ಈ ಸಿನಿಮಾ | ಸಂಪ್ರದಾಯಗಳೇ ಕೊರಳಿಗೆ ಉರುಳಾದಾಗ ʻರಕ್ಷಾ ಬಂಧನʼವೂ ನೆಪ

ರಕ್ಷಾ ಬಂಧನದಲ್ಲಿ ವರದಕ್ಷಿಣೆ ಎಂಬ ಪಿಡುಗಿನ ಬಗ್ಗೆ ಮತ್ತು ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮೂಡ ನಂಬಿಕೆಗಳು ಮತ್ತದರ ದೂರಗಾಮಿ ಪರಿಣಾಮಗಳ ಮೇಲೆ ನಿರ್ದೇಶಕರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
raksha bandhan

ಚಿತ್ರ: ರಕ್ಷಾ ಬಂಧನ್‌ | ನಿರ್ದೇಶನ: ಆನಂದ್‌ ಎಲ್‌ ರಾಯ್‌ | ತಾರಾಗಣ: ಅಕ್ಷಯ್‌ ಕುಮಾರ್‌, ಭೂಮಿ‌ ಪೆಡ್ನೇಕರ್‌, ಸಾದಿಯಾ ಖಾತಿಬ್‌, ದೀಪಿಕಾ ಖನ್ನಾ, ಸೆಹೆಜ್‌ಮೀನ್‌ ಕೌರ್‌, ಸ್ಮೃತಿ ಶ್ರೀಕಾಂತ್‌, ಸಾಹಿಲ್‌ ಮೆಹ್ತಾ, ನೀರಜ್‌ ಸೂದ್‌| ಭಾಷೆ: ಹಿಂದಿ | ಸಂಗೀತ ನಿರ್ದೇಶನ : ಹಿಮೇಶ್‌ ರೇಶಮಿಯಾ | ನಿರ್ಮಾಪಕ : ಹಿಮಾನ್ಶು ಶರ್ಮಾ | ಅವಧಿ: 2 ಗಂಟೆ |

ʼಸೂರ್ಯವಂಶಿʼ ಹೊರತುಪಡಿಸಿ ʼಲಕ್ಷ್ಮೀ, ʼಬೆಲ್‌ ಬಾಟಮ್‌ʼ, ʼಅತ್ರಂಗಿ ರೇʼ, ʼಬಚ್ಚನ್‌ ಪಾಂಡೆʼ, ʼಸಾಮ್ರಾಟ್‌ ಪೃಥ್ವಿರಾಜ್‌ʼ ಹೀಗೆ ಸಾಲು ಸಾಲು ʼಫ್ಲಾಪ್‌ʼ ಸಿನಿಮಾಗಳನ್ನು ನೀಡಿ ಸತತವಾಗಿ ಸೋಲಿನಲ್ಲೇ ಕಳೆದು ಹೋಗಿದ್ದ ಕಿಲಾಡಿ ಅಕ್ಷಯ್‌ ಕುಮಾರ್‌ಗೆ ʼರಕ್ಷಾ ಬಂಧನದʼ ಗೆಲುವು ತೀರ ಅನಿವಾರ್ಯವಾಗಿತ್ತು. ಅಂತೆಯೇ ಅಕ್ಷಯ್‌ ಸಮಾಧಾನದ ನಗೆ ಬೀರಿದ್ದಾರೆ.

Eedina App

ʼತನು ವೆಡ್ಸ್‌ ಮನುʼ, ʼತನು ವೆಡ್ಸ್‌ ಮನು ರಿಟರ್ನ್ಸ್‌ʼ ಸಿನಿಮಾಗಳ ಮೂಲಕ ಭಿನ್ನ ನಿರೂಪಣಾ ಶೈಲಿಯನ್ನು ಪರಿಚಯಿಸಿದ್ದ ನಿರ್ದೇಶಕ ಎಲ್‌ ಆನಂದ್‌ ರಾಯ್‌ ಈ ಬಾರಿ ಒಂದೊಳ್ಳೆಯ ʼಫ್ಯಾಮಿಲಿ ಎಂಟರ್‌ಟೈನರ್‌ʼ, ʼಎಮೋಷನಲ್‌ ಡ್ರಾಮಾʼವನ್ನು ತೆರೆಗೆ ಅಳವಡಿಸಿದ್ದಾರೆ ಎನ್ನಬಹುದು.  

