ಕಾನ್‌ ಚಿತ್ರೋತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಮಿಂಚಿದ ನವಾಝುದ್ದೀನ್‌ ಸಿದ್ದೀಕಿ

nawazuddin siddiqui
  • ಕಾನ್‌ ಚಿತ್ರೋತ್ಸವವನ್ನು ʼಮೆಕ್ಕಾʼಗೆ ಹೋಲಿಸಿದ ಬಾಲಿವುಡ್ ನಟ
  • ಹುಟ್ಟು ಹಬ್ಬಕ್ಕಿಂತ ದೇಶವನ್ನು ಪ್ರತಿನಿಧಿಸುವುದೇ ಮುಖ್ಯ ಎಂದ ನವಾಝುದ್ದೀನ್‌ 

ಬಾಲಿವುಡ್‌ನ ಖ್ಯಾತ ನಟ ನವಾಝುದ್ದೀನ್‌ ಸಿದ್ದೀಕಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟಿರುವ ನಟ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ವಿಶೇಷ.

ಬಾಲಿವುಡ್‌ ಖ್ಯಾತನಾಮರ ಸಾಲಿನಲ್ಲಿ ಗುರುತಿಸಿಕೊಳ್ಳುವ ನವಾಝುದ್ದೀನ್‌ ಕಳೆದ 9 ವರ್ಷದಿಂದ ಕಾನ್‌ ಚಿತ್ರೋತ್ಸವದಲ್ಲಿ ವೀಕ್ಷಕರಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  

ಕಾನ್‌ ಚಿತ್ರೋತ್ಸವದ ಜೊತೆಗೆ ತಮಗಿರುವ ನಂಟಿನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿರುವ ನವಾಝುದ್ದೀನ್‌, "ನನ್ನ ಹುಟ್ಟು ಹಬ್ಬದ ದಿನವೇ ಆಗಲಿ ಅಥವಾ ಬೇರೆಯ ದಿನವೇ ಆಗಲಿ ಭಾರತವನ್ನು ಪ್ರತಿನಿಧಿಸುವುದು ನನಗೆ ಎಂದಿಗೂ ವಿಶೇಷ. ಪ್ರತಿ ವರ್ಷ ಕಾನ್‌ ಚಿತ್ರೋತ್ಸವ ನನ್ನ ಹುಟ್ಟು ಹಬ್ಬದ ಆಸುಪಾಸಿನಲ್ಲೇ ಬರುವ ಕಾರಣ ಕಳೆದ ಐದಾರು ವರ್ಷಗಳಿಂದ ನನ್ನ ಹುಟ್ಟು ಹಬ್ಬದ ದಿನವನ್ನು ಚಿತ್ರೋತ್ಸವದಲ್ಲಿಯೇ ಕಳೆದಿದ್ದೇನೆ. ವೈಯಕ್ತಿಕವಾಗಿ ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮನಸ್ಥಿತಿಯವನಲ್ಲ. ನನಗೆ ಹುಟ್ಟಿದ ದಿನವೂ ಸಾಮಾನ್ಯ ದಿನದಂತೆ ಭಾಸವಾಗುತ್ತದಷ್ಟೇ" ಎಂದಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ? ಹಿಂದಿ ಹೇರಿಕೆಯ ಜೊತೆ ಜೊತೆಗೆ ಬಹುತ್ವದ ಪಾಠ ಹೇಳಿದ ಅರ್ಜುನ್‌ ರಾಮ್‌ಪಾಲ್‌

AV Eye Hospital ad

ಕಾನ್‌ ಚಿತ್ರೋತ್ಸವವನ್ನು ಸಿನಿಮಾ ಕ್ಷೇತ್ರದ ಮೆಕ್ಕಾ (ಮುಸಲ್ಮಾನರ ಪವಿತ್ರ ಸ್ಥಳ) ಎಂದಿರುವ ಬಾಲಿವುಡ್ ನಟ, "ಸಿನಿ ಬದುಕಿನ ಆರಂಭಕ್ಕೂ ಮುನ್ನ ಮುಂದೊಂದು ದಿನ ನಾನು ಕಾನ್‌ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ. ಕಾನ್‌ ಚಿತ್ರೋತ್ಸವ ಸಿನಿಮಾ ಮಂದಿಯ ಪಾಲಿಗೆ ಮೆಕ್ಕಾ ಇದ್ದಂತೆ. ಈ ಚಿತ್ರೋತ್ಸವದಲ್ಲಿ ಎಲ್ಲಿ ನೋಡಿದರೂ ಒಳ್ಳೆಯ ಸಿನಿಮಾಗಳ ಕುರಿತಷ್ಟೇ ಚರ್ಚೆಗಳು ನಡೆಯುತ್ತಿರುತ್ತದೆ. ಇಲ್ಲಿ ಯಾರೂ ಸಿನಿಮಾದ ಗಳಿಕೆಯ ಬಗ್ಗೆ ಮಾತನಾಡುವುದಿಲ್ಲ. ನಾವು ಸಿನಿಮಾದ ಗಳಿಕೆಯ ಬಗ್ಗೆ ಮಾತನಾಡುತ್ತ ಸಿನಿಮಾಗಳನ್ನು ನೋಡುವ ಖಯಾಲಿ ಬೆಳೆಸಿಕೊಂಡಿದ್ದೀವಲ್ಲಾ. ಆದರೆ ಇಲ್ಲಿ ಹಾಗೆ ಯಾರೂ ಕೂಡ ಗಳಿಕೆಯ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ನಮ್ಮ ದೇಶದಲ್ಲಿ ಉತ್ತಮ ಕಥೆಯುಳ್ಳ ಚಿತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ನವಾಝುದ್ದೀನ್‌, "ನಮ್ಮಲ್ಲಿನ ಹಲವು ಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದರೂ ಕೂಡ ಆ ಚಿತ್ರಗಳಿಗೆ ದೇಶೀಯವಾಗಿ ಹೆಚ್ಚು ಪ್ರಾಮುಖ್ಯತೆ ಸಿಗುವುದಿಲ್ಲ. ಕನಿಷ್ಠ ಆ ಚಿತ್ರಗಳು ಸ್ಥಳೀಯವಾಗಿ ಪ್ರದರ್ಶನ ಕೂಡ ಕಾಣುವುದಿಲ್ಲ. ನಾನು ನಟಿಸಿರುವ ʼನೋ ಮಾನ್ಸ್‌ ಲ್ಯಾಂಡ್‌ʼ ಎಂಬ ಸಿನಿಮಾ ʼಸಿಡ್ನಿ ಚಲನಚಿತ್ರೋತ್ಸʼವಕ್ಕೆ ಆಯ್ಕೆಯಾಗಿದೆ. ಆದರೆ, ಯಾವ ʼಒಟಿಟಿʼ ಸಂಸ್ಥೆಗಳು ನಮ್ಮ ಸಿನಿಮಾವನ್ನು ಖರೀದಿಸಲು ಮುಂದೆ ಬರಲಿಲ್ಲ. ಹೀಗಿರುವಾಗ ಚಿತ್ರಮಂದಿರಗಳಲ್ಲಿ ಇಂತಹ ಒಳ್ಳೆಯ ಚಿತ್ರಗಳು ತೆರೆ ಕಾಣುವುದು ಕನಸಿನ ಮಾತೇ ಸರಿ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app