
- ವಿಕ್ರಮ್ ಎದುರು ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿರುವ ಇರ್ಫಾನ್
- ಆಗಸ್ಟ್ 31ಕ್ಕೆ ತೆರೆಗೆ ಬರಲಿದೆ ಬಹುನಿರೀಕ್ಷಿತ ʼಕೋಬ್ರಾʼ ಸಿನಿಮಾ
ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅಭಿನಯದ ಕೋಬ್ರಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಶುಕ್ರವಾರ (ಆಗಸ್ಟ್ 26) ಬಿಡುಗಡೆಯಾಗಿದೆ. ಭರ್ಜರಿ ʼಆಕ್ಷನ್ʼನಿಂದ ಕೂಡಿರುವ ʼಕೋಬ್ರಾʼ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಎರಡೂವರೆ ನಿಮಿಷಗಳ ಟ್ರೈಲರ್ನಲ್ಲಿ ವಿಕ್ರಮ್ ಹಲವು ವೇಶಗಳಲ್ಲಿ ಮಿಂಚಿದ್ದಾರೆ.
ಕೋಬ್ರಾ ಸಿನಿಮಾದ ವಿಶೇಷ ಎಂದರೆ ಕ್ರಿಕೆಟ್ನ ʼಟೀಂ ಇಂಡಿಯಾʼದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ʼಗ್ರ್ಯಾಂಡ್ ಎಂಟ್ರಿʼ ನೀಡುತ್ತಿದ್ದಾರೆ. ಟ್ರೈಲರ್ನಲ್ಲಿ ಇರ್ಫಾನ್ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.
ʼಕೆಜಿಎಫ್ʼ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಚಿತ್ರದಲ್ಲಿ ವಿಕ್ರಮ್ಗೆ ಜೊತೆಯಾಗಿದ್ದು, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಆಗಸ್ಟ್ 31ರಂದು ತೆರೆಗೆ ಬರಲಿದೆ. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕೋಬ್ರಾ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾದ ಬೆನ್ನಲ್ಲೆ ವಿಕ್ರಮ್ ಮತ್ತು ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮೊದಲ ಹಂತದ ಪ್ರಚಾರಕ್ಕಾಗಿ ಶನಿವಾರ (ಆಗಸ್ಟ್ 27) ಬೆಂಗಳೂರಿಗೆ ಬಂದಿಳಿದಿದೆ.