ದೆಹಲಿಯ ಚಾಂದಿನಿ ಚೌಕ್‌, ಅಲ್ಲೊಂದು ಪ್ರೇಮಲತಾ ಚಾಟ್‌ ಭಂಡಾರ್‌. ನಮ್ಮ ಕಥಾನಾಯಕ ಕೇದಾರನಾಥನ ವಂಶಸ್ಥರು ಶತಮಾನದಿಂದ ಈ ಚಾಟ್ಸ್‌ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಈಗ ಆ ಅಂಗಡಿಯನ್ನು ಮುಂದುವರೆಸಿಕೊಂಡು ಹೋಗುವ ಹೊಣೆ ಕೇದಾರನಾಥನ ಮೇಲಿದೆ. ಜೊತೆಗೆ ಪೂರ್ವಜರು ಮಾಡಿಟ್ಟ ಸಾಲದ ಹೊರೆಯೂ. ಚಾಂದಿನಿ ಚೌಕ್‌ ಮಾತ್ರವಲ್ಲ ಅಕ್ಕ ಪಕ್ಕದ ಪ್ರದೇಶಗಳಲ್ಲೂ ಪ್ರೇಮಲತಾ ಚಾಟ್‌ ಭಂಡಾರದ ಹುಳಿ ಮಿಶ್ರಿತ ಪಾನಿ ಪುರಿ ಬಹಳ ಫೇಮಸ್‌. ಗರ್ಭಿಣಿಯರು ಈ ಅಂಗಡಿಯ ಪಾನಿಪುರಿ ತಿಂದರೆ ಗಂಡು ಮಗು ಜನಿಸುತ್ತೆ ಎಂಬುದು ಅಲ್ಲಿನ ಬಹುತೇಕರ ಮೂಢನಂಬಿಕೆ. ಉತ್ತಮ ಗಳಿಕೆ ಇದ್ದರೂ, ಗಳಿಸಿದ್ದನ್ನೆಲ್ಲ ಸಾಲಕ್ಕೆ ಜಮೆ ಮಾಡಿ ಉಳಿದ ಅಷ್ಟೊ ಇಷ್ಟೊ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುವ ಕೇದಾರನಾಥನಿಗೆ ಮದುವೆ ವಯಸ್ಸಿಗೆ ಬಂದ ನಾಲ್ಕು ಜನ ತಂಗಿಯರಿದ್ದಾರೆ. ಅವರ ಮದುವೆ ಮಾಡಿಯೇ ತಾನು ಹಸಮಣೆ ಏರುತ್ತೇನೆ ಎಂದು ತಾಯಿಗೆ ಕೊನೆಯುಸಿರೆಳೆಯುವಾಗ ಭಾಷೆ ನೀಡಿದ್ದ ಕೇದಾರನಾಥ, ತನ್ನ ಭಾಷೆಯನ್ನು ಉಳಿಸಿಕೊಳ್ಳಲು ತಂಗಿಯರಿಗೆ ಗಂಡು ಹುಡುಕಲು ಹೆಣಗಾಡುತ್ತಾನೆ. ಆದರೆ, ಬರುವ ಗಂಡುಗಳೆಲ್ಲ ಭಾರೀ ವರದಕ್ಷಿಣೆ ಕೇಳುವವರೇ. ತಂಗಿಯರ ಮದುವೆಯಾಗದೆ ತಾನು ಮದುವೆಯಾಗಲು ಸುತಾರಾಂ ಒಪ್ಪದ ಆತ, ತನ್ನ ಬಾಲ್ಯದ ಪ್ರೀತಿಯನ್ನು ಬಲಿ ಕೊಡಲು ಸಿದ್ಧನಿದ್ದಾನೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಕೇದಾರನಾಥ ದುಬಾರಿ ವರದಕ್ಷಿಣೆ ಹೊಂದಿಸಿ ನಾಲ್ಕು ತಂಗಿಯರ ಮದುವೆ ಮಾಡುತ್ತಾನೆಯೇ? ತನ್ನ ಬಾಲ್ಯದ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆಯೇ ಎಂಬುದು ಚಿತ್ರದಲ್ಲಿನ ತಿರುವು.

