ಸೈಮಾ ಪ್ರಶಸ್ತಿ 2022 | ಅತಿ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡ 'ರಾಬರ್ಟ್‌, ಯುವರತ್ನ'

ಪುನೀತ್‌ ರಾಜ್‌ಕುಮಾರ್‌ ನಟನೆಯ ಯುವರತ್ನ ಸಿನಿಮಾ ಏಳು ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, 2021ನೇ ಸಾಲಿನ ಅತ್ಯುತ್ತಮ ಚಿತ್ರಗಳ ಸಾಲಿನಲ್ಲೂ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
SIIMA2022

2022ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ದಕ್ಷಿಣದ ಸಿನಿಮಾಗಳ ಪಟ್ಟಿಯನ್ನು ಸೈಮಾ ಬಿಡುಗಡೆಗೊಳಿಸಿದ್ದು, ಕನ್ನಡದ ಮೂರು ಚಿತ್ರಗಳು ಈ ಬಾರಿಯ ಸೈಮಾಗೆ ಅತಿ ಹೆಚ್ಚು ವಿಭಾಗಗಳಲ್ಲಿ ಆಯ್ಕೆಯಾಗಿವೆ.

  • ಸ್ಯಾಂಡಲ್‌ವುಡ್‌ 

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ 10 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ, ಮುಖ್ಯಭೂಮಿಕೆ ನಿಭಾಯಿಸಿದ್ದ ಗರುಡ ಗಮನ ವೃಷಭ ವಾಹನ ಸಿನಿಮಾ 8 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪುನೀತ್‌ ರಾಜ್‌ಕುಮಾರ್‌ ನಟನೆಯ ಯುವರತ್ನ ಸಿನಿಮಾ ಕೂಡ ಏಳು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ಜೊತೆಗೆ 2021ನೇ ಸಾಲಿನ ಅತ್ಯುತ್ತಮ ಸಿನಿಮಾಗಳ ಪಟ್ಟಿ ಕೂಡ ಬಿಡುಗಡೆಯಾಗಿದ್ದು, ರಾಬರ್ಟ್‌, ಯುವರತ್ನ, ಗರುಡ ಗಮನ ವೃಷಭ ವಾಹನ, ಸಲಗ, ಭಜರಂಗಿ-2 ಸಿನಿಮಾಗಳು ಅತ್ಯುತ್ತಮ ಚಿತ್ರ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.  

Image
sandalwood
  • ಟಾಲಿವುಡ್‌

ಈ ಬಾರಿಯ ಸೈಮಾ ಪ್ರಶಸ್ತಿಗೆ ಟಾಲಿವುಡ್‌ನ ನಾಲ್ಕು ಸಿನಿಮಾಗಳು ಅತಿ ಹೆಚ್ಚು ವಿಭಾಗಗಳಲ್ಲಿ ಆಯ್ಕೆಯಾಗಿವೆ. ಅಲ್ಲು ಅರ್ಜುನ್‌ ನಟನೆಯ ಪುಷ್ಪ ಸಿನಿಮಾ ಈ ಬಾರಿಯ ಸೈಮಾ ನಾಮನಿರ್ದೇಶನ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, 12 ವಿಭಾಗಗಳಲ್ಲಿ ಪುಷ್ಪ ನಾಮ ನಿರ್ದೇಶನಗೊಂಡಿದೆ. ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಸಿನಿಮಾ 10 ವಿಭಾಗಗಳಲ್ಲಿ ಆಯ್ಕೆಗೊಂಡರೆ, ಜಾತಿರತ್ನಲು ಮತ್ತು ಉಪ್ಪೇನ ಸಿನಿಮಾಗಳು ತಲಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ಅಂಖಡ, ಪುಷ್ಪ, ಲವ್‌ ಸ್ಟೋರಿ, ಜಾತಿ ರತ್ನಲು ಮತ್ತು ಉಪ್ಪೇನ ಸಿನಿಮಾಗಳು ಅತ್ಯುತ್ತಮ ಚಿತ್ರ ಪಟ್ಟಿಯಲ್ಲಿವೆ.

Image
tollywood
  • ಕಾಲಿವುಡ್‌ 

ಧನುಷ್‌ ನಟನೆಯ ಕರ್ಣನ್‌ 10 ವಿಭಾಗಗಳಲ್ಲಿ, ಶಿವ ಕಾರ್ತಿಕೇಯನ್‌ ಅಭಿನಯದ ಡಾಕ್ಟರ್‌ 9 ವಿಭಾಗಗಳಲ್ಲಿ, ದಳಪತಿ ವಿಜಯ್‌ ಅಭಿನಯದ ಮಾಸ್ಟರ್‌ ಮತ್ತು ಕಂಗನಾ ರಣಾವತ್‌ ಮುಖ್ಯಭೂಮಿಕೆಯ ತಲೈವಿ ಸಿನಿಮಾಗಳು ತಲಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ಡಾಕ್ಟರ್‌, ಸರಪಟ್ಟ ಪರಂಬರೈ, ಕರ್ಣನ್‌, ಮಾನಾಡು ಮತ್ತು ತಲೈವಿ ಹಾಗೂ ಮಂಡೇಲಾ ಸಿನಿಮಾಗಳು ಅತ್ಯುತ್ತಮ ಚಿತ್ರ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

Image
kollywood
  • ಮಾಲಿವುಡ್‌

ಟೊವಿನೊ ಥಾಮಸ್‌ ಮುಖ್ಯಭೂಮಿಕೆ ನಿಭಾಯಿಸಿದ್ದ ಮಿನ್ನಲ್‌ ಮುರಳಿ ಸಿನಿಮಾ 10 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದರೆ, ದುಲ್ಕರ್‌ ಸಲ್ಮಾನ್‌ ಅಭಿನಯದ ಕುರುಪ್‌ ಸಿನಿಮಾ 8 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಫಹಾದ್‌ ಫಾಸಿಲ್‌ ನಟನೆಯ ಮಾಲಿಕ್‌ ಮತ್ತು ಜೋಜಿ ಸಿನಿಮಾಗಳು ತಲಾ 6 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿವೆ. ಮಿನ್ನಲ್‌ ಮುರಳಿ, ಕುರುಪ್‌, ದಿ ಗ್ರೇಟ್‌ ಇಂಡಿಯನ್‌ ಕಿಚನ್‌, ತಿಂಗಳಾಯ್ಚ ನಿಶ್ಚಯಂ, ಜೋಜಿ ಸಿನಿಮಾಗಳು ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿವೆ. 

Image
mollywood

ಈ ಬಾರಿಯ ಸೈಮಾ ಪ್ರಶಸ್ತಿ ಸಮಾರಂಭ ಸೆಪ್ಟೆಂಬರ್‌ 10 ಮತ್ತು 11ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್