ಕೋವಿಡ್‌ ನಂತರ ಹೃದಯಾಘಾತದಿಂದ ಯುವಕರ ಸಾವು: ಐಸಿಎಂಆರ್‌ಗೆ ರಾಜಾರಾಂ ತಲ್ಲೂರರ ಪತ್ರ ಮತ್ತೆ ಚರ್ಚೆಗೆ

ಇನ್ನೊಬ್ಬ ಯುವನಟ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವಾಗ, ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಆಗಸ್ಟ್‌ ತಿಂಗಳಲ್ಲೇ ಐಸಿಎಂಆರ್‌ ಗೆ ಈ ಕುರಿತು ಬರೆದಿದ್ದ ಪತ್ರವು ಮತ್ತೆ ಚರ್ಚೆಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿ, ಶಕ್ತಿಯುತವಾಗಿದ್ದ ನಟರು, ಕಲಾವಿದರು ಹಾಗೂ ಯುವಕರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಮತ್ತು ಬೇರೆ ಸಂದರ್ಭಗಳಲ್ಲಿ ಹೃದಯಾಘಾತದಿಂದ ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು ಆಗಸ್ಟ್‌ ತಿಂಗಳಲ್ಲೇ ಐಸಿಎಂಆರ್‌ಗೆ ಪತ್ರ ಬರೆದಿದ್ದರು. ಆದರೆ ಈವರೆಗೂ ಐಸಿಎಂಆರ್‌ ಉತ್ತರಿಸುವ ಗೋಜಿಗೇ ಹೋಗಿಲ್ಲ ಎಂದು ತಿಳಿದು ಬಂದಿದೆ.

ಕಳೆದ ಒಂದು ವರ್ಷದಲ್ಲೇ ಹಾಸ್ಯನಟ ರಾಜು ಶ್ರೀವಾಸ್ತವ (58), ಕೆಕೆ ಎಂದೇ ಪ್ರಖ್ಯಾತಿ ಪಡೆದಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (53), ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ (40), ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (46), ನಿರ್ಮಾಪಕ ರಾಜ್ ಕೌಶಲ್ (50), ನಟ ರಾಜೀವ್ ಕಪೂರ್ (58) ಹಾಗೂ ತಮಿಳು ನಟ ವಿವೇಕ್ (59), ಚಿರಂಜೀವಿ ಸರ್ಜಾ ಇವರೆಲ್ಲಾ ಆರೋಗ್ಯವಂತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Eedina App

ಇಂತಹದೇ ಘಟನೆ ನಿನ್ನೆಯೂ ನಡೆದಿದ್ದು, 46 ವರ್ಷದ ಬಾಲಿವುಡ್‌ನ ಖ್ಯಾತ ಕಿರುತೆರೆ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು, ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.

AV Eye Hospital ad

ಈ ಬೆನ್ನಲ್ಲೇ ಈ ರೀತಿ ಸಾವನ್ನಪ್ಪುತಿರುವವರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಟ್ವಿಟರ್‌ನಲ್ಲಿ #ಹಾರ್ಟ್ಅಟ್ಯಾಕ್ ಹ್ಯಾಷ್‌ ಟ್ಯಾಗ್‌ ಚರ್ಚೆಗೆ ಒಳಗಾಗಿದೆ. "ಜಿಮ್‌ನಲ್ಲಿ ಭಾರಿ ವರ್ಕೌಟ್‌ಗಳು ಹಲವರ ಪ್ರಾಣ ತೆಗೆಯುತ್ತಿವೆ. ಸಿದ್ಧಾರ್ಥ್ ಶುಕ್ಲಾ, ಪುನೀತ್ ರಾಜ್‌ಕುಮಾರ್, ರಾಜು ಶ್ರೀವಾಸ್ತವ್ ಈಗ ಸಿದ್ಧಾಂತ್ ವೀರ್ ಸೂರ್ಯವಂಶಿ. ದಯವಿಟ್ಟು ಯೋಗಕ್ಕೆ ಹೋಗಿ” ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. 

ಮತ್ತೊಬ್ಬರು ಟ್ವೀಟ್ ಮಾಡಿ, “46 ವರ್ಷದ ಇನ್ನೊಬ್ಬ ನಟ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಹೆಸರುವಾಸಿಯಾಗಿದ್ದ ನಟ ಸಿದ್ದಾಂತ್ ವೀರ್ ಅವರು ಕೋವಿಡ್ ನಂತರ ವ್ಯಾಯಾಮ ಮಾಡುತ್ತ ಮೃತಪಟ್ಟಿದ್ದಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು” ಎಂದು ಕೋವಿಡ್‌ನಿಂದಾಗುತ್ತಿರುವ ಪರಿಣಾಮದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.  

