
- 'ಅನೇಕ್' ಮೂಲಕ ಅನೇಕ ಭಾರತಗಳನ್ನು ಪರಿಚಯಿಸುವ ಪ್ರಯತ್ನ
- ಆಯುಷ್ಮಾನ್ ಖುರಾನಾ ಅಭಿನಯದ ಮೊದಲ ಆಕ್ಷನ್ ಸಿನಿಮಾ
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅಭಿನಯದ ʼಅನೇಕ್ʼ ಚಿತ್ರದ ಟ್ರೈಲರ್ ಯುಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ದೇಶದಲ್ಲಿ ಈಶಾನ್ಯ ಭಾಗದ ಜನರ ಬಗೆಗಿರುವ ಕಡೆಗಣನೆ, ಭಾರತ ಸರ್ಕಾರ ಮತ್ತು ಈಶಾನ್ಯ ಭಾಗದ ಪ್ರತ್ಯೇಕತಾವಾದಿಗಳ ನಡುವಿನ ಸಂಘರ್ಷದ ನೈಜ ಕಥನವನ್ನು ನಿರ್ದೇಶಕ ಅನುಭವ್ ಸಿನ್ಹಾ 3 ನಿಮಿಷಗಳ ಟ್ರೈಲರ್ನಲ್ಲಿ ಅದ್ಭುತವಾಗಿ ತೋರಿಸಿದ್ದಾರೆ.
ʼಮುಲ್ಕ್ʼ, ʼಆರ್ಟಿಕಲ್ 15ʼ ಅಥವಾ ʼತಪ್ಪಡ್ʼನಂತಹ ನೈಜ ಕತೆಗಳನ್ನು ತೆರೆಗೆ ಅಳವಡಿಸಿ ಗೆದ್ದಿದ್ದ ಅನುಭವ್, ಈ ಬಾರಿಯೂ ಅಂಥದ್ದೇ ಸೂಕ್ಷ್ಮ ಕತೆಯೊಂದನ್ನು ಆಯ್ದುಕೊಂಡಿದ್ದಾರೆ. ಸರ್ಕಾರ ಮತ್ತು ದೇಶದ ಉಳಿದ ಭಾಗದ ಜನರು ಈಶಾನ್ಯ ಭಾಗದ ಮಂದಿಯನ್ನು ಕಂಡು ಮೂಗು ಮುರಿಯುವ ಖಯಾಲಿಗೆ ದಶಕಗಳ ಇತಿಹಾಸವಿದೆ ಎಂಬುದನ್ನು ಮನ ಮುಟ್ಟುವಂತೆ ನಿರೂಪಿಸಿದ್ದಾರೆ. ʼಅನೇಕ್ʼ, ಆಯುಷ್ಮಾನ್ ಖುರಾನಾ ಸಿನಿ ಬದುಕಿನ ಮೊದಲ ಆಕ್ಷನ್ ಸಿನಿಮಾ ಕೂಡ ಹೌದು.
ಭಾರತ ಸರ್ಕಾರ ಮತ್ತು ಈಶಾನ್ಯದ ಪ್ರತ್ಯೇಕತಾವಾದಿ ಸಂಘಟನೆಗಳ ಪ್ರಮುಖ ನಾಯಕ ಟೈಗರ್ ಸಾಂಘಾ ನಡುವೆ ಏರ್ಪಟ್ಟ ಶಾಂತಿ ಒಪ್ಪಂದದ ಸುತ್ತ ʼಅನೇಕ್ʼ ಕತೆಯನ್ನು ಹೆಣೆಯಲಾಗಿದೆ. ಚಿತ್ರದಲ್ಲಿ ಭಾರತ ಸರ್ಕಾರ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ನಡುವೆ ಶಾಂತಿ ಮಾತುಕತೆ ಏರ್ಪಡಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ಕಾರಿ ಅಧಿಕಾರಿಯಾಗಿ ಆಯುಷ್ಮಾನ್ ಕಾಣಿಸಿಕೊಂಡಿದ್ದಾರೆ.
