ಇದು ಆಟವೆ. ಆದರೆ ಆಟವಲ್ಲ. ಅಂದ ಮೇಲೆ 'ಮ್ಯಾನ್ ಆಫ್ ದಿ ಮ್ಯಾಚ್' ಎಂದು ಕರೆದಿರುವುದೇಕೆ ಎಂದು ತಲೆಕೆರೆದುಕೊಳ್ಳದೆ ಸಿನಿಮಾ ನೋಡಬೇಕು. ರಾಮಾ ರಾಮಾ ರೇ ಥರದ ಹೊಸ ಅನುಭವ ನೀಡಿದ, ಒಂದಲ್ಲಾ ಎರಡಲ್ಲಾ ಸಿನಿಮಾ ಮೂಲಕ ಸರಳ ಕತೆಯನ್ನು ಕನ್ನಡಿಗರ ಎದೆಗೆ ದಾಟಿಸಿದವರು ಸತ್ಯಪ್ರಕಾಶ್. ಈಗ 'ಮ್ಯಾನ್ ಆಫ್ ಮ್ಯಾಚ್' ಚಿತ್ರದೊಂದಿಗೆ ಒಟಿಟಿ ವೇದಿಕೆಗೆ ಬಂದಿದ್ದಾರೆ.
ʼಆಡಿಷನ್ ಸೆಟ್ʼನಲ್ಲಿ ಶುರುವಾಗುವ ʼಮ್ಯಾಚ್ʼ ದಿನವಿಡೀ ಅದೇ ʼಸೆಟ್ʼ ಸುತ್ತ ಗಿರಿಕಿ ಹೊಡೆಯುತ್ತದೆ. ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿ ಅಷ್ಟಕ್ಕಷ್ಟೇ ಎನ್ನುವಂತೆ ಗುರುತಿಸಿಕೊಳ್ಳುವ ನಟರಾಜ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾನೆ. ನಟರಾಜನ ಹೊಸ ಪ್ರಯೋಗಕ್ಕೆ ಬೆಂಬಲವಾಗಿ ನಿಲ್ಲುವ ಆತನ ಗೆಳೆಯ (ಚಿತ್ರರಂಗದಲ್ಲಿ ಅದಾಗಲೇ ನಟನಾಗಿ ತಕ್ಕ ಮಟ್ಟಿಗೆ ಹೆಸರು ಮತ್ತು ದುಡ್ಡು ಮಾಡಿರುವ ವ್ಯಕ್ತಿ) ಧರ್ಮಣ್ಣ ಚಿತ್ರಕ್ಕೆ ಬಂಡವಾಳ ಹಾಕಲು ಸಜ್ಜಾಗುತ್ತಾನೆ.
ಈ ಸುದ್ದಿಯನ್ನು ಓದಿದ್ದೀರಾ? | ನೆಟ್ಫ್ಲಿಕ್ಸ್ನಲ್ಲಿ ನಂಬರ್ 1 ಪಟ್ಟಕ್ಕೇರಿದ ಗಂಗೂಬಾಯಿ ಕಾಠಿಯಾವಾಡಿ
