ಈ ಸಿನಿಮಾ | ಸೀತಾ ರಾಮಂ: ಕಣ್ಣಾಲಿಗಳನ್ನು ತುಂಬಿಸುವ ವಿರಳ ಪ್ರೇಮ ಕಥನ

ಒಂದು ಕ್ಷಣ ಈ ಪಾಕಿಸ್ತಾನ, ಭಯೋತ್ಪಾದನೆಯ ಎಳೆಯನ್ನು ಬಿಟ್ಟು ಇವರಿಗೆ ಕತೆ ಹೆಣೆಯಲು ಆಗೊದಿಲ್ಲವೇ ಎನ್ನಿಸುವ ಹೊತ್ತಿಗೆ ಮೂಲಭೂತವಾದದ ಆಚೆಗೆ ಇಲ್ಲಿಯಂತೆ ಗಡಿಯಾಚೆಗಿನ ಆ ಸೀಮೆಯಲ್ಲೂ ಮಾನವೀಯತೆ ಎಂದಿಗೂ ಜೀವಂತವಾಗಿತ್ತು. ಇಂದಿಗೂ ಉಸಿರಾಡುತ್ತಲಿದೆ ಎಂಬುದನ್ನು ನಿರ್ದೇಶಕರು ತೀವ್ರವಾಗಿ ಹೇಳುತ್ತಾರೆ.
sita ramam

ಚಿತ್ರ: ಸೀತಾ ರಾಮಂ | ನಿರ್ದೇಶನ: ಹನು ರಾಘವಪುಡಿ | ತಾರಾಗಣ: ದುಲ್ಕರ್‌ ಸಲ್ಮಾನ್‌, ಮೃನಾಲ್‌ ಠಾಕೂರ್‌, ರಶ್ಮಿಕಾ ಮಂದಣ್ಣ, ಪ್ರಕಾಶ್‌ ರಾಜ್‌, ಸುನಿಲ್‌, ಮುರಳಿ ಶರ್ಮಾ, ಸುಮಂತ್‌ | ಭಾಷೆ: ಮಲಯಾಳಂ, ತೆಲುಗು, ತಮಿಳು, ಹಿಂದಿ | ಸಂಗೀತ ನಿರ್ದೇಶನ : ವಿಶಾಲ್‌ ಚಂದ್ರಶೇಖರ್‌ | ಅವಧಿ: 2 ಗಂಟೆ 3 ನಿಮಿಷ |

ʼಉಸ್ತಾದ್‌ ಹೋಟೆಲ್‌ʼ, ʼಬೆಂಗಳೂರು ಡೇಸ್‌ʼ, ʼಚಾರ್ಲಿʼ, ʼಸಿಐಎʼ, ʼಕಾರವಾನ್‌ʼ, ʼಕಣ್ಣುಂ ಕಣ್ಣುಂ ಕೊಲ್ಲೆಯಡಿತ್ತಾಲ್‌ʼ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ನಟ ದುಲ್ಕರ್‌ ಸಲ್ಮಾನ್‌ ಈಗ ʼಸೀತಾ ರಾಮಂʼ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರನ್ನು ಎದುರುಗೊಂಡಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಸೈನಿಕನ ಪಾತ್ರ ನಿರ್ವಹಿಸಿರುವ ದುಲ್ಕರ್‌, ತಮ್ಮ ನಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ದುಲ್ಕರ್‌ ಸಲ್ಮಾನ್‌ ಮುಖ್ಯಭೂಮಿಕೆ ನಿಭಾಯಿಸಿರುವ ʼಸೀತಾ ರಾಮಂʼ ಸಿನಿಮಾ ಶುಕ್ರವಾರ ತೆರೆ ಕಂಡಿದೆ. ʼಪಡಿ ಪಡಿ ಲೇಚೆ ಮನಸುʼ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ್ದ ತೆಲುಗಿನ ಪ್ರತಿಭಾನ್ವಿತ ನಿರ್ದೇಶಕ ಹನು ರಾಘವಪುಡಿ ಒಂದೊಳ್ಳೆಯ ʼರೊಮ್ಯಾಂಟಿಕ್‌ʼ, ʼಸಸ್ಪೆನ್ಸ್‌ ಡ್ರಾಮಾʼವನ್ನು ತೆರೆಗೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕಾಶ್ಮೀರದ ಕಣಿವೆಯಲ್ಲಿ ಗಡಿ ಕಾಯುವ ರಾಮ ಮತ್ತು ದೂರದ ಹೈದರಾಬಾದ್‌ನಲ್ಲಿ ನೆಲೆಸಿರುವ ಸೀತಾಮಹಾಲಕ್ಷ್ಮೀ. ಚಿತ್ರಕ್ಕೆ ತಿರುವು ನೀಡುವ ಘಟನೆಯೊಂದರ ಬಳಿಕ ಪತ್ರದ ಮೂಲಕ ಶುರುವಾಗುವ ಇವರಿಬ್ಬರ ಪ್ರೀತಿ. ಕೊನೆಗೆ ಅಂತ್ಯವಾಗುವುದು ಅದೇ ಪತ್ರದ ಮೂಲಕ. ಮುಚ್ಚಿದ ಲಕೋಟೆಯಲ್ಲಿ 20 ವರ್ಷಗಳಿಂದ ಬಂಧಿಯಾಗಿರುವ ಪತ್ರವೊಂದು ಇಡೀ ಸಿನಿಮಾವನ್ನು ಹೊತ್ತೊಯ್ಯುವ ರೀತಿ ನಿಜಕ್ಕೂ ರೋಚಕ.

ಚಿತ್ರದಲ್ಲಿ ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಪ್ರಮುಖವಾಗಿ ತೋರಿಸಲಾಗಿದೆ. ಒಂದು ಕ್ಷಣ ಈ ಪಾಕಿಸ್ತಾನ, ಭಯೋತ್ಪಾದನೆಯ ಎಳೆಯನ್ನು ಬಿಟ್ಟು ಇವರಿಗೆ ಕತೆ ಹೆಣೆಯಲು ಆಗೊದಿಲ್ಲವೇ ಎನ್ನಿಸುವ ಹೊತ್ತಿಗೆ ಮೂಲಭೂತವಾದದ ಆಚೆಗೆ ಇಲ್ಲಿಯಂತೆ ಗಡಿಯಾಚೆಗಿನ ಆ ಸೀಮೆಯಲ್ಲೂ ಮಾನವೀಯತೆ ಎಂದಿಗೂ ಜೀವಂತವಾಗಿತ್ತು. ಇಂದಿಗೂ ಉಸಿರಾಡುತ್ತಲಿದೆ ಎಂಬುದನ್ನು ನಿರ್ದೇಶಕರು ತೀವ್ರವಾಗಿ ಹೇಳುತ್ತಾರೆ.

ಚಿತ್ರವನ್ನು 60 ಮತ್ತು 80ರ ದಶಕದ ಹಿನ್ನೆಲೆಯಲ್ಲಿ ಅಚ್ಚುಕಟ್ಟಾಗಿ ಸೆರೆ ಹಿಡಿಯಲಾಗಿದೆ. ಇದಕ್ಕಾಗಿ ಚಿತ್ರದ ಕಲಾ ನಿರ್ದೇಶಕರು ಮತ್ತು ಛಾಯಾಗ್ರಹಕರಿಗೆ ಅಭಿನಂದನೆ ಹೇಳಲೇಬೇಕು. ಈ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌ ಎಂದರೆ ಇಡೀ ಸಿನಿಮಾದ ಸೆರೆ ಹಿಡಿದಿರುವ ಸ್ಥಳಗಳು. ಕತೆಗೆ ತಕ್ಕನಾಗಿ, ಒಮ್ಮೊಮ್ಮೆ ಕತೆಯನ್ನು ಮೀರಿ ಆಕರ್ಷಿಸುವ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವುದು ಚಿತ್ರಕಥೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ. ಈ ಸಿನಿಮಾದ ಪ್ರತಿ ಹಂತದಲ್ಲೂ ಹಾದು ಹೋಗುವ ಸಸ್ಪೆನ್ಸ್‌ಗಳು ಚಿತ್ರಕಥೆಯ ಓಟಕ್ಕೆ ಇನ್ನಷ್ಟು ಮೈಲೇಜ್‌ ನೀಡುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.

60ರ ದಶಕದ ಕತೆಯಲ್ಲಿ ಮಹಿಳೆಯರ ಹಕ್ಕುಗಳ ಕುರಿತು ಮಾತನಾಡುವ ನಿರ್ದೇಶಕರ ಪ್ರಯತ್ನ ಮೆಚ್ಚುಗೆಗೆ ಅರ್ಹ. 60ರ ದಶಕದ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ನೋಡಿದಾಗ ಪ್ರಭಾವಿ ಕುಟುಂಬದ ಹೆಣ್ಣು ಮಗಳೊಬ್ಬಳು ತೀರಾ ಸಾಮಾನ್ಯನನ್ನು ಪ್ರೀತಿಸಿ ಆತನ ಜೊತೆ ಬದುಕು ಕಟ್ಟಿಕೊಳ್ಳಲು ಹೊರಟು ಬಿಡುತ್ತಾಳೆ ಎಂದಾಗ ಆಕೆ ಅಥವಾ ಆತ ಎದುರುಗೊಳ್ಳಬೇಕಿದ್ದ ಸವಾಲುಗಳು ಗಂಭೀರವಾದವು ಮತ್ತು ಘೋರವಾದವು. ಆದರೆ, ಈ ಚಿತ್ರದಲ್ಲಿ ಅಂತಹ ಸನ್ನಿವೇಶಗಳು ಅನಿವಾರ್ಯ ಎನ್ನಿಸಿದರೂ ಆ ಅಂಶಗಳನ್ನು ನಿರ್ದೇಶಕರು ಕಡೆಗಣಿಸಿದ್ದು ಯಾಕೆ ಎಂಬುದು ತಿಳಿಯಲಿಲ್ಲ. 

ದುಲ್ಕರ್‌ ಸಲ್ಮಾನ್‌, ಆತನ ಬಗ್ಗೆ ಹೇಳುವುದಕ್ಕೇನಿದೆ. ದುಲ್ಕರ್‌ ರಾಮನಾಗಿ ಜೀವಿಸಿದ್ದಾರೆ ಎಂದರೆ ತಪ್ಪಾಗಲಾರದು. ನಟಿ ಮೃನಾಲ್‌ ಠಾಕೂರ್‌ ದುಲ್ಕರ್‌ಗೆ ಟಕ್ಕರ್‌ ಕೊಡುವಷ್ಟರ ಮಟ್ಟಿಗೆ ಸೀತಾ ಮಹಾಲಕ್ಷ್ಮಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿರುವ ಪತ್ರ ಚಿತ್ರದ ಕೇಂದ್ರ ಬಿಂದುವಾದರೆ, ಆ ಪತ್ರವನ್ನು ಹೊತ್ತು ಸಾಗುವ ರಶ್ಮಿಕಾ ಅವರ ಅಭಿನಯ ಹಿಂದಿಗಿಂತ ಭಿನ್ನವಾಗಿದೆ. ಕಥೆಯಲ್ಲಿ ಆಗಾಗ ಮಿಂಚಿ ಮರೆಯಾಗುವ ಹೋಗುವ ಪ್ರಕಾಶ್‌ ರಾಜ್‌, ಸುನಿಲ್‌, ಮುರಳಿ ಶರ್ಮಾ, ಸುಮಂತ್‌, ಸಚಿನ್‌ ಖೇಡೆಕರ್‌ ಅವರುಗಳ ಅಭಿನಯವೂ ಉತ್ತಮವಾಗಿದೆ.

