ಈ ಬಾರಿ ಬಿಗ್‌ಬಾಸ್‌ ಟಿ.ವಿಯಲ್ಲಿ ಬರುವುದಿಲ್ಲ | ಮಾಹಿತಿ ನೀಡಿದ ಕಿಚ್ಚ

kichcha
  • ಒಟಿಟಿಯಲ್ಲಿ ಪ್ರಸಾರವಾಗಲಿದೆ ಬಿಗ್‌ ಬಾಸ್‌
  • 'ವೂಟ್‌ ಸೆಲೆಕ್ಟ್‌' ಪ್ರಚಾರಕ್ಕೆ ಹೊಸ ತಂತ್ರ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ ಹೊಸ ʼಪ್ರೋಮೊʼ ಬಿಡುಗಡೆಯಾಗಿದೆ. ʼಪ್ರೋಮೊʼದ ವಿಡಿಯೊದಲ್ಲಿ ಭಿನ್ನ ಲುಕ್‌ನಲ್ಲಿ ಮಿಂಚಿರುವ ನಟ, ನಿರೂಪಕ ಕಿಚ್ಚ ಸುದೀಪ್, ಒಟಿಟಿಯ ಬಿಗ್‌ಬಾಸ್‌ನ ಮೊದಲನೇ ಸೀಸನ್ ಆಗಸ್ಟ್ 6 ಮತ್ತು 7ರಿಂದ ಅದ್ದೂರಿಯಾಗಿ ಪ್ರಾರಂಭವಾಗಲಿದೆ. ಆದರೆ, ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಟ ಸುದೀಪ್ ಅವರ ಈ ಮಾತಿನಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಯಾಕೆಂದರೆ ಈಗಾಗಲೇ ಬಿಗ್‌ಬಾಸ್‌ನ 8 ಸೀಸನ್‌ಗಳು ಮುಗಿದಿದ್ದು ಕಿರುತೆರೆ ಪ್ರೇಕ್ಷಕರು 9ನೇ ಸೀಸನ್‌ಗಾಗಿ ಎದುರು ನೋಡುತ್ತಿದ್ದಾರೆ. ಹೀಗಾಗಿ ಸುದೀಪ್ ಅವರ ಮಾತಿನಿಂದ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಅಭಿಮಾನಿಗಳ ಗೊಂದಲವನ್ನು ಪ್ರೋಮೊದಲ್ಲಿಯೇ ಪರಿಹಾರ ಮಾಡಿರುವ ಕಿಚ್ಚ,, ಬಿಗ್‌ಬಾಸ್‌ ಕಾರ್ಯಕ್ರಮವು ಈ ಬಾರಿ ಮೊದಲು ʼವೂಟ್ ಸೆಲೆಕ್ಟ್ʼನ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಆರು ವಾರಗಳ ಒಟಿಟಿ ಸೀಸನ್ ಮುಗಿದ ಬಳಿಕ ಬಿಗ್‌ಬಾಸ್‌ ಸೀಸನ್ 9 ಎಂದಿನಂತೆ ಕಿರುತೆರೆಯಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ. ಬಿಗ್‌ಬಾಸ್‌ ಮೊದಲ ಒಟಿಟಿ ಸೀಸನ್‌ ವೂಟ್‌ ಸೆಲೆಕ್ಟ್‌ನಲ್ಲಿ ದಿನದ 24 ಗಂಟೆಯೂ ನೇರ ಪ್ರಸಾರ ಇರಲಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್‌ನ 15ನೇ ಸೀಸನ್ ಕೂಡ ಇದೇ ರೀತಿ ಒಟಿಟಿಯಲ್ಲಿ ಪ್ರಸಾರವಾಗಿತ್ತು. ಕಲರ್ಸ್ ವಾಹಿನಿಯ ಭಾಗವಾಗಿರುವ ʼವೂಟ್ ಸೆಲೆಕ್ಟ್‌ʼನ ಒಟಿಟಿ ವೇದಿಕೆಗೆ ಹೆಚ್ಚು ಪ್ರಚಾರ ನೀಡುವ ಸಲುವಾಗಿ ʼವಿಯಾಕಾಂ 18ʼ ಸಂಸ್ಥೆ ಕನ್ನಡದಲ್ಲೂ ಬಿಗ್‌ಬಾಸ್‌ ಒಟಿಟಿ ಸೀಸನ್ ಪ್ರಾರಂಭಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್