ಧನುಷ್‌ ಮೊದಲ ಹಾಲಿವುಡ್‌ ಸಿನಿಮಾ ಬಿಡುಗಡೆಗೆ ಕ್ಷಣಗಣನೆ

the gray man
  • ʼಪ್ರೀಮಿಯರ್‌ ಶೋʼನಲ್ಲಿ ಲುಂಗಿ, ಬಿಳಿ ಅಂಗಿಯಲ್ಲಿ ಮಿಂಚಿದ ಧನುಷ್‌
  • ಜುಲೈ 22ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲಿದೆ ʼದಿ ಗ್ರೇ‌ ಮ್ಯಾನ್ʼ

ʼಕ್ಯಾಪ್ಟನ್‌ ಅಮೆರಿಕಾʼ, ʼಅವೆಂಜರ್ಸ್‌ʼ ಸರಣಿಯ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಆಂಥೋನಿ ಮತ್ತು ಜೋ ರುಸ್ಸೋ ಸಹೋದರರು ಜಂಟಿಯಾಗಿ ನಿರ್ದೇಶಿಸಿರುವ ಹಾಲಿವುಡ್‌ನ ಬಹುನಿರೀಕ್ಷಿತ 'ದಿ ಗ್ರೇ ಮ್ಯಾನ್‌' ಸಿನಿಮಾ ಜುಲೈ 22ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣುತ್ತಿದೆ. ಈ ಸಿನಿಮಾ ವಿಶೇಷವೆಂದರೆ ತಮಿಳಿನ ಸ್ಟಾರ್‌ ನಟ ಧನುಷ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಲಾಸ್‌ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ 'ದಿ ಗ್ರೇ ಮ್ಯಾನ್‌' ಚಿತ್ರದ ಪ್ರಚಾರ ನಡೆಸಿದ್ದ ಚಿತ್ರತಂಡ ಇದೀಗ ಮುಂಬೈ ತಲುಪಿದೆ. ಸಿನಿಮಾ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗಲೇ ಮುಂಬೈ ತಲುಪಿರುವ ರುಸ್ಸೋ ಸಹೋದರರು, ನಟ ಧನುಷ್‌ ಮತ್ತು ಬಾಲಿವುಡ್‌ ತಾರೆಯರ ಜೊತೆಗೆ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಭಾರತದಲ್ಲೂ ʼದಿ ಗ್ರೇ ಮ್ಯಾನ್‌ʼಗೆ ಭರ್ಜರಿ ಪ್ರಚಾರ ನೀಡುವ ಪ್ರಯತ್ನ ಮಾಡಿದ್ದಾರೆ. ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಅದ್ದೂರಿ ಪ್ರೀಮಿಯರ್‌ ಶೋನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಾದ ಲುಂಗಿ ಮತ್ತು ಬಿಳಿ ಅಂಗಿಯನ್ನು ತೊಟ್ಟು ಧನುಷ್‌ ಗಮನ ಸೆಳೆದಿದ್ದಾರೆ. 

Image
dhanush

ʼಸಿಯಾರಾ ಪ್ರೋಗ್ರಾಮ್‌ʼ ಎಂಬ ರಹಸ್ಯ ಕಾರ್ಯಾಚರಣೆಯ ಸುತ್ತ 'ದಿ ಗ್ರೇ ಮ್ಯಾನ್‌' ಕತೆಯನ್ನು ಹೆಣೆಯಲಾಗಿದ್ದು, ಸುಪಾರಿ ಕಿಲ್ಲಿಂಗ್‌ ಎಳೆಯೂ ಚಿತ್ರದಲ್ಲಿದೆ. ರೇನ್‌ ಗೊಸ್ಲಿಂಗ್‌ ಮತ್ತು ಕ್ರಿಸ್‌ ಇವಾನ್ಸ್ ಚಿತ್ರದಲ್ಲಿ ಎದುರಾಳಿಗಳಾಗಿ ಕಾಣಿಸಿಕೊಂಡಿದ್ದು, ಧನುಷ್‌ ಕೂಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಕಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್‌ ಎನ್ನಿಸಿಕೊಂಡಿರುವ ಧನುಷ್‌ ಈ ಹಿಂದೆ ಬಾಲಿವುಡ್‌ನಲ್ಲೂ ಮಿಂಚಿದ್ದರು. 'ದಿ ಗ್ರೇ ಮ್ಯಾನ್‌' ಮೂಲಕ ಧನುಷ್‌ ಹಾಲಿವುಡ್ ಪ್ರವೇಶಿಸಿದ್ದು, ಚಿತ್ರದಲ್ಲಿ ಧನುಷ್‌ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅವ ಅಭಿಮಾನಿಗಳಲ್ಲಿ ಮನೆ ಮಾಡಿದೆ. 

 

ನಿಮಗೆ ಏನು ಅನ್ನಿಸ್ತು?
0 ವೋಟ್