AV Eye Hospital ad

ʼರಕ್ಷಾ ಬಂಧನʼದಲ್ಲಿ ವರದಕ್ಷಿಣೆ ಎಂಬ ಪಿಡುಗಿನ ಬಗ್ಗೆ ಮತ್ತು ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಮತ್ತದರ ದೂರಗಾಮಿ ಪರಿಣಾಮಗಳ ಮೇಲೆ ನಿರ್ದೇಶಕರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ. ದಪ್ಪಗಿರುವ, ಕಪ್ಪಗಿರುವ, ತನ್ನಿಷ್ಟದಂತೆ ಬದುಕುತ್ತೇನೆ ಎನ್ನುವ ಹೆಂಗಳೆಯರನ್ನು ಸಮಾಜ ಮಾತ್ರವಲ್ಲ, ಸ್ವತಃ ಕುಟುಂಬಸ್ಥರೇ ನಿಷ್ಪ್ರಯೋಜಕರು ಎಂಬಂತೆ ನೋಡುತ್ತಾರೆ ಎಂಬುದನ್ನು ನಿರ್ದೇಶಕರು ತೀವ್ರವಾಗೇನೊ ಹೇಳಿದ್ದಾರೆ. ಅದೇ ಹೆಣ್ಣುಮಕ್ಕಳು ಬದುಕಿನಲ್ಲಿ ಸಾಧಿಸಿ ಮಾದರಿ ಎನ್ನುವ ಹಂತಕ್ಕೆ ಬಂದು ನಿಂತಾಗ ಅದನ್ನೂ ಅಗತ್ಯ ಎನ್ನುವಷ್ಟರ ಮಟ್ಟಿಗೆ ನಿರ್ದೇಶಕರು ಸಂಭ್ರಮಿಸಲಿಲ್ಲ ಎಂಬುದು ಬೇಸರದ ಸಂಗತಿ. ಚಿತ್ರದಲ್ಲಿ ಒಂದೆರೆಡು ಬಾರಿ ಬಂದು ಹೋಗುವ ತಿರುವುಗಳು ಮನಸ್ಸಿಗೆ ತಟ್ಟುತ್ತವೆ.

ಈ ಸಿನಿಮಾದ ಸನ್ನಿವೇಶವೊಂದರಲ್ಲಿ ಕಥಾನಾಯಕ ಇದ್ದಕ್ಕಿದ್ದಂತೆ ಬುರ್ಕಾ ತೊಡುತ್ತಾನೆ. (ಇದು ಈ ಒಬ್ಬ ನಿರ್ದೇಶಕನ ಸಮಸ್ಯೆಯಲ್ಲ). ಬುರ್ಕಾವೇ ಯಾಕೆ ಎಂಬುದು ನನ್ನ ಪ್ರಶ್ನೆ. ಸಾಧ್ಯವಾದರೆ ಲಂಗ ದಾವಣಿಯನ್ನೂ ಹಾಕಿಸಿ, ಸೀರೆ, ಕುಪ್ಪಸ, ಬಿಂದಿಗಳನ್ನೂ ತೊಡಿಸಿ. ಪ್ರತಿ ಬಾರಿ ಬುರ್ಕಾವೇ ಯಾಕೆ? 

