ಬಹಿಷ್ಕಾರ ಅಭಿಯಾನದ ವಿರುದ್ಧ ಅರ್ಜುನ್ ಕಪೂರ್ ಕಿಡಿ

ಬಾಲಿವುಡ್‌ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಲೇ ಬಹಿಷ್ಕಾರ ಅಭಿಯಾನ ಶುರು ಮಾಡುವ ಕಿಡಿಗೇಡಿಗಳ ವಿರುದ್ಧ ನಟ ಅರ್ಜುನ್‌ ಕಪೂರ್‌ ಕಿಡಿ ಕಾರಿದ್ದಾರೆ.
arjun kapoor

ಬಾಲಿವುಡ್‌ ಸಿನಿಮಾಗಳನ್ನು ಬಹಿಷ್ಕರಿಸುವ ಅಭಿಯಾನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಈ ಬೆಳವಣಿಗೆಯ ಬಗ್ಗೆ ನಟ ಅರ್ಜುನ್‌ ಕಪೂರ್‌ ಪ್ರತಿಕ್ರಿಯಿಸಿದ್ದು, ಚಿತ್ರರಂಗದವರ ಮೌನವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಸ್ಟಾರ್ ಸಿನಿಮಾಗಳು ಮತ್ತು ಬಿಗ್ ಬಜೆಟ್ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಾಣುತ್ತಿವೆ. ಇದಕ್ಕೆ ಕಾರಣ ಬಾಲಿವುಡ್‌ನಲ್ಲಿ ಹೊಸ ಕಥೆಗಳ ಕೊರತೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಥಾಹಂದರ, ನಿರೂಪಣೆಯ ಕಾರಣಕ್ಕೆ ಸೋಲುತ್ತಿರುವ ಬಾಲಿವುಡ್ ಚಿತ್ರಗಳಿಗೆ ಬಹಿಷ್ಕಾರದ ಬಿಸಿ ಕೂಡ ತುಸು ಜೋರಾಗಿಯೇ ತಟ್ಟುತ್ತಿದೆ.

ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಮತ್ತು ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಸಿನಿಮಾಗಳೇ ಇದಕ್ಕೆ ತಾಜಾ ಉದಾಹರಣೆ. ಬಾಲಿವುಡ್ ಸಿನಿಮಾಗಳ ಸರಣಿ ಸೋಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ ʼಬಾಯ್ಕಾಟ್ ಬಾಲಿವುಡ್ʼ ಅಭಿಯಾನದ ಬಗ್ಗೆ ನಟ ಅರ್ಜುನ್ ಕಪೂರ್ ಮಾತನಾಡಿದ್ದಾರೆ.

ʼಈ ಬಹಿಷ್ಕಾರದಂತಹ ದುರುದ್ದೇಶಪೂರಿತ ಅಭಿಯಾನಗಳ ಬಗ್ಗೆ ನಾವು ಇಷ್ಟು ವರ್ಷಗಳ ಕಾಲ ಮೌನ ವಹಿಸಿದ್ದೇ ತಪ್ಪಾಗಿದೆ. ಬಹಿಷ್ಕಾರ ಹಾಕುವವರಿಗೆ ನಮ್ಮ ಸಿನಿಮಾಗಳು, ಸಿನಿಮಾಗಳಲ್ಲಿನ ನಮ್ಮ ಕೆಲಸಗಳೇ ಉತ್ತರ ಕೊಡುತ್ತವೆ ಎಂದು ತಾಳ್ಮೆ ಕಾಯ್ದುಕೊಂಡೆವು. ನಾವು ಸಹಿಸಿಕೊಂಡಿದ್ದೆ ಅಪಪ್ರಚಾರ ಮಾಡುವವರಿಗೆ ದಾರಿ ಮಾಡಿ ಕೊಟ್ಟಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗಳ ಬಗ್ಗೆ ಕಲಾವಿದರ ಬಗ್ಗೆ ಹಬ್ಬುವ ವದಂತಿಗಳಿಗೂ ವಾಸ್ತವಕ್ಕೂ ಅಜಗಜಾಂತರದ ವ್ಯತ್ಯಾಸವಿದೆ. ಈ ಅಪಪ್ರಚಾರ ಮತ್ತು ದುರುದ್ದೇಶಪೂರಿತ ಬಹಿಷ್ಕಾರದ ಅಭಿಯಾನಗಳನ್ನು ಮೆಟ್ಟಿ ಹಾಕಲು ಇಡೀ ಚಿತ್ರರಂಗ ಒಗ್ಗಟ್ಟಾಗಿ ನಿಲ್ಲಬೇಕು" ಎಂದಿದ್ದಾರೆ.

