
ಚಿತ್ರ: ಮಾನ್ಸೂನ್ ರಾಗ | ನಿರ್ದೇಶನ: ಎಸ್ ರವೀಂದ್ರನಾಥ್ | ತಾರಾಗಣ: ಡಾಲಿ ಧನಂಜಯ, ರಚಿತಾ ರಾಮ್, ಅಚ್ಯುತ್ ಕುಮಾರ್, ಸುಹಾಸಿನಿ, ಶೋಭರಾಜ್, ಯಶ ಶಿವಕುಮಾರ್ | ಭಾಷೆ: ಕನ್ನಡ | ಸಂಗೀತ ನಿರ್ದೇಶನ : ಅನೂಪ್ ಸೀಳಿನ್ | ನಿರ್ಮಾಪಕ : ಎ ಆರ್ ವಿಖ್ಯಾತ್ |
ʼಪುಷ್ಪಕ ವಿಮಾನʼ ಸಿನಿಮಾದ ಮೂಲಕ ಕನ್ನಡದ ಸಿನಿ ಪ್ರೇಕ್ಷಕರನ್ನು ಭಾವನೆಯ ಅಲೆಯಲ್ಲಿ ತೇಲಿಸಿದ್ದ ನಿರ್ದೇಶಕ ಎಸ್ ರವೀಂದ್ರನಾಥ್ ಇದೀಗ ʼಮಾನ್ಸೂನ್ ರಾಗʼದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಎದುರುಗೊಂಡಿದ್ದಾರೆ. ಸುಂದರ ಅನುಭವ ನೀಡುವ ಒಂದೊಳ್ಳೆಯ ಪ್ರೇಮ ಕಥೆ ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎನ್ನಬಹುದು.
ʼಮಾನ್ಸೂನ್ ರಾಗʼ, ತೆಲುಗಿನ ʼಕೇರ್ ಆಫ್- ಕಾಂಚೇರಪಾಲಂʼ ಸಿನಿಮಾದ ರೀಮೇಕ್. ತೆಲುಗಿನಲ್ಲಿ ಈ ಸಿನಿಮಾವನ್ನು ಮಹಾ ವೆಂಕಟೇಶ್ ನಿರ್ದೇಶನ ಮಾಡಿದ್ದರು. ಟಾಲಿವುಡ್ನಲ್ಲಿ ʼಕ್ಲಾಸಿಕಲ್ ಹಿಟ್ʼ ಎನ್ನಿಸಿಕೊಂಡಿದ್ದ ಈ ಚಿತ್ರದ ಕಥೆಯನ್ನು ಇಲ್ಲಿನ ʼನೆಟಿವಿಟಿʼಗೆ ತಕ್ಕ ಹಾಗೆ ರವೀಂದ್ರನಾಥ್ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಈ ಚಿತ್ರದ ʼಒನ್ಲೈನ್ ಸ್ಟೋರಿʼ ಹೇಳುವುದು ಸೂಕ್ತವಲ್ಲ ಎನ್ನುವುದು ನನ್ನ ಭಾವ. ತೆಲುಗಿನ ʼಕಾಂಚೇರಪಾಲಂʼ ಸಿನಿಮಾ ನೋಡಿರದ ನನಗೆ ʼಮಾನ್ಸೂನ್ ರಾಗʼ ಹೆಚ್ಚಾಗಿಯೇ ಆಪ್ತವಾಗುತ್ತ ಹೋಯಿತು. ಚಿತ್ರದಲ್ಲಿ ನಾಲ್ಕು ಭಿನ್ನ ಪ್ರೇಮ ಕಥೆಗಳಿವೆ. ಆದರೆ, ಈ ಎಲ್ಲ ಕಥೆಗಳಿಗೂ ಒಂದೇ ಹಿನ್ನೆಲೆ ಇದೆ. ಅದೇನು ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು. ಖಂಡಿತವಾಗಿಯೂ ಚಿತ್ರಕಥೆ ʼಮಾನ್ಸೂನ್ ರಾಗʼದ ಜೀವಾಳ. 80- 90 ದಶಕದ ಹಿನ್ನೆಲೆಯುಳ್ಳ ಈ ಚಿತ್ರದ ನಿರೂಪಣೆ ಆಮೆ ವೇಗದ್ದು ಎನ್ನಿಸಿದರೂ ಚಿತ್ರದ ಕಥೆ ಮತ್ತು ಪಾತ್ರವರ್ಗದ ಕಾರಣಕ್ಕೆ ʼಮಾನ್ಸೂನ್ ರಾಗʼ ಹಿಡಿಸುತ್ತದೆ. ಪ್ರೇಕ್ಷಕನ ತಾಳ್ಮೆಯನ್ನೂ ಬೇಡುತ್ತದೆ.