ತನ್ನನ್ನು ನಂಬಿ ಹಣ ಹಾಕಲು ಒಪ್ಪಿಕೊಳ್ಳುವ ಗೆಳೆಯನಿಗೆ ಕನಿಷ್ಠ ಚಿತ್ರದ ಕತೆಯನ್ನೂ ಹೇಳದೆ ನಿರ್ದೇಶಕ ನೇರವಾಗಿ ʼಆಡಿಷನ್ʼ ನಡೆಸಲು ಮುಂದಾಗುತ್ತಾನೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರವನ್ನೂ ಮಾಡುತ್ತಾನೆ. ʼಆಡಿಷನ್ʼಗಾಗಿ ದೊಡ್ಡ ʼಸೆಟ್ʼ ಅನ್ನು ದಿನದ ಬಾಡಿಗೆಗೆ ಪಡೆಯುತ್ತಾನೆ. ಆದರೆ, ಹೊಸಬರ ಸಿನಿಮಾ ಎಂಬ ಕಾರಣಕ್ಕೆ ʼಆಡಿಷನ್ʼ ನೀಡಲು ಯಾರೂ ಮುಂದೆ ಬರುವುದಿಲ್ಲ. ಕಲಾವಿದರ ಸುಳಿವೇ ಇಲ್ಲದೆ ಬೇಸತ್ತು ʼಆಡಿಷನ್ʼ ಮುಚ್ಚುವ ಸ್ಥಿತಿಗೆ ಬರುವ ಚಿತ್ರತಂಡಕ್ಕೆ ಗಾಂಧಿ ಪಾತ್ರಧಾರಿಯೊಬ್ಬರು ಆಪತ್ಭಾಂದವನಂತೆ ಎದುರುಗುತ್ತಾರೆ. ಸಹಾಯಕ ನಿರ್ದೇಶಕನ ಕೆಲಸ ಕೇಳಿಕೊಂಡು ಬರುವ ಆತ ಚಿತ್ರತಂಡದ ಗೋಳು ಕೇಳಿ ತಾವೇ ಕಲಾವಿದರನ್ನು ಒಟ್ಟುಗೂಡಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಅದರಂತೆ ನೂರಾರು ಜನ ಕಲಾವಿದರು ʼಆಡಿಷನ್ʼನಲ್ಲಿ ಭಾಗಿಯಾಗುವಂತೆ ಮಾಡುತ್ತಾರೆ.
ಸಿನಿಮಾದಲ್ಲಿ ಒಂದೇ ಒಂದು ಪಾತ್ರ ಮಾಡಲು 25 ವರ್ಷಗಳಿಂದ ಕಾಯುತ್ತಿರುವ ಸ್ವಾಮಿ, ಚಿಕ್ಕ ಪಾತ್ರ ಸಿಕ್ಕರೆ ಸಾಕೆನ್ನುವ ಆಟೋ ಡ್ರೈವರ್, ನಟನಾಗುವ ಹೆಬ್ಬಯಕೆಯಿಂದ ಕಟೌಟ್ ಹಿಡಿದುಕೊಂಡೇ ಸೆಟ್ಗೆ ಹಾಜರಾಗುವ ಹುಡುಗ, ನಟಿಯಾಗಿ ಮನೆಯವರಿಗೆ ʼಸರ್ಪ್ರೈಸ್ʼ ಕೊಡುತ್ತೇನೆಂದು ಬರುವ ಮಯೂರಿ, ಮದುವೆಗೆ ಮೊದಲು ಸಿನಿಮಾದಲ್ಲಿ ನಟಿಸುವ ಆಸೆ ಹೊತ್ತು ಭಾವಿ ಪತಿಯೊಂದಿಗೆ ಓಡೋಡಿ ಬರುವ ಭಾವನಾ, ಇದೇ ನನ್ನ ಕೊನೆಯ ಸಿನಿಮಾ ಎನ್ನುವ ಹಿರಿಯ ನಟಿ ವೀಣಾ ಸುಂದರ್ ಹೀಗೆ ನೂರಾರು ಮಂದಿ ಒಂದೇ ಸೆಟ್ನಲ್ಲಿ ಜಮಾಯಿಸುತ್ತಾರೆ.
