ಡೊಳ್ಳು ಸೌಂಡ್‌ ಸಿಂಕ್‌ ಚಿತ್ರವಲ್ಲ; ನಿರ್ದೇಶಕ ಸಾಗರ್‌ ಪುರಾಣಿಕ್‌ ಸ್ಪಷ್ಟನೆ

sagar puranik

68ನೇ ಸಾಲಿನ ಕನ್ನಡದ ಅತ್ಯುತ್ತಮ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುವ 'ಡೊಳ್ಳು' ಚಿತ್ರ ಸೌಂಡ್‌ ಸಿಂಕ್‌ (ಚಿತ್ರೀಕರಣದ ಸ್ಥಳದಲ್ಲಿಯೇ ದೃಶ್ಯಗಳ ಜೊತೆಗೆ ಆ ಸನ್ನಿವೇಶಗಳ ಶಬ್ದವನ್ನು ನೈಜವಾಗಿ ಸೆರೆ ಹಿಡಿಯುವ ಪ್ರಕ್ರಿಯೆ) ವಿಭಾಗದಲ್ಲೂ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ, 'ಡೊಳ್ಳು' ಸಿನಿಮಾಗೆ ಸೌಂಡ್‌ ಸಿಂಕ್‌ ಮಾಡಲಾಗಿಲ್ಲ. ಅದು ಡಬ್‌ ಮಾಡಲಾಗಿರುವ ಚಿತ್ರ ಎಂಬ ಆಕ್ಷೇಪಗಳು ಕೇಳಿಬಂದಿದ್ದವು. ಸದ್ಯ ಈ ಸೌಂಡ್‌ ಸಿಂಕ್‌ ವಿವಾದಕ್ಕೆ ತೆರೆ ಬಿದ್ದಿದ್ದು, ಚಿತ್ರದ ನಿರ್ದೇಶಕ ಸಾಗರ್‌ ಪುರಾಣಿಕ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾಗರ್‌, "ಡೊಳ್ಳು ಸಿನಿಮಾದಲ್ಲಿ ನಾವು ಸೌಂಡ್‌ ಸಿಂಕ್‌ ವಿಧಾನವನ್ನು ಬಳಸಿಲ್ಲ. ಅದಕ್ಕಿಂತ ಹೆಚ್ಚಾಗಿ ಸೌಂಡ್‌ ಸಿಂಕ್‌ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ನಾವು ಅರ್ಜಿಯನ್ನೇ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿದ ಪುರಾವೆಗಳು ನಮ್ಮ ಬಳಿ ಇವೆ. ನಮ್ಮದು ಧ್ವನಿ ಡಬ್‌ ಮಾಡಲಾಗಿರುವ ಸಿನಿಮಾ. ಇದಕ್ಕೆ ಪೂರಕವಾಗಿ ಸಿನಿಮಾವನ್ನು ಡಬ್‌ ಮಾಡಿದ ಸ್ಟುಡಿಯೋದವರು ಮತ್ತು ಬೇರೆಯ ಸಿನಿಮಾಗಳ ಪ್ರಮುಖರೂ ಕೂಡ ಸಾಕ್ಷಿಯಾಗಿದ್ದಾರೆ. ನಾವು ಸೌಂಡ್‌ ಸಿಂಕ್‌ ವಿಭಾಗದಲ್ಲಿ ಅರ್ಜಿ ಸಲ್ಲಿಸದೆ ಇದ್ದರೂ ಆ ವಿಭಾಗದಲ್ಲಿ ನಮ್ಮ ಚಿತ್ರವನ್ನು ಆಯ್ಕೆ ಮಾಡಿದ್ದು ಏಕೆ ಎಂಬುದು ನಮಗೂ ತಿಳಿದಿಲ್ಲ. ನಾವು ಕೂಡ ಆಯ್ಕೆ ಸಮಿತಿಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬುಡಕಟ್ಟು ಮಹಿಳೆ ನಂಚಮ್ಮನ ಕಂಠಸಿರಿಗೆ ಒಲಿದ ರಾಷ್ಟ್ರಪ್ರಶಸ್ತಿ

ಡಬ್ಬಿಂಗ್‌ ಮೂಲಕ ಸಿದ್ಧಗೊಂಡಿರುವ 'ಡೊಳ್ಳು' ಸಿನಿಮಾ ಅತ್ಯುತ್ತಮ ಸೌಂಡ್‌ ಸಿಂಕ್‌ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಚಿತ್ರದ ಸೌಂಡ್‌ ಸಿಂಕ್‌ಗಾಗಿ ಜೋಬಿನ್‌ ಜಯನ್‌ ಅವರಿಗೆ ಪ್ರಶಸ್ತಿ ಘೋಷಣೆಯಾಗಿತ್ತು. ಆಯ್ಕೆ ಸಮಿತಿಯ ಎಡವಟ್ಟಿಗೆ ಖ್ಯಾತ ಸೌಂಡ್‌ ಡಿಸೈನರ್‌ಗಳಾದ ನಿತಿನ್‌ ಲುಕೊಸೆ ಮತ್ತು ರೆಸುಲ್‌ ಪೂಕುಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದರು. 

"ಡೊಳ್ಳು, ಸೌಂಡ್‌ ಸಿಂಕ್‌ ಸಿನಿಮಾ ಅಲ್ಲವೇ ಅಲ್ಲ. ಅದೊಂದು ಡಬ್‌ ಮಾಡಲಾಗಿರುವ ಸಿನಿಮಾ. ಡಬ್‌ ಮಾಡಲಾದ ಚಿತ್ರಕ್ಕೆ ಅತ್ಯುತ್ತಮ ಸೌಂಡ್‌ ಸಿಂಕ್‌ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ವಿಚಾರದಲ್ಲಿ ಪರದೆಯ ಹಿಂದೆ ಏನು ನಡೆದಿದೆ ಎಂಬುದೇ ಅರ್ಥವಾಗುತ್ತಿಲ್ಲ. ಡಬ್‌ ಮಾಡಲಾದ ಚಿತ್ರ ಯಾವುದು ಮತ್ತು ʼಸೌಂಡ್‌ ಸಿಂಕ್‌ʼ ಮಾಡಲಾದ ಚಿತ್ರ ಯಾವುದು ಎಂಬುದರ ವ್ಯತ್ಯಾಸ ತಿಳಿಯದವರೆಲ್ಲ ಪರಿಣಿತರು ಎಂದು ಹೇಳಿಕೊಂಡು ಡಬ್‌ ಮಾಡಿದ ಸಿನಿಮಾಗೆ ಅತ್ಯುತ್ತಮ ʼಸೌಂಡ್‌ ಸಿಂಕ್‌ʼ ಪ್ರಶಸ್ತಿ ನೀಡುತ್ತಿರುವುದನ್ನು ಕಂಡರೆ ಅಯ್ಯೋ ಪಾಪ ಎನ್ನಿಸುತ್ತಿದೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್