ಚಿತ್ರದಲ್ಲಿ ಚೆಂದದ ಮೆಲೋಡಿ ಹಾಡುಗಳಿಗೇನೂ ಕೊರತೆಯಿಲ್ಲ. ನೋಡುಗರ ಅಂತರಾಳವನ್ನು ಸೀತಾ-ರಾಮನೇ ಆವರಿಸಿಕೊಂಡಾಗ ಹಾಡುಗಳು ಸ್ಮೃತಿ ಪಟಲದಲ್ಲಿ ಉಳಿಯುವುದೆಲ್ಲಿಂದ? ಗುನುಗುವ ಮಟ್ಟಿನ ಹಾಡುಗಳು ಇಲ್ಲವಾದರೂ ಮುದ ನೀಡುವ ಹಿನ್ನೆಲೆ ಸಂಗೀತವಿದೆ. ಚೆಂದವಾಗಿ ಸಂಗೀತ ಸಂಯೋಜಿಸಿದ ವಿಶಾಲ್‌ ಚಂದ್ರಶೇಖರ್‌ ಅವರನ್ನು ಮೆಚ್ಚಿಕೊಳ್ಳಬೇಕು.

ಖಂಡಿತಾವಾಗಿಯೂ ಸೀತಾ ರಾಮಂ ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ. ಕೊನೆಯಲ್ಲಿ ನಿಮ್ಮ ಕಣ್ಣಾಲಿಗಳು ಕೂಡ ತುಂಬಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ. ಈ ವಿಶೇಷ ಸೂಚನೆಗೆ ನಿನ್ನೆ ನಡೆದ ಘಟನೆ ಕಾರಣ. ಸಿನಿಮಾ ಕ್ಲೈಮ್ಯಾಕ್ಸ್‌ ಮುಗಿದು ಥಿಯೇಟರ್‌ನಲ್ಲಿ ಬಲ್ಬುಗಳು ಹೊತ್ತಿಕೊಳ್ಳುವ ಹೊತ್ತಿಗೆ ಎಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ನನ್ನ ಪಕ್ಕದ ಸಾಲಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಅಳುತ್ತಲೇ ʼಅಲಾ ಎಲಾ ಚಂಪೇಸ್ತಾರುʼ (ಅದು ಹೇಗೆ ಸಾಯಿಸಿ ಬಿಡ್ತಾರೆ?) ಎಂದು ತನ್ನ ಸ್ನೇಹಿತರ ಬಳಿ ಬಹು ಭಾವುಕಳಾಗಿ ಕೇಳಿದಳು. ಆ ಕ್ಷಣವೇ ಟ್ವೀಟ್‌ ಮಾಡಿ ದುಲ್ಕರ್‌ ಸಲ್ಮಾನ್‌ಗೊಂದು ಧನ್ಯವಾದ ತಿಳಿಸಿದೆ.

ಸಾಧ್ಯವಾದರೆ ಸೀತಾ ರಾಮಂ ನೋಡಿ. ಮಲಯಾಳಂ ಬರುವವರು ಮಲಯಾಳಂನಲ್ಲೇ ಸಿನಿಮಾ ನೋಡಿ. ಒಂದು ವೇಳೆ ನಿಮಗೆ ತೆಲುಗು ಅರ್ಥವಾಗುವುದಾದರೆ ತೆಲುಗಿನಲ್ಲೇ ಈ ಸಿನಿಮಾವನ್ನು ನೋಡಿ ಯಾಕೆಂದರೆ ನಿರ್ದೇಶಕರು ತೆಲುಗಿನವರಾಗಿರುವುದರಿಂದ ಅವರ ನಿರೂಪಣೆ ತೀವ್ರವಾಗಿ ಮನ ಮುಟ್ಟುತ್ತದೆ. 

ನಿಮಗೆ ಏನು ಅನ್ನಿಸ್ತು?
6 ವೋಟ್