
- ಕೆಜಿಎಫ್-2 ಸಿನಿಮಾವನ್ನು ಮೆಚ್ಚಿ ಕೊಂಡಾಡಿದ ಮನೋಜ್ ಬಾಜಪೇಯಿ
- ದಕ್ಷಿಣದ ಚಿತ್ರಗಳ ಯಶಸ್ಸಿನಿಂದ ಬಾಲಿವುಡ್ ಮಂದಿ ಪಾಠ ಕಲಿಯಲಿ ಎಂದ ನಟ
ದಕ್ಷಿಣದ 'ಪುಷ್ಪಾ', 'ಆರ್ಆರ್ಆರ್' ಮತ್ತು 'ಕೆಜಿಎಫ್- 2' ಸಿನಿಮಾಗಳ ಯಶಸ್ಸು ಬಾಲಿವುಡ್ನ ಪ್ರಮುಖರಲ್ಲಿ ನಡುಕ ಹುಟ್ಟಿಸಿದೆ ಎಂದು ನಟ ಮನೋಜ್ ಬಾಜಪೇಯಿ ಹೇಳಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಕ್ಷಿಣ ಭಾರತದ ಸಿನಿ ರಂಗ ಮತ್ತು ಇಲ್ಲಿನ ಚಿತ್ರಗಳು ಜಾಗತಿಕ ಮನ್ನಣೆ ಗಿಟ್ಟಿಸಿಕೊಳ್ಳುತ್ತಿರುವ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ಮನೋಜ್ ಬಾಜಪೇಯಿ, ಬಾಲಿವುಡ್ನ ಸಿನಿಮಾ ತಯಾರಕರು ದಕ್ಷಿಣದವರನ್ನು ನೋಡಿ ಕಲಿಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ದಕ್ಷಿಣದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿರುವುದು ನನಗೂ ಅಚ್ಚರಿ ಮೂಡಿಸಿದೆ. ನನ್ನಂಥವರನ್ನು ಮಾತ್ರವಲ್ಲ, ಬಾಲಿವುಡ್ ಪ್ರಮುಖರ ಬೆನ್ನುಮೂಳೆಯ ಆಳದಲ್ಲೇ ನಡುಕ ಹುಟ್ಟಿದೆ. ಅವರಿಗೆ ದಿಕ್ಕು ತೋಚದಂತಾಗಿದೆ" ಎಂದು ಅವರು ಹೇಳಿದ್ದಾರೆ.
"ದಕ್ಷಿಣದ ಸಿನಿಮಾಗಳು, ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಲು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ವಿವರಿಸಿರುವ ಮನೋಜ್, "ಕೋವಿಡ್ ನಿಯಮಗಳು ಸಡಿಲಗೊಂಡ ಬಳಿಕ ಬಹುಕೋಟಿ ವೆಚ್ಚದಲ್ಲಿ 'ಸೂರ್ಯವಂಶಿ' ಸಿನಿಮಾ ಬಿಡುಗಡೆಯಾಗಿತ್ತು. ಬಹುತಾರಾಣವನ್ನು ಹೊಂದಿದ್ದ ಈ ಚಿತ್ರ ಭಾರತದಲ್ಲಿ ₹200 ಕೋಟಿ ಗಳಿಕೆ ಮಾಡಲು ಒದ್ದಾಡಿತ್ತು. ಆದರೆ, ಹಿಂದಿಗೆ ಡಬ್ ಆದ 'ಆರ್ಆರ್ಆರ್' ಮತ್ತು 'ಕೆಜಿಎಫ್-2'ನಂತಹ ದಕ್ಷಿಣದ ಸಿನಿಮಾಗಳು ತಲಾ ₹300 ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಈ ಸಿನಿಮಾಗಳು ಇಂದಿಗೂ ಚಿತ್ರಮಂದಿರಗಳಲ್ಲಿ ಚಾಲ್ತಿಯಲ್ಲಿವೆ. ಈ ಸಿನಿಮಾಗಳ ಯಶಸ್ಸಿನಿಂದ ಬಾಲಿವುಡ್ ಮಂದಿ ಬೇಗ ಪಾಠ ಕಲಿಯಬೇಕು" ಎಂದು ಹೇಳಿದ್ದಾರೆ.
"ದಕ್ಷಿಣದಲ್ಲಿ ಸಿನಿಮಾ ಮಾಡುವವರಿಗೆ ತಮ್ಮ ಕೆಲಸದ ಮೇಲೆ ಕೀಳಿರಿಮೆಯಿಲ್ಲ. ಅವರು ಅತ್ಯಂತ ಶ್ರದ್ಧೆಯಿಂದ ಸಿನಿಮಾ ಮಾಡುತ್ತಾರೆ. ಅಲ್ಲಿನ ಸಿನಿಮಾ ತಂತ್ರಜ್ಞರು ಪ್ರತಿ ಶಾಟ್ ತೆಗೆಯುವಾಗ ತಾವು ಜಗತ್ತಿನ ಅತ್ಯದ್ಭುತ ಶಾಟ್ ತೆಗೆಯುತ್ತಿದ್ದೇವೆ ಎಂಬ ಭಾವದಲ್ಲಿಯೇ ಇರುತ್ತಾರೆ. ತಾವು ಕಲ್ಪಿಸಿಕೊಂಡಂತೆಯೇ ಚಿತ್ರವನ್ನು ರೂಪಿಸುತ್ತಾರೆ. ಪ್ರೇಕ್ಷಕರನ್ನು ಗೌರವಿಸಿ ಅವರ ಅಭಿರುಚಿ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಾರೆ. ನೀವು 'ಆರ್ಆರ್ಆರ್', 'ಪುಷ್ಪಾ' ಮತ್ತು 'ಕೆಜಿಎಫ್-2' ಚಿತ್ರಗಳನ್ನು ನೋಡಿದರೆ ಆ ಸಿನಿಮಾಗಳಲ್ಲಿನ ದೃಶ್ಯಗಳೆಲ್ಲವೂ ಮಾಡು ಇಲ್ಲವೆ ಮಡಿ ಎಂಬಂತಿವೆ. ಸಿನಿಮಾ ಕುರಿತು ಅವರಷ್ಟು ಶ್ರದ್ಧೆ ಬಾಲಿವುಡ್ ಸಿನಿ ತಂತ್ರಜ್ಞರಲ್ಲಿ ಇಲ್ಲ. ನಾವು ಸ್ಟಾರ್ ನಟರ ಸಿನಿಮಾಗಳ ಬಗ್ಗೆ ಮಾತ್ರ ಯೋಚಿಸುತ್ತೇವೆ. ಸ್ಟಾರ್ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಮಾಡುವ ಸದ್ದು ಮತ್ತು ಗಳಿಕೆಯ ಬಗ್ಗೆಯಷ್ಟೇ ಆಲೋಚನೆಗಳಿರುತ್ತವೆ. ಹೀಗಾಗಿ ನಾವು ನಮ್ಮನ್ನು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿ ನಾವು ದಕ್ಷಿಣದ ಸಿನಿಮಾ ಮಂದಿಯನ್ನು ಬೇರೆಯವರಂತೆ ಕಾಣುತ್ತೇವೆ. ಆದರೆ, ದಕ್ಷಿಣದ ಕಲಾವಿದರಿಂದ ಬಾಲಿವುಡ್ ಸಿನಿಮಾ ತಯಾರಕರು ಕಲಿಯುವುದು ಬಹಳಷ್ಟಿದೆ" ಎಂದಿದ್ದಾರೆ.