ನಟ ಆಮಿರ್‌ ಖಾನ್‌ 2015ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಅಸಹಿಷ್ಣುತೆಯ ಬಗ್ಗೆ ಮಾತನಾಡಿದ್ದರು. ಅಂದು ಅವರು ಮಾತನಾಡಿದ್ದ ವಿಡಿಯೋ ತುಣುಕನ್ನು ಬಳಸಿಕೊಂಡು ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಬಿಡುಗಡೆಗೆ ಸಿದ್ಧವಾಗುವ ಹೊತ್ತಿಗೆ ಆಮಿರ್‌ ಖಾನ್‌ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಲಾಯಿತು. ಈ ಅಭಿಯಾನ ಸಿನಿಮಾದ ಮೇಲೆ ಪ್ರಭಾವ ಬೀರಿದ್ದು ಸುಳ್ಳಲ್ಲ.

ಈ ಸುದ್ದಿ ಓದಿದ್ದೀರಾ? ಕುತೂಹಲ ಸೃಷ್ಟಿಸಿದ ನಿರ್ದೇಶಕ ಮನ್ಸೂರೆಯವರ ‘19 20 21’ ಚಿತ್ರದ ಪೋಸ್ಟರ್

ಅಕ್ಷಯ್‌ ಕುಮಾರ್‌ ನಟನೆಯ ರಕ್ಷಾ ಬಂಧನ್‌ ಸಿನಿಮಾ ಕೂಡ ಬಿಡುಗಡೆಗೂ ಮುನ್ನವೇ ಬಹಿಷ್ಕಾರ ಅಭಿಯಾನವನ್ನು ಎದುರಿಸಿತ್ತು. ರಕ್ಷಾ ಬಂಧನ್‌ ಚಿತ್ರದ ನಿರ್ದೇಶಕಿ ಕನಿಕಾ ಧಿಲ್ಲೋನ್‌ ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್‌ಗಳನ್ನು ಕೆದಕಿ ಅವರ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಕರೆ ನೀಡಲಾಗಿತ್ತು.  

ನಟ ಹೃತಿಕ್‌ ರೋಷನ್‌ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾವನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದ ಕಾರಣಕ್ಕೆ ಸದ್ಯ ಬಿಡುಗಡೆ ಸಿದ್ಧವಾಗಿರುವ ಅವರ ವೇದಾ ವಿಕ್ರಮ್‌ ಸಿನಿಮಾವನ್ನು ಬಹಿಷ್ಕರಿಸುವಂತೆ ಅಭಿಯಾನ ನಡೆಸಲಾಗುತ್ತಿದೆ.

ದೀಪಿಕಾ ಪಡುಕೊಣೆ ನಟನೆಯ ಪದ್ಮಾವತ್‌, ಪಿ ಕೆ, ಗಂಗೂಬಾಯಿ ಕಾತಿಯಾವಾಡಿ ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳು ತೀವ್ರವಾದ ಬಹಿಷ್ಕಾರದ ಭೀತಿಯನ್ನು ಎದುರಿಸಿದ್ದವು.

ನಿಮಗೆ ಏನು ಅನ್ನಿಸ್ತು?
0 ವೋಟ್