ಭಿನ್ನ ಹಿನ್ನೆಲೆಯ (ರಾಜು, ಆಸ್ಮಾ, ಜೋಸೆಫ್...) ಹಲವು ಪಾತ್ರಗಳನ್ನು ಸೃಷ್ಟಿಸುವ ಮೂಲಕ ಜಾತಿ, ಧರ್ಮದ ಕಟ್ಟುಪಾಡುಗಳ ವಿರುದ್ಧ ನಿರ್ದೇಶಕರು ಮೌನದಲ್ಲಿಯೇ ಪ್ರತಿಭಟಿಸುತ್ತಾರೆ. ಸಾಮಾನ್ಯನೊಬ್ಬ ಜಾತಿ, ಧರ್ಮದ ಸುಳಿಯಲ್ಲಿ ಸಿಲುಕಿದರೆ, ಆತನ ಬದುಕು ಯಾವೆಲ್ಲ ತಿರುವುಗಳಿಗೆ ಸಾಕ್ಷಿಯಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದು. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಕೂಡ ನಿರ್ದೇಶಕರು ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರದಲ್ಲಿ ಯೋಚನೆಗೆ ಹಚ್ಚುವ ಸನ್ನಿವೇಶಗಳು, ಸಂಭಾಷಣೆಗಳು ಬಹಳಷ್ಟಿವೆ. ರವೀಂದ್ರನಾಥ್ ಎಲ್ಲಿಯೂ ಉಪದೇಶ ಮಾಡುವ ಅತಿರೇಕ ತೋರಿಲ್ಲ. ಎಲ್ಲವೂ ಸಹಜ ಎಂಬಂತೆ ಸಾಗುತ್ತದೆ.
'ಮಾನ್ಸೂನ್ ರಾಗ'ದ ಬಲ ಎಂದರೆ ಈ ಚಿತ್ರದ ತಾರಾಗಣ ಎನ್ನಬಹುದು. ಕಟ್ಟೆ ಎಂಬ ಭಿನ್ನ ಪಾತ್ರ ನಿಭಾಯಿಸುವ ಮೂಲಕ ಧನಂಜಯ ತಾವೊಬ್ಬ ಪ್ರತಿಭಾವಂತ ಕಲಾವಿದ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೇವಲ ಡಾಲಿಯಂತಹ ಪಾತ್ರಕ್ಕೆ ಮಾತ್ರವಲ್ಲ, ಎಂತಹ ಪಾತ್ರವನ್ನು ನಿಭಾಯಿಸುವುದಕ್ಕೂ ಸೈ ಎಂಬ ಸಂದೇಶ ರವಾನಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ರಚಿತಾ ರಾಮ್ ಆಪ್ತರೆನಿಸುತ್ತಾರೆ. ಈ ಪಾತ್ರ ಲೈಂಗಿಕ ಕಾರ್ಯಕರ್ತೆಯರ ನೈಜ ಬದುಕಿಗೆ ತೀರ ಹತ್ತಿರ ಎನ್ನಿಸದಿದ್ದರೂ, ರಚಿತಾ ರಾಮ್ ಪಾತ್ರ ನಿರ್ವಹಣೆ ಮಾತ್ರ ಅದ್ಭುತ. ರಚಿತಾ ಹಿಂದೆಂದಿಗಿಂತ ಹಿಡಿಸಿದರು.
