ಗುಡ್‌ ಬೈ | ಸೂತಕದ ಮನೆಯಲ್ಲಿ ಬಾಂಧವ್ಯದ ಹುಡುಕಾಟ

ಒಂದೇ ಮಾತಿನಲ್ಲಿ ಹೇಳಬೇಕು ಎಂದಾದರೆ ʼಗುಡ್‌ ಬೈʼ ಒಟಿಟಿ ವೇದಿಕೆಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಆದರೆ, ಈ ಚಿತ್ರವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಸಾಹಸಕ್ಕೆ ವಿಕಾಸ್‌ ಕೈ ಹಾಕಿದ್ದು ಯಾಕೆ ಎಂಬುದು ಅರ್ಥವಾಗಲಿಲ್ಲ.
Goodbye review

ಚಿತ್ರ: ಗುಡ್‌ ಬೈ | ನಿರ್ದೇಶನ: ವಿಕಾಸ್‌ ಬಹ್ಲ್‌ | ತಾರಾಗಣ: ಅಮಿತಾಬ್‌ ಬಚ್ಚನ್‌, ನೀನಾ ಗುಪ್ತಾ, ಆಶಿಷ್‌ ವಿದ್ಯಾರ್ಥಿ, ರಶ್ಮಿಕಾ ಮಂದಣ್ಣ, ಪವೇಲ್‌ ಗುಲಾಟಿ, ಸುನಿಲ್‌ ಗ್ರೋವರ್‌ | ಭಾಷೆ: ಹಿಂದಿ | ಸಂಗೀತ ನಿರ್ದೇಶನ : ಅಮಿತ್‌ ತ್ರಿವೇದಿ | ಛಾಯಾಗ್ರಹಣ : ಸುಧಾಕರ್‌ ರೆಡ್ಡಿ ಯಕ್ಕಂಟಿ | ನಿರ್ಮಾಪಕರು : ವಿಕಾಸ್‌ ಬಹ್ಲ್‌, ಏಕ್ತಾ ಕಪೂರ್‌, ಶೋಭಾ ಕಪೂರ್‌ |

ʼಕ್ವೀನ್‌ʼ, ʼಸೂಪರ್‌ 30ʼಯಂಹತ ಸೂಪರ್‌ ಹಿಟ್‌ ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿಕಾಸ್‌ ಬಹ್ಲ್‌ ಈ ಬಾರಿ 'ಗುಡ್‌ ಬೈ' ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಂಡಿದ್ದಾರೆ. ಇದು ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಚೊಚ್ಚಲ ಬಾಲಿವುಡ್‌ ಚಿತ್ರ ಎಂಬುದು ಕೂಡ ಗಮನಾರ್ಹ.

Eedina App

ʼಗುಡ್‌ ಬೈʼ, ಸಾವಿನ ಮನೆಯನ್ನು ಕೇಂದ್ರವಾಗಿರಿಸಿ ಮೂಡಿಬಂದಿರುವಂತಹ ಚಿತ್ರ. ಗಾಯಿತ್ರಿ ಮತ್ತು ಹರೀಶ್‌ ಎಂಬ ವೃದ್ಧ ದಂಪತಿ. ಅವರಿಗೆ ಒಂದಿಷ್ಟು ಮಂದಿ ಮಕ್ಕಳಿದ್ದಾರೆ. ಆದರೆ, ಯಾರೂ ಆಪತ್ತಿಗೆ ಆಗುವವರಲ್ಲ. ಎಲ್ಲರೂ ದೂರದ ಊರುಗಳಲ್ಲಿ ಬದುಕು ಕಟ್ಟಿಕೊಂಡು ದೊಡ್ಡ ಸಂಬಳದ ರೇಸ್‌ನಲ್ಲಿ ಮುಳುಗಿರುವವರು. ಗಾಯಿತ್ರಿ ಅಕಾಲಿಕವಾಗಿ ನಿಧನರಾಗುತ್ತಾರೆ. ಅವರ ಸಾವಿನ ಸುದ್ದಿ ಚದುರಿ ಹೋಗಿದ್ದ ಎಲ್ಲರನ್ನೂ ಮರಳಿ ಗೂಡಿಗೆ ಕರೆ ತರುತ್ತದೆ. ಅಪ್ಪ, ಅಮ್ಮ, ಹೂಟ್ಟಿದ ಊರು ಎಲ್ಲವನ್ನೂ ಮರೆತು ತಮ್ಮದೇ ಪ್ರಪಂಚದಲ್ಲಿ ಹಾಯಾಗಿದ್ದ ಮಕ್ಕಳು ತಾಯಿ ಇಲ್ಲದ, ಬರೀ ನೆನಪುಗಳೇ ತುಂಬಿಕೊಂಡಿರುವ ಸೂತಕದ ಮನೆಗೆ ಕಾಲಿಟ್ಟಾಗ ನಡೆದುಕೊಳ್ಳುವ ರೀತಿ, ಸಾವಿನ ಮನೆಯಲ್ಲಿ ಇಂದಿಗೂ ಜೀವಂತವಾಗಿರುವ ಮೌಢ್ಯಗಳು, ಹೀಗೆ ಹಲವು ವಿಚಾರಗಳ ಮೇಲೆ ಈ ಚಿತ್ರದ ಕಥೆ ಬೆಳಕು ಚೆಲ್ಲುತ್ತದೆ.

