ಬಹುಭಾಷಾ ನಟ ಪ್ರತಾಪ್‌ ಪೋಥೆನ್‌ ನಿಧನ

prathap-pothen
  • ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ
  • ಚೆನ್ನೈನ ಫ್ಲ್ಯಾಟ್‌ ಒಂದರಲ್ಲಿ ಶವವಾಗಿ ಪತ್ತೆ

ಬಹುಭಾಷಾ ನಟ ಪ್ರತಾಪ್‌ ಪೋಥೆನ್‌ ನಿಧನರಾಗಿದ್ದಾರೆ. 69 ವರ್ಷದ ಹಿರಿಯ ನಟ ಚೆನ್ನೈನ ಕಿಲ್‌ಪೌಕ್‌ ಗಾರ್ಡನ್‌ ರಸ್ತೆಯಲ್ಲಿ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಯೋಸಹಜ ಸಮಸ್ಯೆಯಿಂದ ಮೃತ ಪಟ್ಟಿರುವುದಾಗಿ ಕಿಲ್‌ಪೌಕ್‌ ಠಾಣೆಯ ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಕೇರಳ ಮೂಲದ ಪ್ರತಾಪ್‌ ಪೋಥೆನ್‌ 1978ರಲ್ಲಿ ತೆರೆಕಂಡ 'ಆರವಂ' ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ʼಥಾಕರʼ, ʼಲಾರಿʼ, ʼಚಮರಂʼ ಸೇರಿದಂತೆ ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಅವರು, ನಂತರದ ದಿನಗಳಲ್ಲಿ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲೂ ಮಿಂಚಿದರು. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರತಾಪ್‌ 12 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕತೆ, ಚಿತ್ರಕತೆ ಮತ್ತು ಚಿತ್ರ ನಿರ್ಮಾಣ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಸಕಲ ಕಲಾ ವಲ್ಲಭ ಎನ್ನಿಸಿಕೊಂಡಿದ್ದರು. ಪ್ರತಾಪ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ʼಮೀಂದುಂ ಒರು ಕಾದಲ್‌ ಕಥೈʼ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಅತ್ಯುತ್ತಮ ನಟನೆ ಮತ್ತು ನಿರ್ದೇಶನಕ್ಕಾಗಿ ಮೂರು ಫಿಲ್ಮ್‌ಫೇರ್‌ ಪ್ರಶಸ್ತಿಗಳು ಪ್ರತಾಪ್‌ ಅವರನ್ನು ಅರಸಿ ಬಂದಿವೆ. ಪ್ರತಾಪ್‌ ಕೊನೆಯದಾಗಿ ʼಸಿಬಿಐ5 ದಿ ಬ್ರೇನ್‌ʼ ಚಿತ್ರದಲ್ಲಿ ನಟಿಸಿದ್ದರು. 

ಈ ಸುದ್ದಿ ಓದಿದ್ದೀರಾ? ಖ್ಯಾತ ಗಾಯಕ ದಲೇರ್‌ ಮೆಹಂದಿ ಬಂಧನ

ಸ್ಟಾರ್‌ ನಟನಾಗಿ ಮೆರೆದ ಪ್ರತಾಪ್‌ ವೈಯಕ್ತಿಕ ಬದುಕಿನಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದರು. 1985ರಲ್ಲಿ ತಮಿಳಿನ ಖ್ಯಾತ ನಟಿ ರಾಧಿಕಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ವೈಮನಸ್ಸಿನ ಬೆನ್ನಲ್ಲೇ ಈ ಜೋಡಿ ವಿಚ್ಛೇದನೆ ಪಡೆದುಕೊಂಡು ದೂರವಾಗಿತ್ತು. ಇದಾದ 5 ವರ್ಷಗಳ ಬಳಿಕ 1991ರಲ್ಲಿ ಕಾರ್ಪೋರೇಟ್‌ ಕ್ಷೇತ್ರದ ಅಮಲಾ ಸತ್ಯನಾಥ್‌ ಅವರೊಂದಿಗೆ ವಿವಾಹವಾದರು. ಈ ಜೋಡಿಗೆ ಹೆಣ್ಣು ಮಗು ಕೂಡ ಜನಿಸಿತು. 22 ವರ್ಷಗಳ ಜೊತೆಯಾಗಿದ್ದ ಅಮಲಾ ಮತ್ತು ಪ್ರತಾಪ್‌ ಜೋಡಿ 2012ರಲ್ಲಿ ವಿಚ್ಛೇದನ ಪಡೆದುಕೊಂಡಿತು.

ಅಮಲಾ ಅವರಿಂದ ವಿಚ್ಛೇದನ ಪಡೆದ ಬಳಿಕ ಚೆನ್ನೈನ ತಮ್ಮ ಖಾಸಗಿ ಫ್ಲ್ಯಾಟ್‌ನಲ್ಲಿ ದಿನ ಕಳೆಯುತ್ತಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app