
- ಕುಂಟುತ್ತಲೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾದ ದಿಗಂತ್
- ಡಿಸೆಂಬರ್ 2ರಂದು ತೆರೆಗೆ ಬರಲಿದೆ ʼತಿಮ್ಮಯ್ಯ & ತಿಮ್ಮಯ್ಯʼ ಸಿನಿಮಾ
ಸ್ಯಾಂಡಲ್ವುಡ್ನ ಖ್ಯಾತ ನಟ ದಿಗಂತ್ ಅಭಿನಯದ ʼತಿಮ್ಮಯ್ಯ & ತಿಮ್ಮಯ್ಯʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೂರು ನಿಮಿಷಗಳ ಟ್ರೈಲರ್ನಲ್ಲಿ ಹಿರಿಯ ನಟ ಅನಂತ್ ನಾಗ್ ತಾತನಾಗಿ ಕಾಣಿಸಿಕೊಂಡರೆ, ದಿಗಂತ್ ಮೊಮ್ಮಗನ ಪಾತ್ರದಲ್ಲಿ ಮಿಂಚಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ನಟ ಅನಂತ್ ನಾಗ್, ದಿಗಂತ್ ಐಂದ್ರಿತಾ ರೇ, ಶುಭ್ರ ಅಯ್ಯಪ್ಪ, ಚಿತ್ರದ ನಿರ್ದೇಶಕ ಸಂಜಯ್ ಶರ್ಮಾ ಸೇರಿದಂತೆ ಚಿತ್ರತಂಡದ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇತ್ತೀಚೆಗೆ ಗೋವಾದಲ್ಲಿ ಸಮ್ಮರ್ ಸಾಲ್ಟ್ ಸಾಹಸ ಕ್ರೀಡೆಯ ವೇಳೆ ಕುತ್ತಿಗೆ ಭಾಗಕ್ಕೆ ಪೆಟ್ಟು ಮಾಡಿಕೊಂಡು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸೇರಿ ಗುಣಮುಖರಾಗಿದ್ದ ನಟ ದಿಗಂತ್, ತಮ್ಮ ಎಡಗಾಲಿಗೆ ಪೆಟ್ಟು ಮಾಡಿಕೊಂಡಿರುವುದು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಬಹಿರಂಗವಾಗಿದೆ. ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರೂ ದಿಗಂತ್ ಕುಂಟುತ್ತಲೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಸಂಜಯ್ ಶರ್ಮ ನಿರ್ದೇಶನದ ʼತಿಮ್ಮಯ್ಯ & ತಿಮ್ಮಯ್ಯʼ ಸಿನಿಮಾ ತಾತ ಮತ್ತು ಮೊಮ್ಮಗನ ನಡುವಿನ ಹುಸಿ ಮುನಿಸು ಹಾಗೂ ಭಾವನಾತ್ಮಕ ಸಂಬಂಧದ ಸುತ್ತ ಮೂಡಿ ಬಂದಿದೆ. ಚಿತ್ರದಲ್ಲಿ ದಿಗಂತ್ಗೆ ಐಂದ್ರಿತಾ ರೇ ಮತ್ತು ಶುಭ್ರ ಅಯ್ಯಪ್ಪ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮಿನಾಡು ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜೇಶ್ ಶರ್ಮಾ ಬಂಡವಾಳ ಹೂಡಿರುವ ಹಾಸ್ಯ ಪ್ರಧಾನ ಕಥಾಹಂದರವುಳ್ಳ ಈ ಚಿತ್ರ ಡಿಸೆಂಬರ್ 2ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ.