ಫೌಜಿಯಿಂದ ಜವಾನ್‌ | ಕನ್ನಡಕ್ಕೆ ಕಾಲಿಟ್ಟ ಶಾರುಖ್‌ ಖಾನ್‌

shahrukh khan
  • ಹೊಸ ಸಿನಿಮಾ ಘೋಷಿಸಿದ ಶಾರುಖ್‌ ಖಾನ್‌
  • ಕನ್ನಡದಲ್ಲೂ ಮೂಡಿ ಬರಲಿದೆ ʼಜವಾನ್‌ʼ

ಬಾಲಿವುಡ್‌ ನಟ ಶಾರುಖ್‌ ಖಾನ್‌ ಬೆಳ್ಳಿ ಪರದೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಬಹುವಾಗಿ ಕೇಳಿ ಬರುತ್ತಿರುವ ಹೊತ್ತಿನಲ್ಲೇ ಕಿಂಗ್‌ ಖಾನ್‌ ಸಾಲು ಸಾಲು ಸಿನಿಮಾಗಳನ್ನು ಘೋಷಣೆ ಮಾಡುತ್ತಿದ್ದಾರೆ.

ಸದ್ಯ 'ಪಠಾನ್‌' ಚಿತ್ರದಲ್ಲಿ ಬ್ಯುಸಿಯಾಗಿರುವ ಶಾರುಖ್‌ ಇದೀಗ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಆಟ್ಲೀ ಕುಮಾರ್‌ ನಿರ್ದೇಶನದ ʼಜವಾನ್‌ʼ ಚಿತ್ರದಲ್ಲಿ ಶಾರುಖ್‌ ನಟಿಸುತ್ತಿದ್ದಾರೆ.

ಶುಕ್ರವಾರ ʼಜವಾನ್‌ʼ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಶಾರುಖ್‌ ಹೊಸ ಚಿತ್ರವನ್ನು ಘೋಷಣೆ ಮಾಡಲಾಗಿದೆ. 

ಒಂದೂವರೆ ನಿಮಿಷಗಳ ಟೀಸರ್‌ನಲ್ಲಿ ಶಾರುಖ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತವಾದ ಮುಖಕ್ಕೆ ಬಟ್ಟೆ ಸುತ್ತಿಕೊಂಡು, ತನ್ನ ಗುರುತು ಮರೆ ಮಾಚಿ, ಸೇಡು ತೀರಿಸಿಕೊಳ್ಳಲು ಕಾದು ಕುಳಿತ ವ್ಯಕ್ತಿಯ ವೇಷದಲ್ಲಿ ಶಾರುಖ್‌ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಾರುಖ್‌ ಅವರದ್ದು ಗುಪ್ತಚರ ಇಲಾಖೆಯ ದಕ್ಷ ಅಧಿಕಾರಿಯ ಪಾತ್ರ ಎಂದು ಹಲವರು ಊಹಿಸಿದ್ದಾರೆ.

 

ಆಟ್ಲೀ ಮತ್ತು ಶಾರುಖ್‌ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂದು ಎರಡು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಶಾರುಖ್‌ ಆಗಲಿ ಅಥವಾ ಆಟ್ಲೀ ಅವರಾಗಲಿ ಅಧಿಕೃತ ಮಾಹಿತಿ ನೀಡಿರಲಿಲ್ಲ. ಇದೀಗ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಶಾರುಖ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

80ರ ದಶಕದಲ್ಲಿ 'ಫೌಜಿ' ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆ ಪ್ರವೇಶಿಸಿದ್ದ ಶಾರುಖ್‌ 3 ದಶಕಗಳ ಬಳಿಕ ಮತ್ತೆ ಫೌಜಿ ಅರ್ಥವನ್ನೇ ಧ್ವನಿಸುವ ʼಜವಾನ್‌ʼ ಚಿತ್ರದ ಮೂಲಕ ಮಾಸ್‌ ಲುಕ್‌ನಲ್ಲಿ ತೆರೆಗೆ ಮರಳುತ್ತಿದ್ದಾರೆ.   

ಚಿತ್ರದಲ್ಲಿ ಶಾರುಖ್‌ಗೆ ನಾಯಕಿಯಾಗಿ ತಮಿಳಿನ ಖ್ಯಾತ ನಟಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶಾರುಖ್‌ ಒಡೆತನದ ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ 'ಜವಾನ್‌' ಚಿತ್ರವನ್ನು ನಿರ್ಮಾಣ ಮಾಡಲಿದೆ. ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿ ಚಿತ್ರ 5 ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದ್ದು, 2023ರ ಜೂನ್‌ 2ರಂದು ತೆರೆಗೆ ಬರಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app