ಹಿಂದಿ ಹೇರಿಕೆಯ ಜೊತೆ ಜೊತೆಗೆ ಬಹುತ್ವದ ಪಾಠ ಹೇಳಿದ ಅರ್ಜುನ್‌ ರಾಮ್‌ಪಾಲ್‌

arjunrampal
  • ಹಿಂದಿಯೇ ನಮ್ಮ ರಾಷ್ಟ್ರಭಾಷೆ ಎಂದ ಅರ್ಜುನ್‌ ರಾಮ್‌ಪಾಲ್‌
  • ಬಹುತ್ವ ಸಾರುವ ನೆಪದಲ್ಲಿ ಹಿಂದಿ ಹೇರಿಕೆ ಯತ್ನ

ಬಾಲಿವುಡ್‌ ನಟ ಅಜಯ್‌ ದೇವಗನ್‌ ಹುಟ್ಟು ಹಾಕಿದ್ದ ಹಿಂದಿ ರಾಷ್ಟ್ರಭಾಷೆ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಅಜಯ್‌ ದೇವಗನ್‌ ಹೇಳಿಕೆಯ ಬೆನ್ನಲ್ಲೇ ಬಾಲಿವುಡ್‌ನ ಮತ್ತೊಬ್ಬ ನಟ ಅರ್ಜುನ್‌ ರಾಮ್‌ಪಾಲ್‌ 'ಹಿಂದಿ ನಮ್ಮ ರಾಷ್ಟ್ರಭಾಷೆ' ಎನ್ನುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

'ಇಂಡಿಯಾ ಟುಡೇ'ಗೆ ಸಂದರ್ಶನ ನೀಡಿರುವ ಅರ್ಜುನ್‌, "ಭಾರತ ವೈವಿಧ್ಯಮಯ ಮತ್ತು ಜಾತ್ಯಾತೀತ ದೇಶ. ಇಲ್ಲಿ ಹಲವು ಭಾಷೆಗಳನ್ನಾಡುವ, ಹಲವು ಸಾಂಸ್ಕೃತಿಕ ಹಿನ್ನೆಲೆಯ ಜನರು ಒಟ್ಟಾಗಿ ಖುಷಿಯಿಂದ ಬದುಕುತ್ತಿದ್ದಾರೆ. ನನಗೆ ಭಾಷೆಗಿಂತ ಭಾವನೆಗಳು ಬಹಳ ಮುಖ್ಯ ಎನ್ನಿಸುತ್ತದೆ. ನನ್ನ ಪ್ರಕಾರ ಹಿಂದಿಯೇ ನಮ್ಮ ರಾಷ್ಟ್ರಭಾಷೆ. ನಾವು ಹಿಂದಿಯನ್ನು ಗೌರವಿಸಬೇಕು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಜನರು ಬಹುವಾಗಿ ಮಾತನಾಡುವ ಮತ್ತು ಅರ್ಥ ಮಾಡಿಕೊಳ್ಳುವ ಸಂಪರ್ಕ ಭಾಷೆ ಹಿಂದಿ. ಹೀಗಾಗಿ ಅದೇ ನಮ್ಮ ರಾಷ್ಟ್ರ ಭಾಷೆ" ಎಂದಿದ್ದಾರೆ. 

ಈ ಸುದ್ದಿಯನ್ನು ಓದಿದ್ದೀರಾ? ವ್ಯವಹಾರ ಸುಧಾರಣೆ ಹೆಸರಲ್ಲಿ 150 ಉದ್ಯೋಗಿಗಳನ್ನು ವಜಾಗೊಳಿಸಿದ 'ನೆಟ್‌ಫ್ಲಿಕ್ಸ್‌'

ಒಂದು ಕಡೆ ಹಿಂದಿ ರಾಷ್ಟ್ರಭಾಷೆ ಎನ್ನುವ ಮೂಲಕ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುವ ಅರ್ಜುನ್‌, ದೇಶದಲ್ಲಿನ ನಾನಾ ಭಾಷೆ ಮತ್ತು ಸಂಸ್ಕೃತಿಯನ್ನು ನಾವು ಗೌರವಿಸಬೇಕು ಎಂದಿದ್ದಾರೆ. "ಸ್ವಲ್ಪ ತೆಲುಗು, ಸ್ವಲ್ಪ ತಮಿಳು ಹೀಗೆ ಎಲ್ಲಾ ಭಾಷೆಗಳನ್ನು ಕಲಿಯಲು ಪ್ರಯತ್ನಿಸಬೇಕು. ನಾನು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಅಲ್ಲಿದ್ದಾಗ ನಾನು ತಮಿಳು ಕಲಿಯಲು ಪ್ರಯತ್ನಿಸಿದ್ದೆ. ಪಂಜಾಬಿನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡ ಸಮಯದಲ್ಲಿ ಸ್ವಲ್ಪ ಪಂಜಾಬಿ ಕಲಿತಿದ್ದೆ. ಈಗ ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ನಾನು ಮರಾಠಿ ಮಾತನಾಡುತ್ತೇನೆ. ಎಲ್ಲ ಭಾಷೆಗಳಿಗೂ ಅದರದ್ದೇ ಆದ ಸೊಬಗಿದೆ. ನಾವು ಎಲ್ಲಾ ಭಾಷೆಗಳನ್ನು ಸಂಭ್ರಮಿಸಬೇಕು" ಎಂದಿದ್ದಾರೆ.

"ಬಹುತ್ವವೇ ಭಾರತದ ವೈಶಿಷ್ಟ್ಯ. ಅವರಿವರನ್ನು ದೂಷಿಸುವುದು ಮತ್ತು ಪರಸ್ಪರವಾಗಿ ಕಿತ್ತಾಡುವುದನ್ನು ಬಿಟ್ಟು ನಮ್ಮ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಸಂಭ್ರಮಿಸಬೇಕು" ಎಂದು ಹಿಂದಿ ಹೇರಿಕೆಯ ಜೊತೆ ಜೊತೆಯೇ ಬಹುತ್ವದ ಪಾಠ ಹೇಳಿದ್ದಾರೆ. 

ಈ ಹಿಂದೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಕೂಡ ಹಿಂದಿ ರಾಷ್ಟ್ರಭಾಷೆ ಎನ್ನುವ ಮೂಲಕ ದಕ್ಷಿಣ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್