ಜುಲೈ 16- 17ರಂದು ಮೈಸೂರಿನಲ್ಲಿ ‘ಡೆಸ್ಡೆಮೋನಾ ರೂಪಕಮ್‌’ ನಾಟಕ ಪ್ರದರ್ಶನ

ಹೆಣ್ಣಿನ ಅಂತರಂಗವನ್ನು ಬಿಚ್ಚಿಡುವ 'ಡೆಸ್ಡೆಮೋನಾ ರೂಪಕಮ್‌' ನಾಟಕ ಮತ್ತು ಸಂವಾದ ಕಾರ್ಯಕ್ರಮ ಮೈಸೂರಿನ ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಜುಲೈ 16- 17ರಂದು ಸಂಜೆ 6.30ಕ್ಕೆ ಆಯೋಜಿಸಲಾಗಿದೆ.

ಪ್ರಸಿದ್ಧ ಇಂಗ್ಲಿಷ್ ಸಾಹಿತಿ ವಿಲಿಯಂ ಶೇಕ್ಸ್‌ಪಿಯರ್‌ ಅವರ 'ಓಥೆಲೋ' ಮತ್ತು ಟಿಶಾನಿ ದೋಶಿಯವರ 'ಗರ್ಲ್ಸ್‌ ಆರ್ ಕಮಿಂಗ್ ಔಟ್ ಆಫ್ ದ ವುಡ್ಸ್‌'ದಿಂದ ಆಯ್ದುಕೊಂಡ ಗೀತನಾಟಕ ಇದಾಗಿದೆ.

ನಾಟಕದಲ್ಲಿ ಡೆಸ್ಡೆಮೋನಾ ಮತ್ತು ಓಥೆಲೋ ಪಾತ್ರದಲ್ಲಿ ಹೆಸರಾಂತ ಗಾಯಕಿಯರಾದ ಎಂ ಡಿ ಪಲ್ಲವಿ ಮತ್ತು ಬಿಂದು ಮಾಲಿನಿ ಅಭಿನಯಿಸಲಿದ್ದಾರೆ. ಅಭಿಷೇಕ್‌ ಮಜುಂದಾರ್‌ ನಾಟಕದ ನಿರ್ದೇಶನ ಮತ್ತು ದೃಶ್ಯ ಸಂಯೋಜನೆ ಮಾಡಿದ್ದಾರೆ. ನಾಟಕ ಪರಿಕಲ್ಪನೆ ಮತ್ತು ರಚನೆಯನ್ನು ಇರಾವತಿ ಕಾರ್ಣಿಕ್‌, ಅಭಿಷೇಕ್‌ ಮಜುಂದಾರ್‌, ಎಂ ಡಿ ಪಲ್ಲವಿ, ಬಿಂದು ಮಾಲಿನಿ, ವೀಣ ಅಪ್ಪಯ್ಯ ಹಾಗೂ ನಿಖಿಲ್‌ ನಾಗರಾಜ್‌ ಅವರು ಮಾಡಿದ್ದಾರೆ. 

ನಳಂದ ಆರ್ಟ್ಸ್‌ ಸ್ಟುಡಿಯೋ ಮತ್ತು ಸೇಂಟರ್‌ ಫಾರ್‌ ಐಡಿಯಾಸ್‌ “ಸರಸ್ವತಿ, ಸಣ್ತಿಮ್ಮಿ, ಶರಣ್ಯ ಮತ್ತು ಹೆಣ್ಣು” ಎಂಬ ಹೆಸರಿನಲ್ಲಿ ಜುಲೈ 17ರಂದು ಸಂಜೆ 4ಕ್ಕೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಿದೆ. ಪಾರಂಪರಿಕ ಕಲಾಪ್ರಕಾರಗಳಲ್ಲಿ ವ್ಯವಸ್ಥೆಗಳನ್ನು ಮುರಿದು ಕಟ್ಟುವ ಪಾತ್ರಧಾರಿಗಳು ಮತ್ತು ಅವಶ್ಯಕವಾಗಿರುವ ಹೆಣ್ಣಿನ ನೋಟದ ವಿಷಯಗಳ ಕುರಿತು ಸಂವಾದ ನಡೆಯಲಿದೆ. ಸಂವಾದವನ್ನು ಕವಯಿತ್ರಿ ಮತ್ತು ಹೋರಾಟಗಾರ್ತಿಯಾಗಿರುವ ದು ಸರಸ್ವತಿ ಮತ್ತು ರಂಗಕರ್ಮಿ ಶರಣ್ಯ ರಾಮಪ್ರಕಾಶ್‌ ಅವರು ನಡೆಸಿಕೊಡಲಿದ್ದಾರೆ. 