ಅಚ್ಯುತ್ ಕುಮಾರ್ ʼಮಾನ್ಸೂನ್ ರಾಗʼದ ನಿಜವಾದ ʼಶೋ ಮ್ಯಾನ್ʼ ಎನ್ನಬಹುದು. ತೀರ ಸಹಜ ನಟನೆಯಿಂದಲೇ ಬೆರಗುಗೊಳಿಸುವ ಅವರು ತಾವು ಪ್ರಬುದ್ಧ ನಟ ಎಂಬುದನ್ನು ಇಲ್ಲಿ ಮತ್ತೊಮ್ಮೆ ದೃಢಪಡಿಸಿದ್ದಾರೆ. ಬಹುದಿನಗಳ ಬಳಿಕ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ಸುಹಾಸಿನಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ತೆಲುಗು ಮಿಶ್ರಿತ ಕನ್ನಡವನ್ನು ಕೇಳುವುದೇ ಚೆಂದ. ಶೋಭರಾಜ್ ಅವರದ್ದು ನೆನಪಿನಲ್ಲಿ ಉಳಿಯುವ ಪಾತ್ರ. ಯಶ ಶಿವಕುಮಾರ್, ಬ್ರೋ ಗೌಡ, ವೈನ್ ಸ್ಟೋರ್ ಖ್ಯಾತಿಯ ರಘು ಎಲ್ಲರದ್ದು ಅಚ್ಚುಕಟ್ಟಾದ ನಟನೆ.
ಈ ಸುದ್ದಿ ಓದಿದ್ದೀರಾ? ಮಾನ್ಸೂನ್ ರಾಗ | ಸಿನಿಮಾದ ಲೈವ್ ವಿಮರ್ಶೆ
ಹಿನ್ನೆಲೆ ಸಂಗೀತ ʼಮಾನ್ಸೂನ್ ರಾಗʼದ ಮತ್ತೊಂದು ʼಪ್ಲಸ್ ಪಾಯಿಂಟ್ʼ. ಚಿತ್ರತಂಡ ಹೇಳಿಕೊಂಡಂತೆ ಶೇ. 80ರಷ್ಟು ಚಿತ್ರಕಥೆ ಜಡಿ ಮಳೆಯಲ್ಲೇ ಸಾಗುತ್ತದೆ. ಮಳೆಯ ಅನುಭವ ನೀಡಲು, ಸುಮಧುರವಾದ ಹಿನ್ನೆಲೆ ಸಂಗೀತವನ್ನು ರಚಿಸಲು ಅನೂಪ್ ಸಿಳಿನ್ ಹೆಚ್ಚು ಶ್ರಮ ವಹಿಸಿದ್ದಾರೆ. ಅವರಿಗೆ ಅಭಿನಂದನೆ. ʼಮಾನ್ಸೂನ್ ರಾಗʼದ ʼರೆಟ್ರೋʼ ಶೈಲಿಯ ಪ್ರತಿ ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ. ಎಸ್ ಕೆ ರಾವ್ ಛಾಯಾಗ್ರಾಹಣ ಮೆಚ್ಚುವಂಥದ್ದು. ಸನ್ನಿವೇಶಗಳನ್ನು ಶ್ರೀಮಂತಗೊಳಿಸುವ ಗುರು ಕಶ್ಯಪ್ ಅವರ ಸಂಭಾಷಣೆ ಇಷ್ಟವಾಗುತ್ತದೆ.
ʼಮಾನ್ಸೂನ್ ರಾಗ್ʼ ಒಮ್ಮೆ ನೋಡುವಂತಹ ಸಿನಿಮಾ. ನೋಡುಗರ ತಾಳ್ಮೆ ಬೇಡುತ್ತದೆ. ಚಿತ್ರಕಥೆ, ಪಾತ್ರವರ್ಗ, ಮಳೆಯ ʼಎಫೆಕ್ಟ್ʼ, ಹಿನ್ನೆಲೆ ಸಂಗೀತ ಎಲ್ಲದರ ಕಾರಣಕ್ಕೆ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ನೋಡಿ.