ಶಾಂತಿ ಒಪ್ಪಂದಕ್ಕಾಗಿ ಭಾರತ ಸರ್ಕಾರ ನಡೆಸುವ ಪ್ರಯಾಸ, ಅದನ್ನು ವಿರೋಧಿಸಿ ದಂಗೆ ಏಳುವ ಸ್ಥಳೀಯ ಪ್ರತ್ಯೇಕತಾವಾದಿ ಜಾನ್ಸನ್ ಮತ್ತು ಗುಂಪು. ಬಾಕ್ಸಿಂಗ್ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂಬ ಆತನ ಮಗಳ (ಐಡೋ) ಹೆಬ್ಬಯಕೆ. ಅದಕ್ಕಾಗಿ ಆಕೆ ಪಡುವ ಶ್ರಮ, ಅನುಭವಿಸುವ ಅವಮಾನ ಎಲ್ಲವೂ ಮನ ಕಲುಕುವಂತಿದೆ.
“ಕೇಂದ್ರದ ಮಂತ್ರಿಯೊಬ್ಬರು ತ್ರಿಪುರವನ್ನು ಮಿಜೋರಾಂನ ರಾಜಧಾನಿ ಎನ್ನುತ್ತಾರೆ. ತ್ರಿಪುರ ಮತ್ತು ಮಿಜೋರಾಂ ಎರಡೂ ಬೇರೆ ಬೇರೆ ರಾಜ್ಯಗಳ ಹೆಸರು ಎಂಬುದು ಕೂಡ ನಮ್ಮನ್ನು ಆಳುವವರಿಗೆ ಗೊತ್ತಿಲ್ಲ, ಹೀಗಿರುವಾಗ ಈ ದೇಶದಲ್ಲಿ ನಮ್ಮ ಅಸ್ತಿತ್ವವೇನು” ಎಂದು ಶಾಂತಿ ಮಾತುಕತೆಯಲ್ಲಿ ಸರ್ಕಾರದ ಪ್ರತಿನಿಧಿ ಆಯುಷ್ಮಾನ್ರನ್ನು ಪ್ರಶ್ನಿಸುತ್ತಾರೆ.
ಟ್ರೈಲರ್ನ ಕೊನೆಯಲ್ಲಿ ತೆಲಂಗಾಣ ಮೂಲದ ಅಧಿಕಾರಿಯೊಬ್ಬರ ಜೊತೆಗೆ ಕಾಣಿಸಿಕೊಳ್ಳುವ ಆಯುಷ್ಮಾನ್, ಭಾರತೀಯರನ್ನು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂದು ಪ್ರತ್ಯೇಕಿಸಿ ನೋಡದೆ ಕೇವಲ ಭಾರತೀಯರು ಎಂದು ಕಾಣುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ನಾಯಕನ ಈ ಮಾತುಗಳು ಆತನ ಪಕ್ಕದ ಸೀಟ್ನಲ್ಲಿ ಕುಳಿತ ವ್ಯಕ್ತಿಗಿಂತ ಹೆಚ್ಚಾಗಿ ಭಾಷೆ, ಸಂಸ್ಕೃತಿ, ಪ್ರಾದೇಶಿಕತೆಯ ರಾಜಕಾರಣ ಮಾಡುವ ಪ್ರತಿಯೊಬ್ಬರನ್ನು ಕುಟುಕಿದಂತಿದೆ. ಏಕತೆ ಸಾರಿದ ಗಾಂಧೀಜಿಯ ಪುಸ್ತಕಕ್ಕೆ ಗುಂಡು ತೂರುವ ದೃಶ್ಯ ಚಿತ್ರದ ಗಂಭೀರತೆ ತಿಳಿಸುತ್ತದೆ.
ಶೀರ್ಷಿಕೆಯೇ ಸೂಚಿಸುವಂತೆ ನಿರ್ದೇಶಕರು ಅನೇಕ ಭಾರತಗಳ ಪರಿಚಯಕ್ಕೆ ಮುಂದಾಗಿದ್ದಾರೆ. ಅನುಭವ್ ಸಿನ್ಹಾ ಅವರೇ ಕತೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿರುವ ʼಅನೇಕ್ʼ ಚಿತ್ರಕ್ಕೆ ʼಟಿ ಸಿರೀಸ್ʼ ಖ್ಯಾತಿಯ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಮೇ 27ರಂದು ಚಿತ್ರ ತೆರೆಕಾಣಲಿದೆ. ಚಿತ್ರದ ಟ್ರೈಲರ್ ಯುಟ್ಯೂಬ್ನಲ್ಲಿ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.