ಇವರೆಲ್ಲರನ್ನು ಇಟ್ಟುಕೊಂಡು ʼಆಡಿಷನ್ʼ ಶುರು ಮಾಡುವ ನಿರ್ದೇಶಕ ಆರಂಭದಿಂದಲೇ ಪ್ರತಿಯೊಬ್ಬರ ಮೇಲೂ ಕ್ಯಾಮೆರಾ ಕಣ್ಣಿರಿಸುತ್ತಾನೆ. ಅವರೆಲ್ಲರ ಚಲನವಲನಗಳನ್ನು ಚಿತ್ರೀಕರಿಸುತ್ತಾನೆ. ಹಂತ ಹಂತವಾಗಿ ʼಆಡಿಷನ್ʼ ನಡೆಸುವ ನಿರ್ದೇಶಕ ತನಗೆ ಬೇಕಾದ ಸನ್ನಿವೇಶಗಳನ್ನು ನೀಡಿ ಎಲ್ಲರಿಗೂ ನಟಿಸಲು ಸೂಚಿಸುತ್ತಾನೆ. ಇದೆಲ್ಲವೂ ಸೆರೆಯಾಗುತ್ತಲೇ ಹೋಗುತ್ತದೆ. ಅವಕಾಶ ಸಿಕ್ಕರೆ ಸಾಕೆನ್ನುವ ಎಲ್ಲರೂ ತಮ್ಮ ಖಾಸಗಿತನದ ಬಳಕೆಯಾಗುತ್ತಿದೆ ಎಂಬುದನ್ನು ನಿರ್ಲಕ್ಷಿಸುತ್ತಾರೆ. ಮೊದ ಮೊದಲಿಗೆ ಎಲ್ಲವೂ ಸಹಜಾವಾಗಿಯೇ ಸಾಗುತ್ತದೆ. ನಿರ್ಮಾಪಕನಿಂದ ಹಿಡಿದು ನಿರ್ದೇಶಕನ ಅಂತರಾಳ ಅರಿಯದ ಎಲ್ಲರೂ ಆತನ ತಾಳಕ್ಕೆ ಕುಣಿಯುತ್ತಲೇ ಹೋಗುತ್ತಾರೆ. ಈ ಹೊತ್ತಿನಲ್ಲಿ ನೋಡುಗರಿಗೆ ಸಿನಿಮಾ ಕೊಂಚ ಮಟ್ಟಿಗೆ ನಿಧಾನ ಎನ್ನಿಸದೆ ಇರದು.
ಹಂತ ಹಂತವಾಗಿ ʼಆಡಿಷನ್ʼ ನಡೆಸುವ ನಟರಾಜ ಅದೆಲ್ಲವನ್ನೂ ಸೆರೆ ಹಿಡಿಯುತ್ತ ತನ್ನ ಪ್ರಯೋಗವನ್ನು ನಡೆಸುತ್ತಲೇ ಹೋಗುತ್ತಾನೆ. ಅರ್ಧ ದಿನ ಕಳೆದರೂ ಯಾವ ಕಲಾವಿದರನ್ನೂ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದೇ ಇಲ್ಲ. ನಿರ್ದೇಶಕನ ಈ ಅತಿರೇಕದ ʼಆಡಿಷನ್ʼ ನೋಡಿ ಕೋಪಗೊಳ್ಳುವ ಧರ್ಮಣ್ಣ ನಾನು ಸಿನಿಮಾಗೆ ಬಂಡವಾಳ ಹಾಕುವುದೇ ಇಲ್ಲ ಎಂದು ತಿರುಗಿ ಬೀಳುತ್ತಾನೆ. ಆಗ ಬೇರೆ ವಿಧಿಯಿಲ್ಲದೆ ಸತ್ಯ ಬಾಯಿ ಬಿಡುವ ನಟರಾಜ ತಾನು ನಡೆಸುತ್ತಿರುವುದು ʼಆಡಿಷನ್ʼ ಅಲ್ಲ. ನೈಜವಾಗಿಯೇ ಸಿನಿಮಾ ಚಿತ್ರೀಕರಣವನ್ನು ನಡೆಸುತ್ತಿದ್ದೇನೆ ಎನ್ನುತ್ತಾನೆ. ಈ ಮಾತು ಕೇಳಿ ಅಚ್ಚರಿ ಪಡುವ ಧರ್ಮಣ್ಣ ಖರ್ಚಿಲ್ಲದೆ ಸಿನಿಮಾ ಸಿದ್ಧವಾಗ್ತಿದೆ ಎಂದು ಲಾಭದ ಲೆಕ್ಕಾಚಾರಕ್ಕೆ ಇಳಿಯುತ್ತಾನೆ.
ನಿರ್ಮಾಪಕನ ಸಹಕಾರ ಸಿಕ್ಕಮೇಲೆ ಕೇಳಬೇಕೇ? ಅಲ್ಲಿಯ ವರೆಗೂ ನಟನೆಗೆ ಸೀಮಿತವಾಗಿದ್ದ ʼಆಡಿಷನ್ʼ ನಂತರದ ಕೆಲ ಹೊತ್ತಿನಲ್ಲಿ ಗಲಾಟೆ, ಗದ್ದಲಕ್ಕೂ ತಿರುಗುತ್ತದೆ.
ತನ್ನ ಭಾವಿ ಪತ್ನಿ ಸಿನಿಮಾದಲ್ಲಿ ಬಣ್ಣ ಹಚ್ಚಿದರೆ ತನಗೇನೂ ತೊಂದರೆ ಇಲ್ಲ ಎನ್ನುತ್ತ ಆಕೆಯನ್ನು ʼಆಡಿಷನ್ʼಗೆ ಕರೆತರುವ ಭೂಷಣ್, ಆಕೆಯ ಪಾತ್ರವನ್ನು ನೋಡಿ ಮದುವೆಯನ್ನೇ ಮುರಿದುಕೊಂಡು ಹೊರಟು ಬಿಡುತ್ತಾನೆ. ನಟಿಯಾಗಿ ಅಪ್ಪ ಅಮ್ಮನಿಗೆ ಸರ್ಪ್ರೈಸ್ ಕೊಡುತ್ತೇನೆಂದು ಬಂದಿದ್ದ ಮಯೂರಿ ನಿರ್ದೇಶಕನಿಗೆ ಕೈ ಮುಗಿದು ಸಹವಾಸವೇ ಬೇಡವೆಂದು ಹೊರಡುತ್ತಾಳೆ. ಈ ಎರಡೂ ಪಾತ್ರಗಳನ್ನು ಕಟ್ಟಿಕೊಡುತ್ತ ಚಿತ್ರದ ಅಸಲಿ ನಿರ್ದೇಶಕರು ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಗಂಭೀರವಾದ ಅಂಶಗಳನ್ನೇ ಚರ್ಚೆಗಿಡುತ್ತಾರೆ.
ನಟನಾಗಿಯೇ ತೀರುತ್ತೇನೆಂದು ಬರುವ ಹುಡುಗನ ʼಕಟೌಟ್ʼ ಅನ್ನು ಕೂಲಿಯವನೊಬ್ಬ ಕಟ್ಟಿ ನಿಲ್ಲಿಸುವ ಹೊತ್ತಿಗೆ ಆ ಹುಡುಗ ನಟನೆಯ ಆಸೆಯನ್ನೇ ಬಿಟ್ಟಿರುತ್ತಾನೆ. ಬಣ್ಣದ ಲೋಕದಲ್ಲಿ ಮಿಂಚುವ ಬಯಕೆ ಹೊತ್ತು ದಿನ ಶುರು ಮಾಡಿದ್ದ ಪ್ರತಿಯೊಬ್ಬರೂ ಇಳಿ ಸಂಜೆಯ ಹೊತ್ತಿಗೆ ಬಾಡಿ ಬೆಂಡಾಗಿ ಮನೆಯ ದಾರಿ ಹಿಡಿಯುತ್ತಾರೆ.
ʼಆಡಿಷನ್ʼ ಹೆಸರಲ್ಲಿ ಹೊಸ ಬಗೆಯ ಸಿನಿಮಾ ಮಾಡಿ ಗೆದ್ದೇ ಎಂದು ಬೀಗುವ ನಿರ್ದೇಶಕನಿಗೆ ಕೊನೆಯಲ್ಲಿ ಎದುರಾಗುವ ಗಾಂಧಿ ಪಾತ್ರಧಾರಿ, ಅನುಮತಿ ಇಲ್ಲದೆ ಇನ್ನೊಬ್ಬರ ಖಾಸಗಿತನವನ್ನು ಸೆರೆ ಹಿಡಿಯುವ ಹಕ್ಕು ನಿನಗಿಲ್ಲ ಎಂದು ವಿರೋಧಿಸುತ್ತಾರೆ. ಆದರೆ, ಕಿಂಚಿತ್ತೂ ಪಾಪಪ್ರಜ್ಞೆ ಇಲ್ಲದವನಂತೆ ವರ್ತಿಸುವ ನಿರ್ದೇಶಕ, ಇವತ್ತಿನ ದಿನಮಾನದಲ್ಲಿ ತಂತ್ರಜ್ಞಾನವೇ ಜನರ ಖಾಸಗಿತನಕ್ಕೆ ಕನ್ನ ಹಾಕಲು ದಾರಿ ಮಾಡಿ ಕೊಟ್ಟಿರುವಾಗ ನಿಮ್ಮ ಉಪದೇಶ ನಿಷ್ಪ್ರಯೋಜಕ ಎನ್ನುತ್ತಾನೆ. ನಿನ್ನ ಖಾಸಗಿತನಕ್ಕೆ ಕುತ್ತು ಬಂದಾಗ ಉಳಿದವರ ಸಂಕಟ ನಿನಗೆ ಅರ್ಥವಾಗುತ್ತೆ ಎಂದು ಬೇಸರದಲ್ಲೇ ಗಾಂಧಿ ಪಾತ್ರಧಾರಿ ಅಲ್ಲಿಂದ ಹೊರಡುತ್ತಾರೆ.