“ಕೋವಿಡ್ ಮತ್ತು ಲಸಿಕೆಗಳು ಒಳಗಿನಿಂದ ನಮ್ಮನ್ನು ತೀವ್ರವಾಗಿ ಹಾನಿಗೊಳಿಸಿವೆ. ಈಗ ನಾವು ಅದಕ್ಕೆ ನಮ್ಮ ಜೀವವನ್ನೇ ಪಣಕ್ಕಿಡಬೇಕಾಗಿದೆ #ಹಾರ್ಟ್ಅಟ್ಯಾಕ್” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. 

ಇಂತಹ ಸಾವುಗಳ ಕುರಿತು ಆತಂಕಿತರಾಗಿದ್ದ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು ಕಳೆದ ಆಗಸ್ಟ್‌ನಲ್ಲೇ ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ನ (ಐಸಿಎಂಆರ್) ನಿರ್ದೇಶಕರಿಗೆ ಇಂತಹ ಸಾವುಗಳ ಬಗ್ಗೆ ಅಧ್ಯಯನ ಮಾಡುವಂತೆ ಪತ್ರ ಬರೆದಿದ್ದರು.

'ಉದಯವಾಣಿ' ಪತ್ರಿಕೆಯ ಆರೋಗ್ಯ ಪುರವಣಿಯ ಸಂಪಾದಕರಾಗಿದ್ದ ರಾಜಾರಾಂ ತಲ್ಲೂರು ಅವರು ಕೋವಿಡ್‌ ಕಾಲದ ವಿದ್ಯಮಾನಗಳ ಕುರಿತು ʼಕರಿಡಬ್ಬಿʼ ಎಂಬ ವಿಶಿಷ್ಟ ಪುಸ್ತಕವನ್ನೂ ಹೊರತಂದಿದ್ದಾರೆ. ಮತ್ತೆ ಇನ್ನೊಬ್ಬ ನಟ ಸಾವನ್ನಪ್ಪಿರುವಾಗ ತಾವು ಅಂದು ಬರೆದಿದ್ದ ಪತ್ರವನ್ನು ತಲ್ಲೂರು ಅವರು ತಮ್ಮ ಫೇಸ್‌ಬುಕ್‌ನಲ್ಲಿ ನೆನೆಪಿಸಿಕೊಂಡಿದ್ದಾರೆ.

ʼಐಸಿಎಂಆರ್‌ ತಲ್ಲೂರರ ಪತ್ರಕ್ಕೇನಾದರೂ ಉತ್ತರ ಕೊಟ್ಟಿದೆಯೇ?ʼ ಎಂದು ಈ ದಿನ.ಕಾಮ್ ರಾಜಾರಾಂ ತಲ್ಲೂರು ಅವರನ್ನು ಸಂಪರ್ಕಿಸಿತು.

"ಆಗಸ್ಟ್ 18,2022ರಂದು ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿ ಮತ್ತು ಭಾರತೀಯ ವೈದ್ಯವಿಜ್ಞಾನ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕರೂ ಆದ ರಾಜೇಶ್ ಭೂಷಣ್ ಅವರಿಗೆ ಈ-ಮೇಲ್ ಮೂಲಕ ಪತ್ರ ಬರೆದಿದ್ದೆ. ಆದರೆ ಈವರೆಗೂ ಒಂದೇ ಒಂದು ಉತ್ತರ ನನಗೆ ಸಿಕ್ಕಿಲ್ಲ" ಎಂದು ತಿಳಿಸಿದ್ದಾರೆ.

Rajaram Tallur Letter
ಆಗಸ್ಟ್ 18,2022ರಂದು​​​​​ ಐಸಿಎಂಆರ್‌ಗೆ ಬರೆದಿರುವ ಪತ್ರದ ಪ್ರತಿ

 