ನಾಟಕದ ಕಥಾ ಹಂದರ

ಓಥೆಲೋ ಮತ್ತು ಡೆಸ್ಡೆಮೋನಾ ದಂಪತಿ ನಡುವಿನ ಪ್ರೀತಿ, ದ್ವೇಷ, ಅಸಹ್ಯ, ನೋವುಗಳ ದೃಶ್ಯಗಳು ಹಾಸ್ಯ, ಗಂಭೀರ, ಪ್ರೀತಿ ಹಾಗೂ ಕೋಪದ ಎಲ್ಲ ಅಭಿವ್ಯಕ್ತಿಗಳಲ್ಲಿ ಗೀತನಾಟಕದಲ್ಲಿ ನೋಡಬಹುದು. ಪತಿ ಓಥೆಲೋ, ಡೆಸ್ಡೆಮೋನಾ ಮೇಲೆ ಅನುಮಾನ ಪಟ್ಟು ಹೆಂಡತಿಯನ್ನೇ ಕೊಲ್ಲುವ ಮನಕರಗುವ ದೃಶ್ಯ ದಾಂಪತ್ಯದಲ್ಲಿ ಮಹಿಳೆಯರು ಅನುಭವಿಸುವ ನೋವಿಗೆ ಕನ್ನಡಿ ಹಿಡಿಯುತ್ತದೆ. 

ಡೆಸ್ಡೆಮೋನಾ ಪಾತ್ರದಲ್ಲಿ ಹೆಣ್ಣಿಗೆ ಯಾವ ಧ್ವನಿ ಕೊಟ್ಟಿದ್ದೀವಿ ಎಂಬ ಪ್ರಶ್ನೆ ಏಳುತ್ತದೆ. ಕಥೆ ಹೇಳುವ ರೀತಿಯಲ್ಲೇ ಕಥೆಗಾರರು ಕೂಡ ಹೆಣ್ಣಿನ ಧ್ವನಿಯಾಗಿದ್ದಾರೆ. ಡೆಸ್ಡೆಮೋನಾ ಕತೆ ಹೇಳುತ್ತಲೇ, ರಾಮಯಾಣದ ಸೀತೆ, ಕೈಕೇಯಿ ಹಾಗೂ ಶಕುಂತಲೆಯರ ಬದುಕೂ ತೆರೆದುಕೊಳ್ಳುತ್ತದೆ. ನಮ್ಮ ಪುರಾಣಗಳು ಇವರ ಧ್ವನಿಗೆ ಎಷ್ಟು ಪ್ರಾಮುಖ್ಯತೆ ನೀಡಿದೆ ಎನ್ನುವ ಪ್ರಶ್ನೆಯನ್ನು ಸಹಜವಾಗಿ ಮುಂದಿಡುತ್ತದೆ ಡೆಸ್ಡೆಮೋನಾ ರೂಪಕಮ್‌ ನಾಟಕ. ಇದು ತ್ರಿಭಾಷೆಯಲ್ಲಿ ಸಾಗುವ ಗೀತನಾಟಕವಾಗಿದೆ.

