ಸೆಪ್ಟೆಂಬರ್ 26ಕ್ಕೆ ಘೋಷಣೆಯಾಗಲಿದೆ ಧ್ರುವ ಸರ್ಜಾ ಹೊಸ ಸಿನಿಮಾದ ಟೈಟಲ್

prem-dhruva sarja
  • ಪ್ರಮುಖ ಪಾತ್ರದಲ್ಲಿ ನಟಿಸಲು ಸಂಜಯ್‌ ದತ್‌ಗೆ ಆಹ್ವಾನ
  • ಸೆಪ್ಟೆಂಬರ್‌ 27ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭ

'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ನೂತನ ಚಿತ್ರದ ಟೈಟಲ್‌ ಟೀಸರ್‌ ಸೆಪ್ಟೆಂಬರ್‌ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಮಾಹಿತಿ ನೀಡಿದ್ದಾರೆ. 

ಧ್ರುವ ಸರ್ಜಾ ಮತ್ತು ಪ್ರೇಮ್‌ ಕಾಂಬಿನೇಶನ್‌ನಲ್ಲಿ ಇತ್ತೀಚೆಗೆ ಸೆಟ್ಟೇರಿದ್ದ ನೂತನ ಸಿನಿಮಾದ ʼಪ್ರೀ ಪ್ರೊಡಕ್ಷನ್ʼ ಕೆಲಸಗಳು ಸದ್ದಿಲ್ಲದೆ ಪ್ರಾರಂಭಗೊಂಡಿದೆ. ಕಳೆದ ಒಂದು ವಾರದಿಂದ ಮುಂಬೈನ ʼಯಶ್ ರಾಜ್ ಫಿಲಂಸ್ʼ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಸೆಪ್ಟೆಂಬರ್ 26ಕ್ಕೆ ಚಿತ್ರದ ʼಟೈಟಲ್ ಟೀಸರ್ʼ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಚಿತ್ರೀಕರಣ ಪ್ರಾರಂಭ ಮಾಡುವ ಬಗ್ಗೆ ಮತ್ತು ಪಾತ್ರವರ್ಗದ ಕುರಿತು ಮಾಹಿತಿ ನೀಡಿರುವ ಪ್ರೇಮ್‌, "ಚಿತ್ರದ ಟೈಟಲ್ ಘೋಷಣೆಯಾದ ಮರುದಿನವೇ ಚಿತ್ರೀಕರಣ ಪ್ರಾರಂಭವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಾದರಿಯಲ್ಲಿ ತೆರೆಗೆ ಬರಲಿದೆ. ಅದಕ್ಕಾಗಿಯೇ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಲು ಸಂಜಯ್ ದತ್ ಅವರನ್ನು ಕೂಡ ಸಂಪರ್ಕಿಸಿದ್ದೇವೆ. ಕೇವಲ ಸಂಜಯ್ ದತ್ ಮಾತ್ರವಲ್ಲ, ನಾನಾ ಚಿತ್ರರಂಗದ ಹಲವು ಸ್ಟಾರ್ ನಟರು ನಮ್ಮ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ.

"ಅಂದಾಜು ನೂರು ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬೆಂಗಳೂರಿನ ಹೊರವಲಯವಾದ ಸೀಗೇಹಳ್ಳಿಯ 20 ಎಕರೆ ಜಾಗದಲ್ಲಿ ಮತ್ತು ಮಲ್ಲೇಶ್ವರಂ ಬಳಿಯ ಮೈಸೂರು ಲ್ಯಾಂಫ್ಸ್‌ ಫ್ಯಾಕ್ಟರಿ ಈ ಎರಡು ಕಡೆಗಳಲ್ಲಿ ಚಿತ್ರೀಕರಣಕ್ಕಾಗಿ ಸೆಟ್ ಹಾಕುತ್ತಿದ್ದೇವೆ. ಶೇ. 80ರಷ್ಟು ಚಿತ್ರೀಕರಣ ಈ ಸೆಟ್‌ಗಳಲ್ಲಿಯೇ ನಡೆಯಲಿದೆ" ಎಂದು ಪ್ರೇಮ್‌ ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್