ಅಪ್ಪು ಅವಹೇಳನ ; ಅಭಿಮಾನಿಗಳ ಆಕ್ರೋಶದ ಬೆನ್ನಲ್ಲೇ ಕ್ಷಮೆ ಯಾಚಿಸಿದ ಚಕ್ರವರ್ತಿ ಸೂಲಿಬೆಲೆ

chakravarti sulibele
  • ಅನಗತ್ಯವಾಗಿ ಪುನೀತ್‌ ಸಾವಿನ ವಿಚಾರ ಎಳೆದು ತಂದಿದ್ದ ಚಕ್ರವರ್ತಿ ಸೂಲಿಬೆಲೆ
  • ನಾನು ಅಪ್ಪು ಅಭಿಮಾನಿ ಎಂದು ಸಮಜಾಯಿಷಿ ನೀಡಲು ಯತ್ನ

ನಟ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದ ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಇದೀಗ ಕ್ಷಮೆ ಯಾಚಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಚಕ್ರವರ್ತಿ ಸೂಲಿಬೆಲೆ ಅನಗತ್ಯವಾಗಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ಎಳೆದು ತಂದಿದ್ದರು.

ಪ್ರವೀಣ್‌ ಹತ್ಯೆಯನ್ನು ಖಂಡಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಚಕ್ರವರ್ತಿ, "ಸಮಯದ ಅಭಾವದಿಂದಾಗಿ ನಮ್ಮ  ʼಫೈಲ್‌ʼಗಳಿಗೆ ಸಹಿ ಮಾಡಲು ಕೂಡ ಮುಖ್ಯಮಂತ್ರಿಗಳಿಗೆ ಪುರಸೊತ್ತಾಗುತ್ತಿಲ್ಲ ಎಂದು ಶಾಸಕರು ದೂರುತ್ತಿದ್ದಾರೆ. ಆದರೆ, ಸಿನಿಮಾಗಳ ಪ್ರೀಮಿಯರ್‌ ಶೋಗಳನ್ನು ನೋಡಲು, ಸಿನಿಮಾ ನೋಡಿ ಕಣ್ಣೀರಿಡಲು ಮುಖ್ಯಮಂತ್ರಿಗಳಿಗೆ ಬೇಕಾದಷ್ಟು ಸಮಯವಿದೆ. ನಟನೊಬ್ಬ ತೀರಿಕೊಂಡಾಗ 3 ದಿನಗಳ ಕಾಲ ಆತನ ಅಂತ್ಯ ಸಂಸ್ಕಾರದಲ್ಲಿ ತೊಡಗಿಕೊಳ್ಳಲು ಅವರಿಗೆ ಸಮಯವಿತ್ತು. ಈಗಲೂ ಆಕ್ರೋಶ ವ್ಯಕ್ತವಾಗಿರದ್ದಿದ್ದರೆ ಖಂಡಿತವಾಗಿಯೂ ಅವರು ವಿಕ್ರಾಂತ್‌ ರೋಣ ಸಿನಿಮಾ ನೋಡಲು ಹೋಗುತ್ತಿದ್ದರು" ಎಂದು ಲೇವಡಿ ಮಾಡಿದ್ದರು. 

 

ಚಕ್ರವರ್ತಿ, ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲು ಹೋಗಿ ಅನಗತ್ಯವಾಗಿ ಪುನೀತ್‌ ಸಾವಿನ ವಿಚಾರವನ್ನು ಎಳೆದು ತಂದಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಟ್ವಿಟರ್‌ ಬಳಕೆದಾರ ಚಂದನ್‌ ಆರ್ಯ, "ಇದು ಯಾಕೋ ಓವರ್ ಆಯ್ತು...? ಇನ್ನೊಬ್ಬರನ್ನ ಪ್ರಚೋದಿಸೋದಕ್ಕೆ, ಎಚ್ಚರಿಸೋದಿಕ್ಕೆ ಪರೋಕ್ಷವಾಗಿ ಇಲ್ಲಿ ಅಪ್ಪು ಹೆಸರನ್ನು ಯಾಕೆ ಬಳಸುತ್ತಿದ್ದೀಯಾ? ಮಹಾ ಮೇಧಾವಿ ಅನ್ನೋ ಭಾವ ಬೇಡ ಮಿಸ್ಟರ್ ಚಕ್ರವರ್ತಿ. ಬಸವರಾಜ ಬೊಮ್ಮಾಯಿ ಅವರ ಮನೆ ಅಡ್ರೆಸ್ ಗೊತ್ತು ಅಲ್ವಾ? ನೇರವಾಗಿ ಹೋಗಿ ಅವರನ್ನೇ ಕೇಳು. ಅದನ್ನು ಬಿಟ್ಟು ಇಲ್ಲಿ ಸಮಯ ವ್ಯರ್ಥ ಮಾಡಬೇಡ ಪ್ರಜ್ಞೆ ಇರಲಿ" ಎಂದು ಎಚ್ಚರಿಸಿದ್ದಾರೆ.

ಪುನೀತ್‌ ಅಭಿಮಾನಿ ವಿಲಾಸ್‌ ಎಂಬುವವರು ಟ್ವೀಟ್‌ ಮಾಡಿ, "ಅಪ್ಪು ಅಗಲಿಕೆ ಕ್ಷುಲ್ಲಕ ಏನೋ ನಿನಗೆ. ಕನ್ನಡದ ಸಾಂಸ್ಕೃತಿಕ ರಾಯಭಾರಿಯನ್ನು ನಿನ್ನ ಹೊಲಸು ರಾಜಕೀಯ ಆಟಕ್ಕೆ ಬಳಸಿಕೊಳ್ತಿಯ. ಕನ್ನಡಿಗರಿಗೆ ನೀನು ಮಾಡಿದ ಅವಮಾನ ಇದು. ಥೂ ನಿನ್ನ ಜನ್ಮಕ್ಕೆ, ಇದೇ ಏನೋ ನಿನ್ನ ಸನಾತನ ಧರ್ಮ ಹೇಳಿಕೊಟ್ಟ ಸಂಸ್ಕಾರ. ಕ್ಷಮೆ ಕೇಳಿ ಟ್ವೀಟ್ ಡಿಲೀಟ್ ಮಾಡು" ಎಂದಿದ್ದಾರೆ.

ಲಿಖಿತ್‌ ಎಂಬುವವರು ಟ್ವೀಟ್‌ ಮಾಡಿ, "ಕನ್ನಡಿಗರು ಈ ಹುಚ್ಚು ನಾಯಿಗೆ ಕಲ್ಲಲ್ಲಿ ಹೊಡೆದು ಬುದ್ಧಿ ಕಲಿಸದಿದ್ದರ ಪರಿಣಾಮ ಅಪ್ಪು ಬಗ್ಗೆ ಮಾತಾಡುವ ಉದ್ದಟತನ ತೋರುತ್ತಿದೆ" ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಟಿ ಮೇಘನಾ ರಾಜ್‌ ಮುಡಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ

ಟ್ವಿಟರ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್‌ ಅಭಿಮಾನಿಗಳ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚಕ್ರವರ್ತಿ ತಾವು ಪುನೀತ್‌ ಬಗ್ಗೆ ಮಾತನಾಡಿದ ಹಳೆಯ ವಿಡಿಯೋ ತುಣುಕೊಂದನ್ನು ಹಂಚಿಕೊಂಡು, "ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು" ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
12 ವೋಟ್