುತ್ತಿದೆ ಬಹುನಿರೀಕ್ಷಿತ ʼತುನಿವುʼ ಚಿತ್ರ

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅವರ 61ನೇ ಸಿನಿಮಾದ ಟೈಟಲ್ ಮತ್ತು ʼಫಸ್ಟ್‌ಲುಕ್‌ ಪೋಸ್ಟರ್ʼ ಬುಧವಾರ ಘೋಷಣೆಯಾಗಿದೆ. ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಈ ಚಿತ್ರಕ್ಕೆ ʼತುನಿವುʼ ಎಂದು ಹೆಸರಿಡಲಾಗಿದೆ.

ತಲಾ ಅಜಿತ್ ಕುಮಾರ್ ಕೈಯಲ್ಲಿ ಗನ್ ಹಿಡಿದು ಕುರ್ಚಿಯ ಮೇಲೆ ಗತ್ತಿನಲ್ಲಿ ಕೂತಿರುವ ಫಸ್ಟ್‌ ಲುಕ್‌ ಪೋಸ್ಟರ್ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ತಮಿಳಿನ ಖ್ಯಾತ ನಿರ್ದೇಶಕ ಎಚ್ ವಿನೋದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಹಿಂದೆ ವಿನೋದ್ ಮತ್ತು ಅಜಿತ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ʼನರ್ಕೊಂಡ ಪಾರವೈʼ ಮತ್ತು ʼವಲಿಮೈʼ ಚಿತ್ರಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದವು. ಎರಡು ಸೂಪರ್ ಹಿಟ್‌ ಚಿತ್ರಗಳನ್ನು ನೀಡಿರುವ ಈ ಸ್ಟಾರ್ ಜೋಡಿ ಇದೀಗ ಆಕ್ಷನ್ ಕಥಾ ಹಂದರವುಳ್ಳ ʼತುನಿವುʼ ಚಿತ್ರದ ಮೂಲಕ ಮತ್ತೆ ಒಂದಾಗಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

ಇತ್ತೀಚೆಗಷ್ಟೇ ಉತ್ತರ ಭಾರತದ ಪ್ರವಾಸ ಮುಗಿಸಿಕೊಂಡು ಚೆನ್ನೈಗೆ ಮರಳಿರುವ ಅಜಿತ್‌ ಕುಮಾರ್‌ ಸದ್ಯದಲ್ಲೇ ʼತುನಿವುʼ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ʼಬ್ಯಾಂಕ್‌ ರಾಬರಿʼಯ ಸುತ್ತ ಹೆಣೆಯಲಾಗಿರುವ ಈ ಆಕ್ಷನ್‌, ಥ್ರಿಲ್ಲರ್‌ ಕಥನದ ʼಬೈಕ್‌ ರೇಸ್‌ʼ ಭಾಗದ ಚಿತ್ರೀಕರಣವನ್ನು ವಿದೇಶದಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ನವೆಂಬರ್‌ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದ್ದು, 2023ರ ಮೊದಲಾರ್ಧದಲ್ಲಿ ಚಿತ್ರ ತೆರೆಗೆ ಬರು ಸಾಧ್ಯತೆ ಇದೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್‌, ಝೀ ಸ್ಟುಡಿಯೋಸ್‌ ಜೊತೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್