
- ಯುವ ನಿರ್ದೇಶಕ ಶ್ರೀಧರ್ ಶಿಕಾರಿಪುರ ನಿರ್ದೇಶನದ ಚೊಚ್ಚಲ ಚಿತ್ರ
- ಬಾಕ್ಸಿಂಗ್ ಪಟುವಿನ ಬದುಕಿನ ಸುತ್ತ ಮೂಡಿರುವ ಕ್ರೈಂ, ಥ್ರಿಲ್ಲರ್ ಕಥನ
ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಕಾರಣಾಂತರಗಳಿಂದಾಗಿ ಮುಂದೂಡಿತ್ತು. ಇದೀಗ ಹೊಸ ದಿನಾಂಕ ಘೋಷಣೆ ಮಾಡಿರುವ ಚಿತ್ರತಂಡ ಡಿಸೆಂಬರ್ 2ರಂದು ಚಿತ್ರ ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದೆ.
‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ವಿಭಿನ್ನ ಶೀರ್ಷಿಕೆಯ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಶ್ರೀಧರ್ ಶಿಕಾರಿಪುರ ಆಕ್ಷನ್ ಕಟ್ ಹೇಳಿದ್ದು, ಅವರಿಗಿದು ಚೊಚ್ಚಲ ಚಿತ್ರ. ತೆಲುಗಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಅವರೊಂದಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಶ್ರೀಧರ್ ಅವರಿಗಿದೆ.
ಬಾಕ್ಸಿಂಗ್ ಪಟುವಿನ ಬದುಕಿನ ಸುತ್ತ ಹೆಣೆಯಲಾಗಿರುವ ಈ ಚಿತ್ರದ ಕಥೆ ʼಕ್ರೈಂʼ, ʼಥ್ರಿಲ್ಲರ್ʼ ಅಂಶಗಳನ್ನು ಒಳಗೊಂಡಿದೆ. ಬಾಕ್ಸಿಂಗ್ ಕನಸಿನ ಬೆನ್ನತ್ತಿದ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆ ಆತನ ಬದುಕಿಗೆ ಯಾವ ರೀತಿಯ ತಿರುವು ನೀಡುತ್ತದೆ ಎಂಬುದನ್ನು ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶ್ರೀಧರ್.

ಗುಳ್ಟು ಖ್ಯಾತಿಯ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ʼಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ʼ ಬ್ಯಾನರ್ನಡಿ ಓಂಕಾರ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವೀರೇಂದ್ರ ಕಾಂಚನ್, ಗೌತಮಿ ರೆಡ್ಡಿ ಸಹನಿರ್ಮಾಣವಿದೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ.