
- ದೇವಸ್ಥಾನ ಪ್ರವೇಶಿಸದೆ ಹಿಂತಿರುಗಿದ ಸ್ಟಾರ್ ದಂಪತಿ
- ಭಜರಂಗದಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಬಾಲಿವುಡ್ನ ಸ್ಟಾರ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನವನ್ನು ಪ್ರವೇಶಿಸದಂತೆ ತಡೆಯೊಡ್ಡಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ʼಬ್ರಹ್ಮಾಸ್ತ್ರʼ ಸಿನಿಮಾ ತೆರೆಗೆ ಬರಲು ದಿನಗಣನೆ ಶುರುವಾಗಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ರಣಬೀರ್ ಮತ್ತು ಆಲಿಯಾ, ನಿರ್ದೇಶಕ ಆಯನ್ ಮುಖರ್ಜಿ ಜೊತೆಗೂಡಿ ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಸ್ಟಾರ್ ದಂಪತಿ ಮಹಾಕಾಳೇಶ್ವರನ ದರ್ಶನ ಪಡೆಯದಂತೆ ಭಜರಂಗದಳದ ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಮುಂಬೈನಿಂದ ಉಜ್ಜಯಿನಿವರೆಗೂ ಪ್ರಯಾಣ ಬೆಳೆಸಿದ್ದ ರಣಬೀರ್ ಮತ್ತು ಆಲಿಯಾ ಪ್ರತಿಭಟನೆಯ ಪರಿಣಾಮವಾಗಿ ದೇವಸ್ಥಾನ ಪ್ರವೇಶಿಸದೆ ಹಿಂತಿರುಗಿದ್ದು, ನಿರ್ದೇಶಕ ಆಯನ್ ಮುಖರ್ಜಿ ಮಾತ್ರ ಮಹಾಕಾಳನ ದರ್ಶನ ಪಡೆಯಲು ಸಾಧ್ಯವಾಗಿದೆ ಎಂದು ದೇವಸ್ಥಾನದ ಅರ್ಚಕ ಆಶಿಶ್ ಪೂಜಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Jobless Bajrang Dal find employment. Ranbir Kapoor, Alia Bhatt face protests at Ujjain Mahakaleshwar Temple for 'beef' comment. pic.twitter.com/9sLDbKpxU8
— Sangita (@Sanginamby) September 7, 2022
ರಣಬೀರ್ 2011ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, "ತಮಗೆ ದನದ ಮಾಂಸ ಇಷ್ಟ" ಎಂದಿದ್ದರು. 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ʼಬ್ರಹ್ಮಾಸ್ತ್ರʼ ಚಿತ್ರದ ಟ್ರೈಲರ್ನಲ್ಲಿ ರಣಬೀರ್ ಪಾದರಕ್ಷೆ ಧರಿಸಿ ದೇವಸ್ಥಾನ ಪ್ರವೇಶ ಮಾಡುತ್ತಿರುವಂತಹ ದೃಶ್ಯವೊಂದು ಕಂಡುಬಂದಿತ್ತು. ನಿರ್ದಿಷ್ಟ ದೃಶ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, "ಆ ದೃಶ್ಯದಲ್ಲಿ ರಣಬೀರ್ ಪಾದರಕ್ಷೆ ಧರಿಸಿ ದೇವಸ್ತಾನ ಪ್ರವೇಶಿಸುತ್ತಿಲ್ಲ. ಅದು ದುರ್ಗಾ ಪೂಜೆಯ ಪೆಂಡಾಲ್ ಅಷ್ಟೇ, ದೇವಸ್ಥಾನವಲ್ಲ" ಎಂದು ನಿರ್ದೇಶಕ ಆಯನ್ ಮುಖರ್ಜಿ ಸ್ಪಷ್ಟನೆ ನೀಡಿದ್ದರು. ಇದಾಗಿಯೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ "ಪಾದರಕ್ಷೆ ಧರಿಸಿ ದೇವಸ್ಥಾನ ಪ್ರವೇಶಿಸುವ ಮೂಲಕ ರಣಬೀರ್ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಹೀಗಾಗಿ 'ಬ್ರಹ್ಮಾಸ್ತ್ರ' ಸಿನಿಮಾವನ್ನು ʼಬಾಯ್ಕಾಟ್ʼ ಮಾಡಿ ಎಂದು ಅಭಿಯಾನಗಳನ್ನು ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುತೂಹಲ ಹೆಚ್ಚಿಸಿದ ಪೊನ್ನಿಯಿನ್ ಸೆಲ್ವನ್ ಟ್ರೈಲರ್
ಇದೇ ಎರಡು ಕಾರಣಗಳನ್ನು ಮುಂದಿಟ್ಟುಕೊಂಡು ರಣಬೀರ್ ಮತ್ತು ಆಲಿಯಾ ದಂಪತಿ ದೇವಸ್ಥಾನ ಪ್ರವೇಶಿಸಲು ನಾವು ಬಿಡುವುದಿಲ್ಲ ಎಂದು ಭಜರಂಗದಳದ ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ದೇವಸ್ಥಾನದ ಎದುರು ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಉಜ್ಜಯಿನಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಭಜರಂಗದಳ ಕಾರ್ಯಕರ್ತರ ವಿರುದ್ಧ ಸೆಕ್ಷನ್ 353ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.