“ಕಳೆದ ಎರಡೂವರೆ ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಸಂಭವಿಸಿದ ಜೀವನಷ್ಟಗಳ ಜೊತೆ ಜೊತೆಗೇ ದೊಡ್ಡ ಪ್ರಮಾಣದಲ್ಲಿ ಹೃದಯಾಘಾತದ ಕಾರಣಕ್ಕೆ ಸಾವುಗಳು ಸಂಭವಿಸಿವೆ. ಈಗ ಕೋವಿಡ್ ತೀವ್ರತೆ ಕಡಿಮೆ ಆದ ಬಳಿಕವೂ ಸಾವಿನ ಸರಣಿ ಮುಂದುವರಿದಿದ್ದು, ದೇಶದೊಳಗೆ ದೊಡ್ಡ ಸಂಖ್ಯೆಯಲ್ಲಿ ಜನರು ಹೃದಯಾಘಾತಕ್ಕೆ ಬಲಿ ಆಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, 30- 55ರ ವರ್ಗದಲ್ಲೇ ಈ ರೀತಿಯ ಸಾವುಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಕಳೆದ ಒಂದು ವಾರದಲ್ಲೇ ಪತ್ರಿಕೆಗಳಲ್ಲಿ ಇಂತಹ ಕನಿಷ್ಠ 5ರಿಂದ 6 ಸಾವಿನ ವರದಿಗಳಾಗಿವೆ. ಹೀಗೆ ಅನಿರೀಕ್ಷಿತವಾಗಿ ನಿಧನ ಹೊಂದಿದವರೆಲ್ಲರೂ ಎಳೆಯರು ಮತ್ತು ಆರೋಗ್ಯವಂತರಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು. ಇದೊಂದು ಅಪಾಯಕಾರಿ ಬೆಳವಣಿ. ಐಸಿಎಂಆರ್‌ನಂತಹ ಸುಸಜ್ಜಿತ ಸಂಶೋಧನಾ ಸಂಸ್ಥೆ ಈ ವಿಚಾರದಲ್ಲಿ ಆಳವಾಗಿ ಅಧ್ಯಯನ ಮತ್ತು ಸಂಶೋಧನೆ ನಡೆಸಿ, ಇದಕ್ಕೆ ಕಾರಣ ಪತ್ತೆಹಚ್ಚುವುದು ಬಹಳ ಮುಖ್ಯ” ಎಂಬುದು ರಾಜಾರಾಂ ತಲ್ಲೂರು ಅವರ ಪತ್ರದ ಕಾಳಜಿಯಾಗಿತ್ತು.

ಈ ಸುದ್ದಿ ಓದಿದ್ದೀರಾ? ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಯುವಜನತೆ ; ನೆಟ್ಟಿಗರಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದ ಕೋವಿಡ್ ವ್ಯಾಕ್ಸಿನ್!

“ಜನಸಾಮಾನ್ಯರಲ್ಲಿ ಈ ರೀತಿಯ ಹಠಾತ್ ಸಾವಿನ ಬಗ್ಗೆ ಹಲವು ಅಪನಂಬಿಕೆಗಳು ತಲೆ ಎತ್ತಿವೆ. ಈ ರೀತಿಯ ಸಾವುಗಳಿಗೆ ಕೋವಿಡೋತ್ತರ ದೀರ್ಘಕಾಲಿಕ ಪರಿಣಾಮಗಳು ಅಥವಾ ಕೋವಿಡ್ ಲಸಿಕೆ ಅಥವಾ ಮಾನಸಿಕ ಒತ್ತಡ ಅಥವಾ ಜೀವನ ಶೈಲಿ ಕಾರಣ ಆಗಿರಬಹುದೆಂಬ ಸಂಶಯಗಳು ಜನಮನದಲ್ಲಿ ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಾರಂಭಿಸಬೇಕು ಮತ್ತು ಈ ರೀತಿಯ ಸಾವುಗಳ ಮಾಹಿತಿಗಳನ್ನು ಸಂಗ್ರಹಿಸಿ, ಅದಕ್ಕೆ ಕಾರಣಗಳ ವಿಶ್ಲೇಷಣೆ ನಡೆಸಬೇಕು ಮತ್ತು ಅಂತಹ ಜೀವನಷ್ಟವನ್ನು ತಡೆಯಲು ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಐಸಿಎಂಆರ್‌ಗೆ ಅವರು ಒತ್ತಾಯಿಸಿದ್ದರು.

ಕೋವಿಡೋತ್ತರ ಕಾಲದಲ್ಲಿ ಹಲವು ವದಂತಿಗಳೂ ಹರಡುತ್ತಿದ್ದು, ಕ್ರಿಯಾಶೀಲ ಹಿರಿಯ ಪತ್ರಕರ್ತರೊಬ್ಬರು ಎತ್ತಿರುವ ಈ ಪ್ರಶ್ನೆಗಳಿಗೆ, ವೈದ್ಯಕೀಯ ಲೋಕ ತುರ್ತಾಗಿ ಉತ್ತರ ಕಂಡುಕೊಳ್ಳುವ ಅಗತ್ಯವಂತೂ ಇದೆ; ಜೊತೆಗೆ ಇದು ಭಾರತದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಕರ್ತವ್ಯವಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app