ವಿಕಾಸ್‌ ಈ ಚಿತ್ರದಲ್ಲಿ ಮೌಢ್ಯಗಳ ಆಚರಣೆಯ ಬಗ್ಗೆ ತಮ್ಮ ಪ್ರತಿರೋಧ ದಾಖಲಿಸಿದ್ದಾರೆ. ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕೆಲ ಆಚರಣೆಗಳ ಬಗ್ಗೆ ಸಹಾನುಭೂತಿ ತೋರಿದ್ದಾರೆ. ಸಾವಿನ ಮನೆಯ ಸುತ್ತ ಕಥೆ ಹೆಣೆಯುವುದು ಸುಲಭವಲ್ಲ ಎಂಬುದು ನನ್ನ ಅಭಿಪ್ರಾಯ. ನಿರೂಪಣೆ ಸ್ವಲ್ಪ ಎಲ್ಲೆ ಮೀರಿದರೂ ಅತಿರೇಕ ಎನ್ನಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದರೆ, ಇಡೀ ಕಥೆಯನ್ನು ಭಾವನಾತ್ಮಕವಾಗಿ ಮತ್ತು ವಾಸ್ತವದ ನೆಲೆಯಲ್ಲಿ ಕಟ್ಟಿಕೊಡಲು ಸಾಧ್ಯವಾಗಿರುವುದರಿಂದ ನಿರ್ದೇಶಕರು ಇಲ್ಲಿ ಗೆದ್ದಿದ್ದಾರೆ. ʼಗುಡ್‌ ಬೈʼ ಒಂದೊಳ್ಳೆಯ ಪ್ರಯೋಗಾತ್ಮಕ ಚಿತ್ರ ಎಂಬುದರಲ್ಲಿ ಅನುಮಾನವಿಲ್ಲ. ನಿರೂಪಣೆ ತೀರಾ ನಿಧಾನ ಎನ್ನಿಸುತ್ತದೆ. ಮೊದಲರ್ಧವಂತೂ ಪ್ರೇಕ್ಷಕನ ತಾಳ್ಮೆ ಬೇಡುತ್ತದೆ. ಇಂಟರ್‌ವಲ್‌ ಬಳಿಕ ನಿಧಾನಗತಿಯಲ್ಲಿ ಚಿತ್ರಕಥೆ ಮತ್ತು ಪಾತ್ರಗಳು ಭಾವನಾತ್ಮಕವಾಗಿ ಪ್ರೇಕ್ಷಕರ ಅಂತರಾಳಕ್ಕಿಳಿಯುತ್ತವೆ. ನೋಡುಗರಲ್ಲಿ ಪಾಪ ಪ್ರಜ್ಞೆಯನ್ನೂ ಹುಟ್ಟಿಸುತ್ತವೆ.

