ʻಶಾಬಾಷ್‌ ಮಿಥುʼ ತೆರೆಗೆ ಸಿದ್ಧ | ಸಾಧಾರಣ ಹಳ್ಳಿ ಹುಡುಗಿ ಕ್ರಿಕೆಟ್‌ ತಾರೆಯಾದ ರೋಚಕ ಕತೆ

Shabash mithu
  • ಜುಲೈ 15ರಂದು ʼಶಾಬಾಷ್‌ ಮಿಥುʼ ತೆರೆಗೆಸಿದ್ಧ
  • ಮಿಥಾಲಿ ಪಾತ್ರದಲ್ಲಿ ಮಿಂಚಿದ ತಾಪ್ಸಿ ಪನ್ನು

ಭಾರತೀಯ ಕ್ರೀಡಾಪಟು, ಅದರಲ್ಲೂ ಕ್ರಿಕೆಟಿಗರ ಜೀವನಾಧಾರಿತ ಕಥೆಗಳು ಆಗಾಗ ಬಯೋಪಿಕ್‌ ರೂಪಪಡೆದು ತೆರೆಗೆ ಅಪ್ಪಳಿಸುತ್ತಿರುತ್ತವೆ. ಈ ಹಿಂದೆ ತೆರೆಕಂಡಿದ್ದ ಕ್ರೀಡಾಪಟುಗಳ ಜೀವನಾಧಾರಿತ 'ಧೋನಿ', 'ದಂಗಲ್‌', 'ಮೇರಿ ಕಾಮ್‌', '83' ಸಿನಿಮಾಗಳು ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಅದೇ ರೀತಿಯಲ್ಲಿ ಇದೀಗ ಮತ್ತೊಂದು ಖ್ಯಾತ ಕ್ರೀಡಾಪಟುವಿನ ಬದುಕಿನ ಕತೆ ಸಿನಿಮಾ ರೂಪ ಪಡೆದುಕೊಂಡಿದೆ.

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಜೀವನದ ಕಥೆಯನ್ನಾಧರಿಸಿ ʼಶಾಬಾಷ್‌ ಮಿಥುʼ ಸಿನಿಮಾ ಸಿದ್ಧಗೊಂಡಿದೆ. ಹಳ್ಳಿಯ ಮಾಮೂಲಿ ಹುಡುಗಿಯೊಬ್ಬಳು ಕ್ರಿಕೆಟ್‌ ಜಗತ್ತಿನಲ್ಲಿ ದಶಕಗಳ ಕಾಲ ತಾರೆಯಾಗಿ ಮೆರೆದ ರೋಚಕ ಕಥೆಯನ್ನು ತೆರೆಗೆ ಅಳವಡಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶ್ರೀಜಿತ್‌ ಮುಖರ್ಜಿ. ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ಅವರು ಮಿಥಾಲಿ ರಾಜ್‌ ಪಾತ್ರದಲ್ಲಿ ನಟಿಸಿದ್ದಾರೆ. 

Eedina App

ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್‌ ಮಿಥಾಲಿ ರಾಜ್‌ ಕ್ರಿಕೆಟ್‌ ಬದುಕಿನ ಕಿರುನೋಟ ಪರಿಚಯಿಸಿತ್ತು. ಹಳ್ಳಿಯ ಸಾಧಾರಣ ಹುಡುಗಿ ಮಿಥಾಲಿಗೆ ಆಕಸ್ಮಿಕವಾಗಿ ಎದುರಾಗುವ ಕೋಚ್‌, ಆತನ ಪ್ರೇರಣೆಯಿಂದ ಮೈದಾನಕ್ಕಿಳಿಯುವ ಮಿಥಾಲಿ ಸತತ ಪರಿಶ್ರಮದಿಂದ ಭಾರತೀಯ ಕ್ರಿಕೆಟ್‌ ತಂಡದ ನಾಯಕಿಯಾಗುತ್ತಾಳೆ. ಭಾರತೀಯ ಕ್ರಿಕೆಟ್‌ ತಂಡವನ್ನು ಮುನ್ನಡೆಸುವುದಲ್ಲದೆ, ಕ್ರೀಡಾ ಜಗತ್ತಿನ ತಾರತಮ್ಯ ಮೆಟ್ಟಿ ನಿಲ್ಲುತ್ತಾಳೆ. ಕ್ರಿಕೆಟ್‌ ಕೇವಲ ಪುರುಷರ ಸ್ವತ್ತಲ್ಲ ಎಂಬದನ್ನು ಸಾರಿ ಹೇಳುವ ಪ್ರಯತ್ನ ಮಾಡುತ್ತಾಳೆ. ಮಿಥಾಲಿ ಅವರ ಬಾಲ್ಯ ಮತ್ತು ಅವರ ಕ್ರಿಕೆಟ್‌ ಬದುಕಿನ ಸುತ್ತ ʼಶಾಬಾಷ್‌ ಮಿಥುʼ ಕತೆ ಹೆಣೆಯಲಾಗಿದೆ. 

AV Eye Hospital ad

ಟೀಸರ್‌ ಮತ್ತು ಟ್ರೈಲರ್‌ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ʼಶಾಬಾಷ್‌ ಮಿಥುʼ ಸಿನಿಮಾ ಜುಲೈ 15ರಂದು ತೆರೆ ಬರುತ್ತಿದೆ. ಶ್ರೀಜಿತ್‌ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ವಿಯಾಕಾಮ್‌ 18 ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಅಮಿತ್‌ ತ್ರಿವೇದಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ವಿಕ್ರಾಂತ್ ರೋಣ | ಅಂಕುಡೊಂಕು ದಾರಿಯಲ್ಲಿ ಫಕೀರನಾಗಿ ಬಂದ ನಿರೂಪ್‌ ಭಂಡಾರಿ

23 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ ತಂಡದ ಭಾಗವಾಗಿದ್ದ ಮಿಥಾಲಿ 4 ಬಾರಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ ಮಿಥಾಲಿ ಅವರದ್ದು, ಏಕದಿನ ಪಂದ್ಯಾವಳಿಯಲ್ಲಿ ಸತತವಾಗಿ 7 ಅರ್ಧಶತಕಗಳನ್ನು ಬಾರಿಸಿದ ದಾಖಲೆಯೂ ಮಿಥಾಲಿ ಅವರ ಹೆಸರಿನಲ್ಲಿದೆ.   

ನಿಮಗೆ ಏನು ಅನ್ನಿಸ್ತು?
0 ವೋಟ್
eedina app