ಆರ್ಯನ್‌ ಖಾನ್ ಮನವಿ ಅಂಗಿಕರಿಸಿದ ನ್ಯಾಯಾಲಯ; ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ಕೋರಿದ್ದ ಅರ್ಜಿ

  • ಕ್ರೂಸ್ ಹಡಗಿನ ದಾಳಿ ನಂತರ ಆರ್ಯನ್ ಖಾನ್ ಬಂಧಿಸಿದ್ದ ಎನ್‌ಸಿಬಿ 
  • ಮೇ ತಿಂಗಳಲ್ಲಿ ಆರ್ಯನ್ ಖಾನ್ ಹೆಸರನ್ನು ಕೈಬಿಟ್ಟಿದ್ದ ತನಿಖಾ ಸಂಸ್ಥೆ

ಕಳೆದ ವರ್ಷದ ಕ್ರೂಸ್‌ನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣದಲ್ಲಿ ಮಾದಕ ದ್ರವ್ಯ ನಿಯಂತ್ರಣ ದಳದಿಂದ (ಎನ್‌ಸಿಬಿ) ಖುಲಾಸೆ ಪಡೆದಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಮನವಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಬುಧವಾರ ಪುರಸ್ಕರಿಸಿದೆ. ಅವರು ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ಷರತ್ತುಗಳ ಭಾಗವಾಗಿ ಆರ್ಯನ್ ಖಾನ್ ತನ್ನ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈಪ್ರೊಫೈಲ್ ಡ್ರಗ್ಸ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೆ, ಮೇ ತಿಂಗಳಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ತನಿಖಾ ಸಂಸ್ಥೆ ಅವರನ್ನು ಆರೋಪಿ ಎಂದು ಉಲ್ಲೇಖಿಸಿಲ್ಲ. ಎನ್‌ಸಿಬಿಯು ಆರ್ಯನ್ ಖಾನ್ ಮತ್ತು ಇತರ ಐವರನ್ನು ಸಾಕಷ್ಟು ಪುರಾವೆಗಳ ಕೊರತೆಯಿಂದ ಕೈಬಿಟ್ಟಿತು.

ಜೂನ್ 30ರಂದು ವಕೀಲರಾದ ಅಮಿತ್ ದೇಸಾಯಿ ಮತ್ತು ರಾಹುಲ್‌ ಅಗರ್ವಾಲ್ ಅವರ ಮೂಲಕ ಆರ್ಯನ್ ಖಾನ್ ಅರ್ಜಿ ಸಲ್ಲಿಸಿದ್ದರು. ಎನ್‌ಡಿಪಿಎಸ್‌ ಕಾಯಿದೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಆರ್ಯನ್ ಖಾನ್ ಪ್ರಕರಣ ತನಿಖಾಧಿಕಾರಿ ವರ್ಗಾವಣೆ

ಮನವಿಗೆ ಪ್ರತಿಕ್ರಿಯಿಸಿದ ಮಾದಕ ದ್ರವ್ಯ ವಿರೋಧಿ ಸಂಸ್ಥೆ, ಅವರ ಪಾಸ್‌ಪೋರ್ಟ್ ಹಿಂತಿರುಗಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿವಿ ಪಾಟೀಲ್ ಅವರು ಆರ್ಯನ್ ಅವರ ಪಾಸ್‌ಪೋರ್ಟ್ ಹಿಂಪಡೆಯಲು ಮಾಡಿದ ಮನವಿಯನ್ನು ಅಂಗೀಕರಿಸಿದರು.

ಕಳೆದ ವರ್ಷ ಅಕ್ಟೋಬರ್ 3ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ನಂತರ 24 ವರ್ಷದ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿತ್ತು. ಬಾಂಬೆ ಹೈಕೋರ್ಟ್ ಜಾಮೀನು ನೀಡುವ ಮೊದಲು ಆರ್ಯನ್ ಖಾನ್ 20 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್