
- ಸಿದ್ದರಾಮಯ್ಯ ಪಾತ್ರದಲ್ಲಿ ವಿಜಯ್ ಸೇತುಪತಿ ನಟನೆ?
- ಬಯೋಪಿಕ್ ಮಾತುಕತೆ ನಡೆದಿದೆ ಎಂದ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ನಿರ್ಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರೊಂದಿಗೂ ಅಭಿಮಾನಿಗಳು ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ರಾಜ್ಯದಲ್ಲಿ ಯಶಸ್ವೀ ಆಡಳಿತ ನಡೆಸಿರುವ ಖ್ಯಾತಿ ಸಿದ್ದರಾಮಯ್ಯನವರಿಗಿದೆ. ಸದ್ಯ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ರಾಜ್ಯಾದ್ಯಾಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಇತ್ತೀಚೆಗೆ ದಾವಣಗೆರೆಯಲ್ಲಿ ಅದ್ದೂರಿಯಾಗಿ ಸಿದ್ದರಾಮೋತ್ಸವ ಆಚರಿಸಿದ್ದರು. ಇದೀಗ ತಮ್ಮ ನೆಚ್ಚಿನ ನಾಯಕನ ಬಯೋಪಿಕ್ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿ ಹಯಾತ್ ಪೀರ್ ಸಾಬ್ ಎಂಬುವವರು ಎಂ ಎಸ್ ಕ್ರಿಯೆಷನ್ಸ್ ಬ್ಯಾನರ್ನಡಿಯಲ್ಲಿ ಸಿದ್ದರಾಮಯ್ಯ ಬಯೋಪಿಕ್ ನಿರ್ಮಿಸಿಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಶಿವರಾಜ್ ತಂಗಡಗಿ ಮತ್ತು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಯಾತ್ ಪೀರ್ ಸಾಬ್, ಬಯೋಪಿಕ್ ನಿರ್ಮಾಣದ ಬಗ್ಗೆ ಮೊದಲ ಹಂತದ ಮಾತುಕತೆ ನಡೆಸಿದ್ದಾರೆ. ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ನಿರ್ವಹಿಸಲು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿಯವರನ್ನು ಕೂಡ ಸಂಪರ್ಕಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಈ ಸುದ್ದಿ ಓದಿದ್ದೀರಾ? ಹಳ್ಳಿಗಳಲ್ಲಿನ ಜಾತಿ ದೌರ್ಜನ್ಯದ ಕಥೆ ಹೇಳುವ ʻಪಾಲಾರ್ʼ ಟ್ರೈಲರ್ಗೆ ಸ್ಯಾಂಡಲ್ವುಡ್ ತಾರೆಯರ ಮೆಚ್ಚುಗೆ
ಬಯೋಪಿಕ್ ನಿರ್ಮಾಣದ ಸುದ್ದಿ ಹೊರಬೀಳುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, "ಕನಕಗಿರಿ ಕ್ಷೇತ್ರದ ಅಭಿಮಾನಿಗಳು ನನ್ನ ಬಯೋಪಿಕ್ ಸಿನಿಮಾ ಮಾಡುತ್ತೇನೆ ಎಂದು ಬಂದಿದ್ದರು. ಸಿನಿಮಾ ಮಾಡುತ್ತಾರೋ ಇಲ್ಲವೊ ನನಗೆ ಗೊತ್ತಿಲ್ಲ" ಎಂದಿದ್ದಾರೆ.
ನಿಮ್ಮ ಬಯೋಪಿಕ್ ನಿರ್ಮಾಣವಾಗುವುದಾದರೆ ಚಿತ್ರದಲ್ಲಿ ನೀವು ಕೂಡ ನಟಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಅವರು, "ನಾನು ಚಿತ್ರದಲ್ಲಿ ನಟಿಸಲ್ಲ, ನನಗೆ ನಟನೆ ಬರಲ್ಲ" ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಕೂಡ ಬಯೋಪಿಕ್ ವಿಚಾರವನ್ನು ತಳ್ಳಿ ಹಾಕಿಲ್ಲ. ಹೀಗಾಗಿ ಸಿದ್ದರಾಮಯ್ಯ ಜೀವನಾಧಾರಿತ ಚಿತ್ರ ಸೆಟ್ಟೇರಲಿದೆಯೇ ಎಂಬ ಸಹಜ ಕುತೂಹಲ ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.