AV Eye Hospital ad

ಒಂದೇ ಮಾತಿನಲ್ಲಿ ಹೇಳಬೇಕು ಎಂದಾದರೆ ʼಗುಡ್‌ ಬೈʼ ಒಟಿಟಿ ವೇದಿಕೆಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಆದರೆ, ಈ ಚಿತ್ರವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಸಾಹಸಕ್ಕೆ ವಿಕಾಸ್‌ ಕೈ ಹಾಕಿದ್ದು ಯಾಕೆ ಎಂಬುದು ಅರ್ಥವಾಗಲಿಲ್ಲ.

ಆಮೆ ವೇಗದ ಚಿತ್ರಕಥೆಯನ್ನು ಅಚ್ಚುಕಟ್ಟಾಗಿ ಹೊತ್ತು ಸಾಗಿರುವುದು ʼಗುಡ್‌ ಬೈʼನ ಪಾತ್ರವರ್ಗ. ಅಮಿತಾಬ್‌ ಬಚ್ಚನ್‌ ತಮ್ಮ ವಯಸ್ಸಿಗೆ ತಕ್ಕನಾದ ಪಾತ್ರದಲ್ಲಿ ತೀರಾ ಸಹಜತೆಯಿಂದ ನಟಿಸಿದ್ದಾರೆ. ಹರೀಶ್‌ ಪಾತ್ರದಲ್ಲಿ ಬಚ್ಚನ್‌ ಅವರನ್ನು ನೋಡಿದಾಗ ಇಳಿ ವಯಸ್ಸಿನವರಲ್ಲಿ ಕಾಡುವ ಆತಂಕ ಮತ್ತು ಒಂಟಿತನಗಳ ಪರಿಚಯವಾಗುತ್ತದೆ. ಹಿರಿಯ ನಟಿ ನೀನಾ ಗುಪ್ತ ಮೃತ ಗಾಯಿತ್ರಿಯ ಪಾತ್ರದಲ್ಲಿ ಜೀವಿಸಿದ್ದಾರೆ. ರಶ್ಮಿಕಾ ಈ ಚಿತ್ರಕ್ಕೆ ಸ್ವತಃ ತಾವೇ ಹಿಂದಿಯಲ್ಲಿ ಡಬ್‌ ಮಾಡಿರುವುದು ವಿಶೇಷ. ಅವರ ನಟನೆ ಕೂಡ ಮೆಚ್ಚುವಂಥದ್ದು. ಆಶಿಷ್‌ ವಿದ್ಯಾರ್ಥಿ, ಸುನಿಲ್‌ ಗ್ರೋವರ್‌ ಕಡಿಮೆ ಸ್ಕ್ರೀನ್‌ ಸ್ಪೇಸ್‌ನಲ್ಲೇ ಗಮನ ಸೆಳೆಯುತ್ತಾರೆ. ಪವೇಲ್‌ ಗುಲಾಟಿ, ಅಭಿಷೇಕ್‌ ಖಾನ್‌ ಸೇರಿದಂತೆ ಎಲ್ಲ ಕಲಾವಿದರ ನಟನೆಯೂ ಅಭಿನಂದನೆಗೆ ಅರ್ಹವಾಗಿದೆ.

ಅಮಿತ್‌ ತ್ರಿವೇದಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ಗುನುಗುವ ಮಟ್ಟಿಗೆ ಇಲ್ಲವಾದರೂ ಚಿತ್ರಕಥೆಗೆ ಪೂರಕವಾಗಿವೆ. ಸುಧಾಕರ್‌ ರೆಡ್ಡಿ ಯಕ್ಕಂಟಿ ಅವರ ಛಾಯಾಗ್ರಹಣ ಚೆಂದವಾಗಿದೆ. 

ʼಗುಡ್‌ ಬೈʼ ಒಮ್ಮೆ ನೋಡಬಹುದಾದ ಚಿತ್ರ. ಥಿಯೇಟರ್‌ನಲ್ಲೊ ಅಥವಾ ಒಟಿಟಿಯಲ್ಲೊ ಎಂಬ ಆಯ್ಕೆ ನಿಮಗೆ ಬಿಟ್ಟಿದ್ದು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app