ಈ ಹೊತ್ತಿಗೆ ನೋಡುಗರಿಗೆ ಅರಿವಿಲ್ಲದೆಯೇ ಚಿತ್ರ ಕೊನೆಯ ಘಟ್ಟಕ್ಕೆ ಬಂದು ನಿಲ್ಲುತ್ತದೆ. ಖಾಸಗಿತನ ಮತ್ತು ಸಮಾಜದಲ್ಲಿ ಹೆಣ್ಣಿಗೆ ಅಂಟಿಕೊಂಡಿರುವ ಸಂಕೋಲೆಗಳ ಬಗ್ಗೆ ನಿರ್ದೇಶಕ ಸತ್ಯಪ್ರಕಾಶ್ ತಮ್ಮದೇ ಶೈಲಿಯಲ್ಲಿ ಧ್ವನಿ ಎತ್ತಿರುವುದು ಅಭಿನಂದನೀಯ. ಹಿರಿಯ ಕಲಾವಿದರಾದ ಸುಂದರ್ ಮತ್ತು ವೀಣಾ ಅನಾಯಾಸವಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಿರ್ದೇಶಕನ ಪಾತ್ರದಲ್ಲಿ ನಟರಾಜ ಸಂಪೂರ್ಣವಾಗಿ ಜೀವಿಸಿದ್ದಾರೆ. ಧರ್ಮಣ್ಣ ಅವರ ಹಾಸ್ಯ ಎಲ್ಲರನ್ನೂ ನಗೆ ಗಡಲಿನಲ್ಲಿ ತೇಲಿಸದೆ ಇರದು. ಹೊಸ ಪ್ರತಿಭೆಗಳಾದ ಅಥರ್ವ ಪ್ರಕಾಶ್, ಮಯೂರಿ ನಟರಾಜ್, ಬೃಂದಾ ವಿಕ್ರಮ್ ನಟನೆ ಚೊಕ್ಕವಾಗಿದೆ. ಚಿತ್ರದ ಮಧ್ಯಭಾಗದಲ್ಲಿ ಹಾದು ಹೋಗುವ ಹಾಡನ್ನು ಅಪ್ಪು ಧ್ವನಿಯಲ್ಲಿ ಕೇಳಲು ಇಂಪಾಗಿದೆ. ವಾಸುಕಿ ವೈಭವ್ ಸಂಗೀತ ಮನ ಮುಟ್ಟುವಂತಿದೆ. ಇರಾನಿ ಚಿತ್ರ ನಿರ್ದೇಶಕ ಮೊಹಸೆನ್ ಮಕ್ಮಲ್ಬಫ್ ನಿರ್ದೇಶನದ ʻಹೆಲೋ ಸಿನಿಮಾʼವನ್ನು ನೆನಪಿಸುವ ʻ ಮ್ಯಾನ್ ಆಫ್ ದಿ ಮ್ಯಾಚ್ʼ ಕನ್ನಡದ ಚಿತ್ರ ಪ್ರೇಮಿಗಳಿಗೆ ಹೊಸ ಅನುಭವ ನೀಡಲಿದೆ.
ಚಿತ್ರ : ʼಮ್ಯಾನ್ ಆಫ್ ದಿ ಮ್ಯಾಚ್ʼ
ನಿರ್ದೇಶಕ : ಡಿ. ಸತ್ಯಪ್ರಕಾಶ್
ನಿರ್ಮಾಪಕರು : ಅಶ್ವಿನಿ ಪುನೀತ್ ರಾಜ್ಕುಮಾರ್