ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಗುಜರಾತಿ ಚಿತ್ರ ʻಚೆಲ್ಲೊ ಶೋʼ

chello show
  • ಆಸ್ಕರ್‌ ರೇಸ್‌ನಲ್ಲಿ ʼಆರ್‌ಆರ್‌ಆರ್‌ʼ, 'ಕಾಶ್ಮೀರ್‌ ಫೈಲ್ಸ್‌' ಹಿಂದಿಕ್ಕಿದ ಗುಜರಾತಿ ಚಿತ್ರ
  • ಬಾಲಕನೊಬ್ಬನ ಸಿನಿಮಾ ಆಸಕ್ತಿಯ ಸುತ್ತ ಮೂಡಿಬಂದಿರುವ ʼಚೆಲ್ಲೋ ಶೋʼ

2023ರ ಆಸ್ಕರ್‌ ಪ್ರಶಸ್ತಿಗೆ ಭಾರತೀಯ ಚಿತ್ರರಂಗ ಯಾವ ಸಿನಿಮಾ ಆಯ್ಕೆಯಾಗಲಿದೆ ಎಂಬ ಸಾಕಷ್ಟು ಚರ್ಚೆಗಳು ಹುಟ್ಟುಕೊಂಡಿದ್ದವು. ಹಲವರು ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾವನ್ನು ಬೆಂಬಲಿಸಿದರೆ ಇನ್ನು ಕೆಲವರು ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರ್‌ ಫೈಲ್ಸ್‌ʼ ಪರ ವಹಿಸಿದ್ದರು. ಆದರೆ, ಇದೀಗ ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನ ಪಟ್ಟಿಗೆ ಅಧಿಕೃತವಾಗಿ ಆಯ್ಕೆಯಾಗಿರುವುದು ಗುಜರಾತಿ ಸಿನಿಮಾ.

ʼಸಂಸಾರʼ, ʼವ್ಯಾಲಿ ಆಫ್‌ ಫ್ಲವರ್ಸ್‌ʼ, ʼಆಂಗ್ರಿ ಇಂಡಿಯನ್‌ ಗಾಡೆಸೆಸ್‌ʼ ಸೇರಿದಂತೆ ಹಲವು ಸಾಕ್ಷಚಿತ್ರಗಳನ್ನು ನಿರ್ದೇಶಿಸಿರುವ ನಳಿನ್‌ ಕುಮಾರ್‌ ಪಾಂಡ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ʼಚೆಲ್ಲೋ ಶೋʼ (ಲಾಸ್ಟ್‌ ಫಿಲ್ಮ್‌ ಶೋ) ಎನ್ನುವ ಗುಜರಾತಿ ಚಿತ್ರವನ್ನು ʼಫಿಲ್ಮ್‌ ಫೆಡರೇಶನ್‌ ಆಫ್‌ ಇಂಡಿಯಾʼ ಈ ಬಾರಿ ಆಸ್ಕರ್‌ ಪ್ರಶಸ್ತಿಯ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ನಾಮ ನಿರ್ದೇಶನಕ್ಕೆ ಶಿಫಾರಸ್ಸು ಮಾಡಿದೆ.

ʼಚೆಲ್ಲೋ ಶೋʼ ಪುಟಾಣಿ ಬಾಲಕನ ಸಿನಿಮಾ ಆಸಕ್ತಿಯ ಸುತ್ತ ಮೂಡಿಬಂದಿರುವ ಚಿತ್ರ. ಸಿನಿಮಾ ಕುರಿತು ಅಪಾರ ಕುತೂಹಲ ಹೊಂದಿರುವ ಗುಜರಾತಿನ ಚಲಾಲ ಎಂಬ ಕುಗ್ರಾಮದ ಬಾಲಕ ಸಮಯ್‌, ಥಿಯೇಟರ್‌ನಲ್ಲಿ ಪ್ರೊಜೆಕ್ಟರ್‌ ಅನ್ನು ನಿರ್ವಹಿಸುವ ವ್ಯಕ್ತಿಗೆ ಆಮಿಷವೊಡ್ಡಿ ಪ್ರೊಜೆಕ್ಟರ್‌ ಕೊಠಡಿಯೊಳಕ್ಕೆ ಪ್ರವೇಶ ಪಡೆಯುತ್ತಾನೆ. ಪ್ರೊಜೆಕ್ಟರ್‌ ಕೊಠಡಿಯಲ್ಲಿ, ಬಗೆ ಬಗೆಯ ಸಿನಿಮಾಗಳನ್ನು ನೋಡುತ್ತ ದಿನ ಕಳೆಯುವ ಆ ಎಳೆಯ ಬಾಲಕನ ಜೀವನದ ಸುತ್ತ ʼಚೆಲ್ಲೋ ಶೋʼ ಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕ ನಳಿನ್‌. ಭವಿನ್‌ ರಾಬರಿ ಎಂಬ ಬಾಲನಟ ಸಮಯ್‌ ಪಾತ್ರವನ್ನು ನಿಭಾಯಿಸಿದ್ದಾನೆ. ನಿಜ ಜೀವನಕ್ಕೆ ಹತ್ತಿರ ಎನ್ನಿಸುವ ಈ ಚಿತ್ರ 2021ರಲ್ಲಿ ಟ್ರಿಬೇಕಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್