ʼರಕ್ಷಾ ಬಂಧನʼ ಹೊಸತನದ ಕಥಾಹಂದರವೇನೂ ಅಲ್ಲ. ವರದಕ್ಷಿಣೆ ಕಿರುಕುಳ, ಮೂಡನಂಬಿಕೆಗಳ ಮೇಲೆ ಹಲವಾರು ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆದರೆ, ಕೆಲ ಭಾವನಾತ್ಮಕ ಅಂಶಗಳು ಮತ್ತು ಪಾತ್ರಗಳ ಕಾರಣಕ್ಕೆ ಈ ಚಿತ್ರ ವಿಶೇಷ ಎನ್ನಿಸುತ್ತದೆ. ಮೊದಾಲಾರ್ಧದಲ್ಲಿ ನೋಡುಗರನ್ನು ನಗಿಸುತ್ತ, ʼಇಂಟರ್‌ವಲ್‌ʼ ಬಳಿಕ ಭಾವುಕರನ್ನಾಗಿಸುತ್ತ ಸಾಗುವ ರಕ್ಷಾ ಬಂಧನ ಒಂದೊಳ್ಳೆಯ ʼಫ್ಯಾಮಿಲಿ ಎಂಟರ್‌ಟೈನರ್‌ʼ, ʼಎಮೋಷನಲ್‌ ಡ್ರಾಮಾʼ ಎನ್ನಬಹುದು. 

ಕೇದಾರನಾಥನ ಪಾತ್ರದಲ್ಲಿ ಅಕ್ಷಯ್‌ ಕುಮಾರ್‌ ಚೆಂದವಾಗಿ ನಟಿಸಿದ್ದಾರೆ. ಆದರೆ, ಕೆಲವೆಡೆ ಪಾತ್ರವನ್ನು ಮೀರುವ‌ ಅವರ ಪ್ರಯತ್ನ ಅನಗತ್ಯ. ಭೂಮಿ ಪೆಡ್ನೇಕರ್‌ ನಟನೆ ಸಹಜವಾಗಿದೆ. ನೀರಜ್‌ ಸೂದ್‌ ನೆನಪಿನಲ್ಲಿ ಉಳಿಯುತ್ತಾರೆ. ಉಳಿದಂತೆ ಸಾದಿಯಾ ಖಾತಿಬ್‌, ದೀಪಿಕಾ ಖನ್ನಾ, ಸೆಹೆಜ್‌ಮೀನ್‌ ಕೌರ್‌, ಸ್ಮೃತಿ ಶ್ರೀಕಾಂತ್‌, ಸಾಹಿಲ್‌ ಮೆಹ್ತಾ ಎಲ್ಲರೂ ಅಚ್ಚುಕಟ್ಟಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಗಿಜುಗುಡುವ ಚಾಂದಿನಿ ಚೌಕ್‌ ಸೃಷ್ಟಿಸಿದ ಕಲಾ ನಿರ್ದೇಶಕರ ಕಲ್ಪನೆ ಹಿಡಿಸುತ್ತದೆ. ಹಿಮೇಶ್‌ ರೇಶಮಿಯಾ ಹಿನ್ನೆಲೆ ಸಂಗೀತ ಗಮನಿಸುವಂತದ್ದೇನೂ ಅಲ್ಲ.

ನಿನ್ನೆ ʼಥಿಯೇಟರ್‌ʼ ಏನೂ ತುಂಬಿರಲಿಲ್ಲ. ಆದರೆ, ಸಿನಿಮಾ ಮುಗಿಯುವ ಹೊತ್ತಿಗೆ ಕಾಲು ಭಾಗ ಸೀಟುಗಳನ್ನು ಆವರಿಸಿಕೊಂಡಿದ್ದ ಬಹುತೇಕರು ಕಥೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿ ನಿರ್ದೇಶಕರು ಮತ್ತು ಇಡೀ ತಂಡವನ್ನು ಅಭಿನಂದಿಸಿದರು. ನಾನೂ ಜೊತೆಯಾದೆ. ಸಾಧ್ಯವಾದರೆ ರಕ್ಷಾ ಬಂಧನವನ್ನು ಒಮ್ಮೆ  ನೋಡಬಹುದು.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app