ಮೈಸೂರಿನಲ್ಲಿ ಮೊದಲ ಪ್ರದರ್ಶನ

ನಾಟಕ ಪ್ರದರ್ಶನದ ಬಗ್ಗೆ ಎಂ ಡಿ ಪಲ್ಲವಿ ಅವರು ಈದಿನ.ಕಾಮ್‌ ಜೊತೆಗೆ ಮಾತನಾಡಿ, “ನಾಟಕವು ಹೆಣ್ಣಿನ ಧ್ವನಿಯಾಗಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ. ನಾಟಕದ ಬಗ್ಗೆ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಈಗಾಗಲೇ ನಾಟಕವು ಸುಮಾರು 25 ಬಾರಿ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರದರ್ಶನಗೊಂಡಿದೆ. ನಾಟಕದ ಬಗ್ಗೆ ಸಾಕಷ್ಟು ಪ್ರೋತ್ಸಾಹ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಈವರೆಗೂ ಬೆಂಗಳೂರಿನಲ್ಲಿ ಮಾತ್ರ ನಾಟಕ ಪ್ರದರ್ಶನಗೊಂಡಿದ್ದು, ರಾಜ್ಯಾದ್ಯಂತ ನಾಟಕ ಪ್ರದರ್ಶಿಸುವ ಅಭಿಲಾಷೆ ಹೊಂದಿದ್ದೇವೆ. ಮೊದಲಿಗೆ ಮೈಸೂರಿನ ಮೂಲಕ ಪ್ರಾರಂಭಿಸುತ್ತಿದ್ದೇವೆ. ಮೈಸೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಬರುತ್ತಾರೆ ಎಂಬ ನಿರೀಕ್ಷೆಯಿದೆ.

ದು ಸರಸ್ವತಿ ಅವರು ಸಣ್ತಿಮ್ಮಿ ಎಂಬ ಪಾತ್ರವನ್ನು ಸೃಷ್ಟಿಸಿದ್ದು, ಏಕಪಾತ್ರಭಿನಯ ಮಾಡಲಿದ್ದಾರೆ. ಈ ಸಣ್ತಿಮ್ಮಿ ಎಂಬ ಪಾತ್ರದ ಮೂಲಕ ಸಣ್ತಿಮ್ಮಿ ಜಗತ್ತನ್ನು ನೋಡುವ ರೀತಿ, ಪುರಾಣಗಳನ್ನು ನೋಡುವ ರೀತಿ, ನಮ್ಮ ಸುತ್ತಲೂ ನಡೆಯುವ ಘಟನೆಗಳ ಬಗ್ಗೆ ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ದು ಸರಸ್ವತಿ ಅವರು ಅಭಿನಯಿಸಲಿದ್ದಾರೆ” ಎಂದು ತಿಳಿಸಿದರು.

ನಳಂದ ಆರ್ಟ್ಸ್‌ ಸ್ಟುಡಿಯೋ ಅರ್ಪಿಸುವ ಡೆಸ್ಡೆಮೋನಾ ರೂಪಕಮ್‌ ನಾಟಕ ಮೊದಲ ಬಾರಿಗೆ ಮೈಸೂರಿನಲ್ಲಿ ಪ್ರದರ್ಶನವಾಗುತ್ತಿದೆ. ನಾಟಕವು ಜುಲೈ 16 ಮತ್ತು 17ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಕನ್ನಡ, ತಮಿಳು ಹಾಗೂ ಆಂಗ್ಲಭಾಷೆಗಳಲ್ಲಿ ನಾಟಕ ನಡೆಯಲಿದೆ. 

ಡೆಸ್ಡೆಮೋನಾ ರೂಪಕಮ್‌ ನಾಟಕವು ವಿಲಿಯಮ್‌ ಶೇಕ್ಸ್‌ಪಿಯರ್‌ ಅವರ ‘ಓಥೆಲೋ’ ಮತ್ತು ಟಿಶಾನಿ ದೋಶಿಯವರ ‘ಗರ್ಲ್ಸ್‌ ಆರ್‌ ಕಮಿಂಗ್‌ ಔಟ್‌ ಆಫ್‌ ದಿ ವುಡ್ಸ್‌’ ಎಂಬ ಪಠ್ಯ ಮೂಲದಿಂದ ರಚನೆಯಾಗಿದೆ.

ನಾಟಕ ಪ್ರದರ್ಶನದ ಟಿಕೆಟ್‌ ಕಾಯ್ದಿದಿರಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7259537777, 9480468327, 9845272215.

ನಿಮಗೆ ಏನು ಅನ್ನಿಸ್ತು?
3 ವೋಟ್