
- ಸಕ್ಕರೆ ಇಳುವರಿ ಕಡಿಮೆ ಇರುವ ರಾಜ್ಯಗಳಲ್ಲಿ ಜಾರಿಯಿದೆ ಸೂಕ್ತ ಎಫ್ಆರ್ಪಿ ದರ!
- ಮನವೊಲಿಸಲು ಬಂದ ಸಕ್ಕರೆ ಆಯುಕ್ತರಿಗೆ ಛೀಮಾರಿ ಹಾಕಿದ ಕಬ್ಬು ಬೆಳೆಗಾರರು
ಕಬ್ಬಿಗೆ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ (ಎಫ್ಆರ್ಪಿ) ದರ ನಿಗದಿಗೆ ಒತ್ತಾಯಿಸಿ ಮತ್ತು ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಕಬ್ಬು ಬೆಳೆಗಾರರು ಬೆಂಗಳೂರಿನ ಮುಖ್ಯಮಂತ್ರಿ ಮನೆ ಮುಂದೆ ʼಉಗುಳುವ ಚಳವಳಿʼ ನಡೆಸಿದ್ದು, ನಂತರ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹಕಚೇರಿ ಎದುರು ಧರಣಿ ನಡೆಸಲು ತಯಾರಿ ನಡೆಸುತ್ತಿದ್ದ ರೈತ ಮುಖಂಡರ ಚೂತೆ ಉಪ್ಪಾರಪೇಟೆ ಪೊಲೀಸರು ಮಾತುಕತೆ ನಡೆಸಿದ ಬಳಿಕ ತಮ್ಮ ಹೋರಾಟವನ್ನು ಸ್ವತಂತ್ರ ಉದ್ಯಾನವನಕ್ಕೆ ಸ್ಥಳಾಂತರಿಸಿದರು.
"ಕಬ್ಬಿಗೆ ಹೆಚ್ಚುವರಿ ದರ ನಿಗದಿ ಮಾಡಲು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು ತೀರ್ಮಾನ ಕೈಗೂಳುವ ಭರವಸೆ ನೀಡಿತ್ತು. ಆದರೆ, ಇದುವರೆಗೂ ಆ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿಲ್ಲ. ಸಕ್ಕರೆ ಸಚಿವರು ನುಡಿದಂತೆ ನಡೆಯುತ್ತಿಲ್ಲ. ಹಾಗಾಗಿ ರೈತ ವಿರೋಧಿ ಸರ್ಕಾರವನ್ನ ಬೆತ್ತಲು ಮಾಡಲು ಈ ರೀತಿ ಚಳುವಳಿ ಹಮ್ಮಿಕೊಳ್ಳಲಾಗಿದೆ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
"ಕರ್ನಾಟಕ ರಾಜ್ಯಕ್ಕಿಂತ ಸಕ್ಕರೆ ಇಳುವರಿ ಕಡಿಮೆ ಇರುವ ಪಂಜಾಬ್ ರಾಜ್ಯದಲ್ಲಿ ಎಫ್ಆರ್ಪಿ ದರ ₹3800, ಹರಿಯಾಣದಲ್ಲಿ ₹3750, ಉತ್ತರ ಪ್ರದೇಶದಲ್ಲಿ ₹3500, ಗುಜರಾತ್ನಲ್ಲಿ ₹4400, ಮಹಾರಾಷ್ಟ್ರದಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ಹೊರತುಪಡಿಸಿ ₹3200 ದರ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೆ ಭರಿಸಿ ₹3150 ದರ ನಿಗದಿಪಡಿಸಿದ್ದಾರೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರ ರೈತದ್ರೋಹಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಆದಿಯಾಗಿ ಕೃಷಿ, ಸಕ್ಕರೆ, ಕೈಗಾರಿಕಾ ಮಂತ್ರಿಗಳು ಸುಳ್ಳು ಹೇಳುತ್ತಾ ಸಕ್ಕರೆ ಕಾರ್ಖಾನೆ ಮಾಲೀಕರ ಗುಲಾಮಗಿರಿ ಮಾಡುತ್ತಿದ್ದಾರೆ ಛೀ, ಥೂ.." ಎಂದು ರೈತರು ಆಕ್ರೋಶಭರಿತರಾಗಿ 'ಉಗುಳುವ ಚಳವಳಿ' ನಡೆಸಿದ್ದಾರೆ.
