ವೆಬ್‌ ಸರಣಿಯಲ್ಲಿ ಮಿಂಚಲು ಸಜ್ಜಾದ ಬರಾಕ್‌ ಒಬಾಮ

ಬರಾಕ್‌ ಒಬಾಮ 2017ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ರಾಜಕೀಯದಿಂದ ದೂರ ಉಳಿದಿರುವ ಅವರು ಸದ್ಯ ನಟನೆ ಮತ್ತು ನಿರೂಪಣೆಯತ್ತ ಒಲವು ತೋರಿದ್ದಾರೆ.

ಅಧ್ಯಕ್ಷಗಿರಿಯಿಂದ ಕೆಳಗಿಳಿದ ಬಳಿಕ ಒಬಾಮ ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಸಾಕ್ಷ್ಯಚಿತ್ರ ಸರಣಿಯ ನಿರೂಪಕರಾಗಿ ಮಿಂಚಲು ಸಜ್ಜಾಗಿದ್ದಾರೆ.

'ನೆಟ್‌ಫ್ಲಿಕ್ಸ್‌ʼ ನಿರ್ಮಾಣದಲ್ಲಿ "ಅವರ್‌ ಗ್ರೇಟ್‌ ನ್ಯಾಷನಲ್‌ ಪಾರ್ಕ್ಸ್‌" ಹೆಸರಿನ ಹೊಸ ವೆಬ್‌ ಸರಣಿ ಮೂಡಿ ಬರುತ್ತಿದೆ. ಜಗತ್ತಿನ ನಾನಾ ದೇಶಗಳ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯತೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಸಲುವಾಗಿ "ಅವರ್‌ ಗ್ರೇಟ್‌ ನ್ಯಾಷನಲ್‌ ಪಾರ್ಕ್ಸ್‌" ಸರಣಿ ತರಲಾಗುತ್ತಿದೆ. ಸದ್ಯ ಬರಾಕ್‌ ಒಬಾಮ ಈ ಸರಣಿಯ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಒಬಾಮಾ ನಿರೂಪಣೆಯಲ್ಲಿ ಮೂಡಿ ಬಂದಿರುವ "ಅವರ್‌ ಗ್ರೇಟ್‌ ನ್ಯಾಷನಲ್‌ ಪಾರ್ಕ್ಸ್‌" ಸರಣಿಯ ಮೊದಲ ಸಂಚಿಕೆ ಏಪ್ರಿಲ್‌ 13ರಂದು ʼನೆಟ್‌ಫ್ಲಿಕ್ಸ್‌ʼನಲ್ಲಿ ಪ್ರಸಾರವಾಗುತ್ತಿದೆ. ಅಮೆರಿಕ, ಚಿಲಿ, ಇಂಡೋನೇಷ್ಯಾ ಮತ್ತು ಕೀನ್ಯಾ ಸೇರಿದಂತೆ ಹಲವು ದೇಶಗಳ ದಟ್ಟಾರಣ್ಯಗಳು, ಕಡಿದಾದ ಕಣಿವೆಗಳು, ಕಡಲ ತೀರಗಳಲ್ಲಿ ಈ ವೆಬ್‌ ಸರಣಿಯ ರಮಣೀಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ʼಅವರ್‌ ಗ್ರೇಟ್‌ ನ್ಯಾಷನಲ್‌ ಪಾರ್ಕ್ಸ್‌ʼ ಸರಣಿಯ ʼಟ್ರೈಲರ್‌ʼ ಈಗಾಗಲೇ ಯಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದು, 8 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. 

ಅಮೆರಿಕದ ಅಧ್ಯಕ್ಷ ಸ್ಥಾನ ಅಲಂಕರಿಸಿ ಅಲ್ಲಿನ ಆಡಳಿತಾತ್ಮಕ ಜವಾಬ್ದಾರಿಗಳನ್ನು  ನಿಭಾಯಿಸಿದ್ದ ಒಬಾಮ, ಬೇರೆ ಬೇರೆ ದೇಶಗಳ ಜೀವ ವೈವಿಧ್ಯತೆ ಮತ್ತು ಪ್ರಕೃತಿ ಸೌಂದರ್ಯವನ್ನು ಜನರಿಗೆ ಮನ ಮುಟ್ಟುವಂತೆ ಹೇಗೆ ನಿರೂಪಿಸಲಿದ್ದಾರೆ ಎಂದು ಇನ್ನಷ್ಟೇ ತಿಳಿಯಬೇಕಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app