ಈ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, "ರಾಜ್ಯದಲ್ಲಿ ಕಬ್ಬು ಕಟಾವು ಮಾಡಲು 16-18 ತಿಂಗಳಾಗುತ್ತಿದೆ. ಈ ವಿಳಂಬ ನೀತಿಯಿಂದ ರೈತರಿಗೆ ನಷ್ಟವಾಗುತ್ತಿದೆ. ಹಾಗಾಗಿ ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣವನ್ನು ಕಾರ್ಖಾನೆಗಳೇ ನೀಡುವಂತಾಗಬೇಕು. ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾರಿ ಮಾಡಬೇಕು. ಸರ್ಕಾರ ರೈತರಿಗೆ ಹುಸಿ ಭರವಸೆ ಕೊಡುವುದನ್ನು ನಿಲ್ಲಿಸಿ ನೇರವಾಗಿ ರೈತರೊಂದಿಗೆ ಮಾತುಕತೆ ನಡೆಸಿ ಟನ್ ಕಬ್ಬಿಗೆ ₹3500 ದರ ನಿಗದಿ ಮಾಡಬೇಕು" ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು
ಸಕ್ಕರೆ ಆಯುಕ್ತರ ವಿರುದ್ಧ ರೈತರ ಆಕ್ರೋಶ
ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಅಯುಕ್ತ ಶಿವಾನಂದ ಕಿಲಕೇರಿ, ಪ್ರತಿಭಟನಾನಿರತ ಕಬ್ಬು ಬೆಳೆಗಾರರನ್ನು ಭೇಟಿ ಮಾಡಿ, "ತಜ್ಞರ ವರದಿ ಬಂದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. 24ರಂದು ಕಾರ್ಖಾನೆ ಮಾಲೀಕರ ಮತ್ತೊಂದು ಸಭೆ ಕರೆಯಲಾಗಿದೆ" ಎಂದು ಹೇಳಿದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ರೈತರು ಸರಣಿ ಪ್ರಶ್ನೆಗಳನ್ನು ಮುಂದಿಟ್ಟು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. "ಇದು ನಿರಂತರವಾಗಿ ನಮ್ಮ ಹೋರಾಟವನ್ನು ಸ್ಥಗಿತಗೊಳಿಸಲು ಮಾಡುವ ತಂತ್ರಗಳಾಗಿರುವುದರಿಂದ ಸರ್ಕಾರ ಹೆಚ್ಚುವರಿ ದರ ನಿಗದಿ ಮಾಡುವ ತನಕ ಚಳುವಳಿ ಕೈ ಬಿಡುವುದಿಲ್ಲ. ನಮಗೆ ಹುಸಿ ಭರವಸೆಗಳು ಬೇಡ. ಮುಖ್ಯಮಂತ್ರಿಗಳಿಗೆ ವರದಿ ಕೊಟ್ಟು ನ್ಯಾಯಯುತ ದರ ನಿಗದಿಪಡಿಸಿ" ಎಂದು ಅಕ್ರೋಶ ವ್ಯಕ್ತಪಡಿಸಿದರು. ರೈತರ ಮನವೊಲಿಸಲು ವಿಫಲರಾದ ಆಯುಕ್ತರು ವಾಪಸ್ಸಾದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ನಾರಾಯಣರೆಡ್ಡಿ, ಸುರೇಶ್ ಮ ಪಾಟೀಲ್, ಬರಡನಪುರ ನಾಗರಾಜ್, ಪರಶುರಾಮ, ಕಿರಗಸೂರು ಶಂಕರ್, ಗುರುಸಿದ್ದಪ ಕೂಟಗಿ, ಕಲ್ಲಪ್ಪ ಬಿರಾದಾರ, ಸಿದ್ದೇಶ್, ಹಾಡ್ಯರವಿ, ಮಂಜುನಾಥ್, ಎಸ್ ಬಿ ಸಿದ್ನಾಳ, ಪರಶಿವಮೂರ್ತಿ, ಯತಿರಾಜ್ ನಾಯ್ಡು, ಸೇರಿದಂತೆ ಹಲವರಿದ್ದರು.